ಮತ ಎಣಿಕೆ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೇ 23ರಂದು ಬಾಗಲಕೋಟೆ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಸೋಮವಾರ ಮೇಲ್ವಿಚಾರಕರು, ಸಹಾಯಕರು ಹಾಗೂ ಮೈಕ್ರೋ ವೀಕ್ಷಕರಿಗೆ ಹಮ್ಮಿಕೊಂಡ ಮತ ಎಣಿಕೆ ವಿಧಾನ ಕುರಿತು ಕೊನೆಯ ಹಂತದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದ 8 ವಿಧಾನಸಭಾ ಮತಕ್ಷೇತ್ರಗಳ ಎಣಿಕೆ ಕಾರ್ಯ ನಡೆಸಲಾಗುತ್ತಿದ್ದು, ಮತ ಎಣಿಕೆಗೆ ಸಂಬಂಧಿಸಿದ ಯಾವುದೇ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ ಮತದಾನದ ರಹಸ್ಯ ಕಾಪಾಡಬೇಕು ಎಂದರು.

ಪ್ರತಿ ಮತಕ್ಷೇತ್ರಕ್ಕೆ 14 ಟೇಬಲ್‌ಗಳನ್ನು ಇರಿಸಲಾಗುತ್ತಿದ್ದು, ಪ್ರತಿ ಟೇಬಲ್‌ಗೆ ತಲಾ ಒಬ್ಬರಂತೆ ಮತ ಎಣಿಕೆ ಮೇಲ್ವಿಚಾರಕ, ಸಹಾಯಕ ಮತ್ತು ಮೈಕ್ರೋ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಸಿಬ್ಬಂದಿಗೆ ಬೆಳಗ್ಗೆ ಉಪಾಹಾರ, ಚಹಾ ಹಾಗೂ ಮಧ್ಯಾಹ್ನದ ಊಟ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದ್ದು, ಕೇಂದ್ರದೊಳಗೆ ಬರುವ ಪ್ರತಿಯೊಬ್ಬರೂ ಆಯಾ ಪ್ರವೇಶದ್ವಾರ ಹಾಗೂ ನಿಗದಿಪಡಿಸಿದ ಸ್ಥಳಗಳಲ್ಲಿ ಮೊಬೈಲ್ ಡಿಪಾಜಿಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಉಹಾಪೋಹಕ್ಕೆ ಅವಕಾಶವಿಲ್ಲದಂತೆ ಆಯೋಗದ ನಿರ್ದೇಶನ ಮತ್ತು ಮಾರ್ಗದರ್ಶನದನ್ವಯ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಾಸ್ಟರ್ ಟ್ರೈನರ್ ಗಂಗಾಧರ ದಿವಟರ್ ಮಾತನಾಡಿ, ಮತ ಎಣಿಕೆಗೆ ಸಂಬಂಧಿಸಿದಂತೆ ಎಣಿಕೆ ಟೇಬಲ್, ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ವಿಧಾನ, ಪ್ರಕ್ರಿಯೆಯಲ್ಲಿ ಮೂಡಿಬಂದ ಸಂದೇಹಗಳು, ವಿಶೇಷ ಪ್ರಕರಣ, ಮತದಾನ ಖಾತ್ರಿ ಯಂತ್ರದಲ್ಲಿ ಮತ ಎಣಿಕೆ ವಿಧಾನ, ಅಂಚೆ ಮತಪತ್ರಗಳ ಎಣಿಕೆ, ಮತದಾನದ ಗೌಪ್ಯತೆ ಕುರಿತು ಸವಿವರವಾಗಿ ತಿಳಿಸಿಕೊಟ್ಟರು.

ಅಪರ ಜಿಲ್ಲಾಧಿಕಾರಿ ಶಶೀಧರ ಕುರೇರ, ಉಪವಿಭಾಗಾಧಿಕಾರಿಗಳಾದ ಎಚ್. ಜಯಾ ಮತ್ತು ಇಕ್ರಮ ಸೇರಿ ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು, ಮತ ಎಣಿಕೆ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ರಸ್ತೆ ಮಾರ್ಗ ಬದಲಾವಣೆ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 23ರಂದು ಮತ ಎಣಿಕೆ ನಡೆಯಲಿರುವ ಕಾರಣ ಕಾನೂನು ಸುವ್ಯವಸ್ಥೆ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಆದೇಶ ಹೊರಡಿಸಿದ್ದಾರೆ.

23ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ನವನಗರ ಬೈಪಾಸ್ ರಸ್ತೆಯ ಮೂಲಕ ಸೀಮಿಕೇರಿ ಕ್ರಾಸ್ ಕಡೆಗೆ ತೆರಳುವ ವಾಹನಗಳಿಗೆ ಉತ್ತರಾಧಿಮಠ ಕ್ರಾಸ್ ಹತ್ತಿರ ಬಲಕ್ಕೆ ತಿರುಗಿ ಗದ್ದನಕೇರಿ ರಸ್ತೆಗೆ ಕೂಡಿಕೊಂಡು ಹುಬ್ಬಳ್ಳಿ ಕಡೆಗೆ ಹೋಗುವಂತೆ ಮತ್ತು ಸೀಮಿಕೇರಿ ಕ್ರಾಸ್ ಮೂಲಕ ಬೈಪಾಸ್ ಮೂಲಕ ನವನಗರ ಕಡೆಗೆ ಬರುವ ವಾಹನಗಳಿಗೆ ನೇರವಾಗಿ ಗದ್ದನಕೇರಿ ಕ್ರಾಸ್ ಮುಖಾಂತರ ಬಾಗಲಕೋಟೆ ನಗರ ಪ್ರವೇಶಿಸುವಂತೆ ಆದೇಶಿಸಿದ್ದಾರೆ. ಉತ್ತರಾ ಕ್ರಾಸ್‌ದಿಂದ ಸೀಮಿಕೇರಿ ಕ್ರಾಸ್‌ವರೆಗಿನ ರಸ್ತೆ ಮೂಲಕ ಚುನಾವಣೆಗೆ ಸಂಬಂಧಿಸಿದ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *