ಈಶ್ವರಪ್ಪ ಪೆದ್ದ, ರಾಜಕೀಯ ಗೊತ್ತಿಲ್ಲ

ಬಾಗಲಕೋಟೆ: ನೋ ರಿಯಾಕ್ಷನ್ ಟು ಮಿಸ್ಟರ್ ಈಶ್ವರಪ್ಪ. ಅವನೊಬ್ಬ ಪೆದ್ದ, ಅವನಿಗೆ ನಾನು ಉತ್ತರ ಕೊಡಲ್ಲ, ಅವನಿಗೆ ರಾಜಕೀಯ ಗೊತ್ತಿಲ್ಲ.

ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ ಹೀಗೆ ಗರಂ ಆಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಜಿಲ್ಲೆಯ ಬಾದಾಮಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ದಲಿತ, ಹಿಂದುಳಿದವರಗೆ ಸಿದ್ದರಾಮಯ್ಯ ಏನೂ ಮಾಡಿಲ್ಲ, ಬಾಗಲಕೋಟೆಯಲ್ಲಿ ಸಿದ್ದು ಆಟ ನಡೆಯಲ್ಲ ಎಂದು ಎರಡು ದಿನಗಳ ಹಿಂದೆ ಬಾದಾಮಿಯಲ್ಲಿ ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಗರಂ ಆದರು ಮಾಜಿ ಸಿಎಂ ನಾನು ಸತ್ಯ ಹೇಳುತ್ತೇನೆ, ಈಶ್ವರಪ್ಪ ಬರೀ ಸುಳ್ಳು ಹೇಳ್ತಾನೆ. ವಾಟ್ ಈಸ್ ಈಶ್ವರಪ್ಪ ? ಅವನಿಗೂ ಬಾಗಲಕೋಟೆಗೂ ಏನು ಸಂಬಂಧ. ನಾನು ಬಾದಾಮಿ ಕ್ಷೇತ್ರ ಪ್ರತಿನಿಧಿಸುತ್ತಿದ್ದೇನೆ. ಇಲ್ಲಿ ಈಶ್ವರಪ್ಪನ ಕೊಡುಗೆ ಏನು. ಈಶ್ವರಪ್ಪನಿಗೆ ಇಲೆಕ್ಷನ್ ಇನ್ಚಾರ್ಜ್ ಕೊಟ್ಟಿದ್ದಾರಷ್ಟೆ. ಅದಕ್ಕೆ ಬಂದು ಮಾತಾಡಿ ಹೋಗಬೇಕಲ್ಲ, ಅದಕ್ಕೆ ಮಾತಾಡುತ್ತಾನೆ. ಬಿಜೆಪಿಯಲ್ಲಿ ಗುಲಾಮಿರಿ ನೋಡಿ, ಅಲ್ಲಿ ಇರೋದು ಭಾರಿ ಕಷ್ಟ. ಹೀಗೆಲ್ಲ ಮಾತಾಡುತ್ತಲೇ ಇರಬೇಕು. ಮಾತನಾಡಲಿಲ್ಲ ಅಂದ್ರೆ ಇವರನ್ನು ಹೊಡದಾಕಿ ಬಿಡ್ತಾರೆ ಎಂದು ಲೇವಡಿ ಮಾಡಿದರು.

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿ ವಿಷಯವಾಗಿ ಮಾತನಾಡಿದ ಮಾಜಿ ಸಿಎಂ, ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಸೀಟು ಹೊಂದಾಣಿಕೆ ಬಗ್ಗೆ ಇನ್ನೂ ಮಾತನಾಡಿಲ್ಲ ಎಂದರು.

ದೇಶದಲ್ಲಿ ಬಿಜೆಪಿ ಸರ್ಕಾರ ಇರಲ್ಲ
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ದೇಶದಲ್ಲಿ ಇರಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಸ್ವಲ್ಪಮಟ್ಟಿಗೆ ನೆಲೆ ಇರೋದು ಕರ್ನಾಟಕದಲ್ಲಿ ಮಾತ್ರ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕದ ಕಡೆ ಜಾಸ್ತಿ ಲಕ್ಷ್ಯ ವಹಿಸಿದ್ದಾರೆ. ಆದರೆ, ಅವರಿಗೆ ಕರ್ನಾಟಕದಲ್ಲಿ ಸೀಟ್ ಬರೋದೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಐದು ಸೀಟೂ ಬರಲ್ಲ. ನಾವು ಕನಿಷ್ಠ ಇಪ್ಪತ್ತೆರಡರಿಂದ ಇಪ್ಪತ್ಮೂರು ಸೀಟು ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಎಚ್ಡಿಕೆ ಸ್ವಂತ ಬಲದಲ್ಲಿ ಸಿಎಂ ಆಗಲ್ಲ ಅಂದಿದ್ದೆ
ದೇಶದಲ್ಲಿ ಅವರಪ್ಪನಾಣೆಗೂ ಬಿಜೆಪಿ ಬರಲ್ಲ ಅಂತಿದ್ದೀರಿ, ಹಿಂದೆ ಕುಮಾರಸ್ವಾಮಿಗೂ ಹೀಗೆ ಹೇಳಿದ್ದೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಸಿಎಂ ಆಗಲ್ಲ ಅಂತ ಹೇಳಿದ್ದೆ. ಹಾಗೆಯೇ ಕುಮಾರಸ್ವಾಮಿ ಸ್ವಂತ ಬಲದ ಮೇಲೆ ಆಗಲ್ಲ ಎಂದು ಹೇಳಿದ್ದೆ, ನಾ ಹೇಳಿದ್ದು ಸರಿಯಲ್ವಾ ಎಂದು ಪ್ರಶ್ನಿಸಿದರು.

ಹಂಡ್ರೆಡ್ ಪರ್ಸೆಂಟ್ ಬಾಗಲಕೋಟೆ ಗೆಲ್ಲುತ್ತೇವೆ
ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರಕ್ಕೆ ಟಿಕೆಟ್‌ಗೆ ಸಾಕಷ್ಟು ಪೈಪೋಟಿ ಇದೆ. ಲಿಂಗಾಯತ, ಕುರುಬ, ಮುಸ್ಲಿ, ರೆಡ್ಡಿ ಸೇರಿ ಅನೇಕ ಸಮುದಾಯಗಳ ಮುಖಂಡರು ಇದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಸೂಕ್ತ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ. ಕ್ಷೇತ್ರವನ್ನು ಹಂಡ್ರೆಡ್ ಪರ್ಸೆಂಟ್ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.