ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸೂಚನೆ

ಬಾಗಲಕೋಟೆ: ಏ. 29 ಮತ್ತು 30 ರಂದು ಎರಡು ದಿನಗಳ ಕಾಲ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಬಾಗಲಕೋಟೆ ಮತ್ತು ಜಮಖಂಡಿ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಈ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ 7 ಹಾಗೂ ಜಮಖಂಡಿ ನಗರದಲ್ಲಿ 5 ಸೇರಿ 12 ಪರೀಕ್ಷಾ ಕೇಂದ್ರಗಳಲ್ಲಿ 5671 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳು ಎರಡು ಅಧಿಯಲ್ಲಿ ನಡೆಯದ್ದು, ಪರೀಕ್ಷೆಯಲ್ಲ ಅಕ್ರಮಕ್ಕೆ ಅವಕಾಶ ಕೊಡದೆ ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ವೀಕ್ಷಕರು, ಪಶ್ನೆ ಪತ್ರಿಕೆ ಪಾಲಕರು ಹಾಗೂ ತ್ರಿಸದಸ್ಯ ಸಮಿತಿ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಅರಿತುಕೊಂಡು ಸುಸೂತ್ರವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುವ ಜವಾಬ್ದಾರಿ ಮಾರ್ಗಾಧಿಕಾರಿಗಳ ಮೇಲಿದೆ. ಪರೀಕ್ಷಾ ದಿನದಂದು ಜಿಲ್ಲಾ ಖಜಾನೆ ಹಾಗೂ ಜಮಖಂಡಿ ಉಪ ಖಜಾನೆಯಿಂದ ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್‌ಗಳನ್ನು ಪೊಲೀಸ್ ಎಸ್ಕಾರ್ಟ್‌ನೊಂದಿಗೆ ತಲುಪಿಸುವ ಕೆಲಸವಾಗಬೇಕು. ಆಯಾ ವಿಷಯ ಪರೀಕ್ಷೆಯಲ್ಲಿ ಕೊಠಡಿ ಮೇಲ್ವಿಚಾರಕರನ್ನು ಲಾಟರಿ ಮೂಲಕ ಆಯ್ಕೆ ಮಾಡಬೇಕು. ಆಯ್ಕೆ ಸಮಯದಲ್ಲಿ ವೀಕ್ಷಕರು ತಪ್ಪದೇ ಉಪಸ್ಥಿತರಿದ್ದು, ಲಾಟರಿ ಪ್ರಕ್ರಿಯೆಯನ್ನು ಸಿಸಿಟಿವಿಯಲ್ಲಿ ರಿಕಾರ್ಡ್ ಮಾಡಬೇಕು. ಪರೀಕ್ಷಾ ವೀಕ್ಷಕರಾಗಿ ನೇಮಕಗೊಂಡವರು ಜಿಲ್ಲಾಧಿಕಾರಿಗಳ ಪ್ರತಿನಿಧಿಗಳಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಬಾರಿ ಪರೀಕ್ಷಾರ್ಥಿಗಳ ಹೆಸರು ಮುದ್ರಣವಾಗಿರುವ ಓಎಂಆರ್ ಶೀಟ್ ನೀಡಲಾಗುತ್ತಿದೆ. ಕಳೆದ ಸಿಇಟಿ ಪರೀಕ್ಷೆಯಲ್ಲಿ ಒಂದು ಕೊಠಡಿಗೆ 16 ಪರೀಕ್ಷಾರ್ಥಿಗಳಿದ್ದರೆ, ಈ ಬಾರಿ ಪ್ರತಿ ಕೊಠಡಿಗೆ 20 ಜನ ಪರೀಕ್ಷಾರ್ಥಿಗಳು ಇರಲಿದ್ದಾರೆ. ಪ್ರತಿಯೊಂದು ಪರೀಕ್ಷಾ ಕೊಠಡಿಗಳಿಗೆ ಸಿಸಿಟಿವಿ ಕಡ್ಡಾಯವಾಗಿ ಇರಬೇಕು ಎಂದರು.

ಸಿದ್ಧತೆ ಹಾಗೂ ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳ ಕರ್ತವ್ಯಗಳ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ ಪೂಜಾರಿ ವಿವರಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎಚ್. ಗೋನಾಳ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಾರಕೇರ, ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ಶಿರೂರ, ತಾಪಂ ಇಒ ವೈ.ಕೆ. ಬಸರಿಗಿಡದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪರೀಕ್ಷಾ ವೇಳಾ ಪಟ್ಟಿ
ಸಿಇಟಿ ಪರೀಕ್ಷೆಗಳು ಎರಡು ಅವಧಿಯಲ್ಲಿ ನಡೆಯಲಿದ್ದು, ಏ.29ರಂದು ಬೆಳಗ್ಗೆ 10.30 ರಿಂದ 11.50ರವರೆಗೆ ಜೀವಶಾಸ, ಮಧ್ಯಾಹ್ನ 2.30 ರಿಂದ 3.50ರವರೆಗೆ ಗಣಿತ ಹಾಗೂ ಏ.30ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ, ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾಯನಶಾಸ ವಿಷಯಗಳ ಪರೀಕ್ಷೆ ನಡೆಯಲಿವೆ.

ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ ?
ಬಾಗಲಕೋಟೆ ನಗರದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿದ್ಯಾಗಿರಿಯ ಬಿವಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು, ಶಂಕ್ರಪ್ಪ ಸಕ್ರಿ ಪದವಿ ಪೂರ್ವ ಕಾಲೇಜು, ನವನಗರದ ಎಸ್.ಬಿ. ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜು, ಅಂಜುಮನ್ ಪದವಿ ಪೂರ್ವ ಕಾಲೇಜು.

ಜಮಖಂಡಿ ನಗರದ ಬಿ.ಎಚ್.ಎಸ್ ಆ್ಯಂಡ್ ಟಿ.ಜಿ.ಪಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಕು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊನ್ನೂರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಕೆ. ತುಂಗಳ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ.

ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ
ಜಿಲ್ಲೆಯಲ್ಲಿ ಏ. 29 ಮತ್ತು 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ವರೆಗೆ ನಿಷೇಧಿತ ಪ್ರವೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಆದೇಶ ಹೊರಡಿಸಿದ್ದಾರೆ.

ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾರ್ಥಿಗಳನ್ನು ಹಾಗೂ ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಸಾರ್ವಜನಿಕರಿಗೆ ಒಳ ಪ್ರವೇಶಿಸಲು ಅವಕಾಶವಿಲ್ಲ. 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಝರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಬೇಕು ಎಂದು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *