ಠಾಣಿಕೇರಿ ಶಾಲೆ ಮೂವರು ಶಿಕ್ಷಕರ ಸಸ್ಪೆಂಡ್

ಬಾಗಲಕೋಟೆ: ಮುಧೋಳ ತಾಲೂಕಿನ ಠಾಣಿಕೇರಿ ಗ್ರಾಮದಲ್ಲಿ ಶಾಲೆಯ ಶೌಚಗೃಹ ಸ್ವಚ್ಛ ಮಾಡಿ ವಿದ್ಯುತ್ ಮೋಟಾರ್ ಬಂದ್ ಮಾಡುವ ವೇಳೆ ವಿದ್ಯುತ್ ತಗುಲಿ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ.

ವಿದ್ಯುತ್ ತಾಗಿ ವಿದ್ಯಾರ್ಥಿಗೆ ಗಾಯವಾಗಿದ್ದರೂ ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ಕುಟುಂಬದವರಿಗೆ ಮಾಹಿತಿ ನೀಡದಿರುವ ಕಾರಣಕ್ಕೆ ಮೂವರು ಶಿಕ್ಷಕರನ್ನು ಮುಧೋಳ ಬಿಇಒ ಸೇವೆಯಿಂದ ಅಮಾನತು ಮಾಡಿದ್ದಾರೆ.

ಜನವರಿ 23ರಂದು ಠಾಣಿಕೇರಿ ಗ್ರಾಮದ ಬಸವರಾಜ ಪರಸಣ್ಣವರ ಎಂಬ ವಿದ್ಯಾರ್ಥಿಗೆ ಶಾಲೆ ಶೌಚಗೃಹ ತೊಳೆಯಲು ಕಳುಹಿಸಿದ್ದರು. ಸ್ವಚ್ಛ ಮಾಡಿದ ಬಳಿಕ ತೇವಗೊಂಡ ಕೈಯಿಂದ ವಿದ್ಯುತ್ ಮೋಟಾರ್ ಬಂದ್ ಮಾಡುವಾಗ ವಿದ್ಯುತ್ ತಗುಲಿದೆ. ಆಗ ಶಿಕ್ಷಕರು ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ರಾತ್ರಿ ವಿದ್ಯಾರ್ಥಿಯನ್ನು ಮನೆಗೆ ಬಿಟ್ಟು ಬಂದಿದ್ದರು. ಅಲ್ಲಿವರೆಗೂ ಅವರ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ.

ಅದೇ ದಿನ ರಾತ್ರಿ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದ. ಬಳಿಕ ಲೋಕಾಪುರದಲ್ಲಿ ಚಿಕಿತ್ಸೆ ಪಡೆದು, ಇದೀಗ ವಿದ್ಯಾರ್ಥಿಯನ್ನು ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ವಿದ್ಯಾಥಿರ್ ಕೈಗೆ ಗಾಯವಾಗಿದೆ. ವಿದ್ಯಾರ್ಥಿ ಕೈಯಿಂದ ಶೌಚಗೃಹ ಸ್ವಚ್ಛಗೊಳಿಸಿದ್ದು ತಪ್ಪು, ಜತೆಗೆ ಅವಘಡ ಸಂಭವಿಸಿದರೂ ಆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ.

ಶಿಕ್ಷಕರ ಈ ವರ್ತನೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಯವರು ಬಿಇಒ ಅವರಿಗೆ ದೂರು ನೀಡಿದ್ದರು. ಇದೀಗ ಘಟನೆಗೆ ಸಂಬಂಧಿಸಿದಂತೆ ಠಾಣಿಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಸುರೇಶ ಕಾಳವ್ವಗೋಳ, ಪದ್ಮಾವತಿ ಪಾಟೀಲ, ವಿಠಲ ತೋಟದ ಅವರನ್ನು ಅಮಾನತುಗೊಳಿ ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲ ದೇವಣಗಾವಿ ಫೆ.2ರಂದು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *