ಕನ್ನಡಕ್ಕೊಬ್ಬನೇ ರಾಜಕುಮಾರ

ಬಾಗಲಕೋಟೆ: ಅಭಿನಯಿಸುವ ಪಾತ್ರಕ್ಕೆ ಜೀವ ನೀಡಿ ಅಭಿಮಾನಿಗಳ ಹೃದಯದಲ್ಲಿ ನೆಲೆ ನಿಂತವರು ಡಾ.ರಾಜ್‌ಕುಮಾರ್. ಕನ್ನಡಕ್ಕೆ ಒಬ್ಬನೇ ರಾಜ್‌ಕುಮಾರ್ ಎಂದು ಜಿ.ಪಂ. ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ರಾಜ್‌ಕುಮಾರ್ ಅವರ 91ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್‌ಕುಮಾರ್ ಕೇವಲ ನಟನಾಗಿರದೆ ಅಧ್ಯಾತ್ಮ ಚಿಂತನೆಗಳುಳ್ಳ ಉತ್ತಮ ಯೋಗ ಪಟುವಾಗಿದ್ದರು. ಇಂತಹ ವಿಶೇಷ ವ್ಯಕ್ತಿತ್ವ ಹೊಂದಿದ್ದ ಅವರು ಗಾಯಕರಾಗಿ ಕೂಡ ಛಾಪು ಮೂಡಿಸಿದ್ದರು. ಅವರು ಹಾಡಿದ ಹಾಡುಗಳಲ್ಲಿ ಅದರಲ್ಲೂ ಆಧ್ಯ್ಯಾತ್ಮಿಕ ಹಿನ್ನೆಲೆಯುಳ್ಳ ಹಾಡು ನಾದಮಯ ಈ ಲೋಕವೆಲ್ಲ ಎಂಬ ಹಾಡಿಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು ಎಂದರು.

ಡಾ.ರಾಜ್ ಕಡಿಮೆ ಶಿಕ್ಷಣ ಪಡೆದರೂ ನಾಡು, ನುಡಿಗಾಗಿ ಅವರು ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರ್ ಪದವಿ ಒಲಿದು ಬಂದಿತು. ಅಲ್ಲದೆ, ಅತ್ಯುನ್ನತ ದಾದಾಸಾಹೇಬ ಪಾಲ್ಕೆ ಪ್ರಶಸ್ತಿ ಪಡೆದು ದೇಶವೇ ಕನ್ನಡನಾಡಿನತ್ತ ತಿರುಗಿ ನೋಡುವಂತೆ ಮಾಡಿದರು. ನಾವು ಮಾಡುವ ಕಾರ್ಯ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಪ್ರಾಮಾಣಿಕ, ನಿಷ್ಠೆಯಿಂದ ಮಾಡಿದ್ದಾದರೆ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟವರು ಡಾ.ರಾಜ್‌ಕುಮಾರ್ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ, ಬಾಗಲಕೋಟೆ ಜತೆ ಡಾ.ರಾಜ್‌ಕುಮಾರ್ ಅವರಿಗೆ ಅವಿನಾಭಾವ ಸಂಬಂಧವಿದ್ದು, ಇದೇ ಜಿಲ್ಲೆಯ ಬೀಳಗಿಯ ಸನಾದಿ ಅಪ್ಪಣ್ಣ ಚಿತ್ರವನ್ನು ಅಭಿನಯಿಸಿ ಮತ್ತು ಜಿಲ್ಲೆಯ ಹೆಸರಾಂತ ನಾಟಕಕಾರ ಪಿ.ಬಿ.ದುತ್ತರಗಿ ಅವರ ಸಂಪತ್ತಿಗೆ ಸವಾಲ್ ಚಿತ್ರಗಳಲ್ಲಿ ನಟಿಸಿ ಬಾಗಲಕೋಟೆಗೂ ತಮ್ಮ ಕಲಾ ಕುಸುಮ ಅರ್ಪಿಸಿದ್ದಾರೆ ಎಂದರು.

ಡಾ.ರಾಜ್‌ಕುಮಾರ್ ಅಭಿಮಾನಿ ಹಾಗೂ ಅವರನ್ನು ಸಮೀಪದಿಂದ ಕಂಡ 93 ವರ್ಷದ ವಯೋವೃದ್ಧೆ ಪಾರ್ವತಿಬಾಯಿ ಕಾಟವಾ ಅಭಿಪ್ರಾಯ ಹಂಚಿಕೊಂಡರು. ತೋಟಗಾರಿಕೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಖಜಾನೆ ಇಲಾಖೆಯ ಬನ್ನಿದಿನ್ನಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *