ಅರಣ್ಯ ಜಾಗ ಕಬಳಿಕೆ ಆರೋಪ

ಅಶೋಕ ಶೆಟ್ಟರ ಬಾಗಲಕೋಟೆ

ಜಿಲ್ಲೆಯಲ್ಲಿ 315 ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳಿದ್ದು, ಕೃಷಿ ಚಟುವಟಿಕೆ, ನಿವೇಶನ, ಮನೆಗಳ ನಿರ್ಮಾಣ ಸೇರಿ ಒಟ್ಟು ಒಟ್ಟು 125 ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿ ಮಾಡಲಾಗಿದೆ.

ಒತ್ತುವರಿ ಮಾಡಿರುವ ಜಾಗ ತೆರವುಗೊಳಿಸುವ ಉದ್ದೇಶದಿಂದ ಈಗ ಅರಣ್ಯ ಇಲಾಖೆಯಿಂದ ನೋಟಿಸ್ ಕೊಡುತ್ತಿದ್ದು, ಮುಧೋಳ ತಾಲೂಕಿನಲ್ಲಿ ಈಗಾಗಲೆ 33 ಜನರ ಮೇಲೆ ಕೋರ್ಟ್ ಕೇಸ್ ಸಹ ದಾಖಲಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ಪ್ರಭಾವಿ ಗಳಿಂದಲೇ ಅರಣ್ಯ ಒತ್ತುವರಿ ಆಗಿದ್ದು, ಅಂತವರನ್ನು ರಕ್ಷಿಸುವ ಕೆಲಸವೂ ನಡೆದಿದೆ ಎನ್ನುವ ಗಂಭೀರ ಆರೋಪವೂ ಕೇಳಿ ಬಂದಿದೆ.

ಮುಧೋಳ ತಾಲೂಕಿನ ಲಕ್ಷಾನಟ್ಟಿ ಗ್ರಾಮವ ಸರ್ವೆ ನಂಬರ್ 34ರಲ್ಲಿ ಅಂದಾಜು ಆರು ಎಕರೆ ಅರಣ್ಯ ಪ್ರದೇಶವನ್ನು ಹಿರಿಯ ಪೊಲೀಸ್ ಅಧಿಕಾರಿ ಕುಟುಂಬದವರು ಒತ್ತುವರಿ ಮಾಡಿರುವುದು ಸಹ ಬೆಳಕಿಗೆ ಬಂದಿದೆ.

ಸದ್ಯ ವಿಜಯಪುರ ಜಿಲ್ಲೆ ತಾಳಿಕೋಟೆ ಠಾಣೆಯಲ್ಲಿ ಪಿಎಸ್​ಐ ಆಗಿರುವ ಗೋವಿಂದಗೌಡ ಪಾಟೀಲ ಅವರ ಕುಟುಂಬದ ಮೇಲೆ ಅರಣ್ಯ ಒತ್ತುವರಿ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾರ್ವಜನಿಕ ದೂರೂ ಸಹ ಸಲ್ಲಿಕೆ ಆಗಿದೆ.

ಲಕ್ಷಾನಟ್ಟಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ 2.25 ಎಕರೆ ಜಮೀನು ಇದೆ. ಕಳೆದ ಕೆಲ ವರ್ಷಗಳಿಂದ ಅರಣ್ಯ ಒತ್ತವರಿ ನಡೆದಿದ್ದು, ಸದ್ಯ ಆರು ಎಕರೆ ಜಮೀನು ಕಬಳಿಕೆ ಆಗಿದೆ. ಆ ಜಾಗದಲ್ಲಿ ದಾಳಿಂಬೆ ಬೆಳೆಯಲಾಗಿದೆ. ಪೊಲೀಸ್ ಅಧಿಕಾರಿ ಎನ್ನುವ ಕಾರಣಕ್ಕೆ ಅವರ ಪ್ರಭಾವಕ್ಕೆ ಒಳಗಾಗಿ ಅರಣ್ಯ ಇಲಾಖೆಯವರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಅರಣ್ಯ ಒತ್ತುವರಿ ಬಗ್ಗೆ 2013ರಲ್ಲಿ ಅರಣ್ಯ ಇಲಾಖೆಯಿಂದ ಪಾಟೀಲ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದ್ದರಂತೆ. ಆದರೆ, ತೆರವುಗೊಳಿಸುವ ಯಾವುದೇ ಕಾರ್ಯ ಆಗಿರಲಿಲ್ಲ. ಇದೀಗ ಸಾರ್ವಜನಿಕರು ಆನ್​ಲೈನ್​ನಲ್ಲಿ ಅರಣ್ಯ ಕಬಳಿಕೆ ಬಗ್ಗೆ ದೂರು ಸಲ್ಲಿಸಿದ್ದು, ಅದನ್ನು ಆಧರಿಸಿ, ಪಿಎಸ್​ಐ ಕುಟುಂಬದ ಶಿವನಗೌಡ ಪಾಟೀಲ ಅವರಿಗೆ ನೋಟಿಸ್ ನೀಡಲಾಗಿದೆ. ಫೆ.12ರಂದು ಜಮಖಂಡಿ ಉಪ ವಿಭಾಗಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಹಾಜರಾಗಿ ದಾಖಲೆ ಸಲ್ಲಿಸಲು ತಿಳಿಸಿದ್ದಾರೆ.

ಗೊತ್ತಾಗದೆ ಒತ್ತುವರಿ ಆಗಿದೆ

ಸದ್ಯ ಜಮೀನನ್ನು ನಿಂಗನಗೌಡ ಪಾಟೀಲ ಎನ್ನುವವರು ಉಳುಮೆ ಮಾಡುತ್ತಿದ್ದು, ದಾಳಿಂಬೆ ಬೆಳೆದಿದ್ದಾರೆ. ಅವರು ಈ ಹಿಂದೆ ಅರಣ್ಯ ಇಲಾಖೆಯವರು ಮಾರ್ಕ್ ಮಾಡಿ ಹೋಗಿದ್ದರು. ಹೀಗಾಗಿ ಅರಣ್ಯ ಪ್ರದೇಶ ಅಲ್ಲಿಯವರೆಗೂ ಮಾತ್ರ ಎಂದುಕೊಂಡು ಖಾಲಿ ಇದ್ದ ಜಾಗದಲ್ಲಿ ಉಳುಮೆ ಮುಂದುವರಿಸಿದ್ದೇನೆ. ಇದು ಅರಣ್ಯ ಒತ್ತುವರಿ ಎಂದು ಗೊತ್ತಿರಲಿಲ್ಲ. ಒಂದೆರಡು ಎಕರೆದಷ್ಟು ಕ್ಷೇತ್ರ ವಿಸ್ತಾರ ಆಗಿರಬಹುದು. ಕೆಲ ದಿನಗಳ ಹಿಂದೆ ಇಲಾಖೆಯವರು ಬಂದು ಒತ್ತುವರಿ ಆಗಿದೆ ಎಂದರು. ಹೀಗಾಗಿ ನಾನು ಕೆಲ ಸಾಲು ದಾಳಿಂಬೆ ತೆಗೆದಿದ್ದೇನೆ. ಇದೀಗ ಸರ್ವೇ ಸಹ ಮಾಡುತ್ತಿದ್ದಾರೆ. ಅವರು ಎಲ್ಲಿಯವರೆಗೂ ಮಾರ್ಕ್ ಮಾಡುತ್ತಾರೆಯೋ ಅಷ್ಟು ಜಾಗ ತೆರವು ಮಾಡಲಾಗುವುದು ಎನ್ನುತ್ತಾರೆ ನಿಂಗನಗೌಡ ಪಾಟೀಲ.

ಅತ್ರಿಕಮಣ ವಿಷಯ ಗೊತ್ತಿಲ್ಲ ಅಂತಾರೆ ಪಿಎಸ್​ಐ

ಅರಣ್ಯ ಒತ್ತುವರಿ ಆರೋಪ ಬಂದಿರುವ ಪಿಎಸ್​ಐ ಗೋವಿಂದಗೌಡ ಪಾಟೀಲ ಅವರನ್ನು ಈ ಬಗ್ಗೆ ವಿಜಯವಾಣಿ ಸಂರ್ಪಸಿದಾಗ, ತಮ್ಮ ಹೆಸರಿನಲ್ಲಿ 2.25 ಎಕರೆ ಜಮೀನು ಇರುವುದು ನಿಜ. ಆದರೆ, ಕಳೆದ ಎಂಟು, ಒಂಭತ್ತು ವರ್ಷಗಳಿಂದ ನಾನು ನೌಕರಿಯಲ್ಲಿ ಇದ್ದು, ಜಮೀನನ್ನು ನಮ್ಮ ಸಂಬಂಧಿಕರಿಗೆ ಉಳುಮೆ ಮಾಡಲು ಬಿಟ್ಟಿದ್ದೇನೆ. ಹೀಗಾಗಿ ತಾವು ಯಾವುದೇ ಅರಣ್ಯ ಒತ್ತುವರಿ ಮಾಡಿಲ್ಲ. ಕೌಟುಂಬಿಕ ಕಾರಣದಿಂದ ನನ್ನ ಜಮೀನು ಮಾರಾಟ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಒಪ್ಪಂದವೂ ಆಗಿದೆ. ಆದರೆ, ಅನಿವಾರ್ಯ ಕಾರಣದಿಂದ ಮಾಲೀಕತ್ವ ಹಸ್ತಾಂತರವಾಗಿಲ್ಲ. ಅರಣ್ಯ ಒತ್ತುವರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ನನ್ನ ಪ್ರಭಾವ ಬಳಕೆ ಮಾಡುವ ಪ್ರಶ್ನೆ ಬರುವುದಿಲ್ಲ. ನನ್ನಿಂದ ಯಾವುದೇ ಲೋಪವಾಗಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಒತ್ತುವರಿ ಪ್ರಕರಣಗಳಿಗೆ ಸಂಬಂಧಿ ಸಿದಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತಿದೆ. ಈಗಾಗಲೆ ಮುಧೋಳ ತಾಲೂಕಿನಲ್ಲಿ 33 ಪ್ರಕರಣ ದಾಖಲಿಸಲಾಗಿದೆ. ಲಕ್ಷಾನಟ್ಟಿ ಗ್ರಾಮದ ಶಿವನಗೌಡ ಪಾಟೀಲ ಅವರ ವಿರುದ್ಧ ಆರೋಪ ಕೇಳಿ ಬಂದಿದ್ದು, ಅವರಿಗೂ ನೋಟಿಸ್ ನೀಡಲಾಗಿದೆ. ಆರು ಎಕರೆ ಜಮೀನು ಒತ್ತುವರಿ ಮಾಡಿದ್ದಾರೆ ಎನ್ನುವ ಮಾಹಿತಿ ಇದ್ದು, ಜಂಟಿ ಸರ್ವೇಗಾಗಿ ಭೂಮಾಪನ ಮತ್ತು ಭೂದಾಖಲೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದ್ದು, ಅವರು ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪಿಎಸ್ ಐ ಗೋವಿಂದಗೌಡ ಅವರ ಬಗ್ಗೆ ತಮಗೆ ಮಾಹಿತಿ ಇಲ್ಲ.

| ಬಸವರಾಜಪ್ಪ ಡಿಎಫ್​ಒ ಬಾಗಲಕೋಟೆ