ಸರ್ಕಾರಿ ಬಸ್‌ನಲ್ಲಿ ಗ್ರಾಮ ವಾಸ್ಥವ್ಯಕ್ಕೆ ತೆರಳಿದ ಡಿಸಿ!

ಬಾಗಲಕೋಟೆ: ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಗತಿಸುವುದರೊಳಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಕೋಟೆನಾಡಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದು, ಆಡಳಿತವನ್ನು ಜನಸಾಮಾನ್ಯರ ಬಾಗಿಲಿಗೆ ಕೊಂಡೊಯ್ಯಲು ಮುಂದಾಗಿದ್ದಾರೆ.

ಹೌದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸರ್ಕಾರ ಹಿರಿಯ ಅಧಿಕಾರಿಗಳ ನಿರ್ದೇಶನ ಮೇರೆಗೆ ಗುರುವಾರ ಜಮಖಂಡಿ ತಾಲೂಕು ಅಲಬಾಳ ಗ್ರಾಮಕ್ಕೆ ಬಾಗಲಕೋಟೆಯಿಂದ ಗ್ರಾಮ ವಾಸ್ತವ್ಯಕ್ಕೆ ತೆರಳಿದರು. ಜಿಪಂ ಸಿಇಒ ಗಂಗೂಬಾಯಿ ಮಾನಕರ, ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಡಿಎಚ್‌ಒ ಡಾ.ಅನಂತ ದೇಸಾಯಿ ಒಳಗೊಂಡ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ತಂಡ ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಿದರು.

ಸಂಜೆ ಬಸ್ ಹತ್ತಿದ ಡಿಸಿ
ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಆಡಳಿತ ವ್ಯವಸ್ಥೆ ಕುರಿತು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ವೇಳೆ ಯಾವುದೇ ಪೂರ್ವ ಸೂಚನೆ ನೀಡದೆ ಜಿಲ್ಲಾಧಿಕಾರಿ, ಜಿಪಂ ಸಿಇಒ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮ ಆಯ್ಕೆ ಮಾಡಿಕೊಂಡು ಗ್ರಾಮ ವಾಸ್ತವ್ಯ ಹೂಡಬೇಕು. ಗ್ರಾಮದ ಸಮಸ್ಯೆಗಳನ್ನು ಜನರಿಂದ ನೇರವಾಗಿ ಆಲಿಸಬೇಕು ಎಂದು ಆದೇಶ ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಮಧ್ಯಾಹ್ನ ಆದೇಶ ಹೊರ ಬರುತ್ತಿದ್ದಂತೆ ಸಂಜೆ ಅಧಿಕಾರಿಗಳೊಂದಿಗೆ ಯಾವುದೇ ಪೂರ್ವ ಮಾಹಿತಿ ನೀಡದೇ ವಿಶೇಷ ಬಸ್ ಏರಿ ಹೊರಟರು. ಬಸ್‌ನಲ್ಲಿ ಆಸೀನವಾಗುತ್ತಿದ್ದಂತೆ ಖುದ್ದು ತಾವೇ ಮುಂದಾಳತ್ವ ವಹಿಸಿಕೊಂಡು ಎಲ್ಲ ಅಧಿಕಾರಿಗಳು ಹಾಜರಿರುವ ಬಗ್ಗೆ ಪರಿಶೀಲನೆ ನಡೆಸಿದರು.

ಇಂಧನ ಉಳಿತಾಯ
ಎಲ್ಲ ಅಧಿಕಾರಿಗಳಿಗೆ ಸರ್ಕಾರ ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಿದೆ. ಗ್ರಾಮ ವಾಸ್ತವ್ಯಕ್ಕೆ ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ವಾಹನದಲ್ಲಿ ಬಂದರೆ ಇಂಧನ ಬಳಕೆ ಹೆಚ್ಚಾಗಲಿದೆ. ಸರ್ಕಾರಕ್ಕೂ ಹೊರೆಯಾಗಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ರಾಮಚಂದ್ರನ್ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ವಿಶೇಷ ಬಸ್ ಒದಗಿಸಲು ಹೇಳಿದರು. ಬಳಿಕ ಎಲ್ಲ ಅಧಿಕಾರಿಗಳು ಡಿಸಿ ಕಚೇರಿ ಆಗಮಿಸುವಂತೆ ತಿಳಿಸಿ ಸಾರಿಗೆ ಸಂಸ್ಥೆ ಬಸ್‌ನಲ್ಲಿ ತೆರಳಿದರು.

ಸಮಯ ನಿಗದಿಯಿಲ್ಲ
ಗ್ರಾಮವಾಸ್ತವ್ಯ ಪ್ರತಿವಾರ, ಪ್ರತಿ ತಿಂಗಳು, ಯಾವುದೇ ಸಮಯ, ಇಂಥದ್ದೇ ದಿನ ನಿಗದಿ ಮಾಡಿಲ್ಲ. ಅವಕಾಶ ನೋಡಿಕೊಂಡು ವಾಸ್ತವ್ಯ ಮಾಡಲಾಗುತ್ತದೆ. ಪೂರ್ವ ನಿಯೋಜಿತವಾಗಿ ತಿಳಿಸಿದಲ್ಲಿ ನೈಜತೆ ಮರೆ ಮಾಚುವ ಸಾಧ್ಯತೆಗಳಿವೆ. ಆದ್ದರಿಂದ ಮುನ್ಸೂಚನೆ ನೀಡದೆ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ನೇರವಾಗಿ ಜನರಿಗೆ ಆಡಳಿತ ತಲುಪಿಸುವುದು, ಜನರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವುದು ನಮ್ಮ ಉದ್ದೇಶ ಎಂದು ‘ವಿಜಯವಾಣಿ’ಗೆ ಡಿಸಿ ರಾಮಚಂದ್ರನ್ ವಿವರಿಸಿದರು.

ಕಚೇರಿಯಲ್ಲಿ ಕುಳಿತು ಜನರ ಕುಂದು ಕೊರತೆ ಆಲಿಸಿದರೆ ನೈಜತೆ ದರ್ಶನವಾಗುವುದಿಲ್ಲ. ಹೀಗಾಗಿ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಲಾಗುತ್ತದೆ. ಮನೆ ಬಾಗಿಲಿಗೆ ಆಡಳಿತ ತಲುಪಬೇಕು. ಗೌಪ್ಯತೆ ಕಾಪಾಡಿಕೊಂಡು ಕೆಲವೇ ಗಂಟೆಗಳ ಮುಂಚಿತವಾಗಿ ಗ್ರಾಮ ವಾಸ್ತವ್ಯ ನಿರ್ಧರಿಸಿಲಾಗುತ್ತದೆ. ಇಂಧನ ಉಳಿಸುವುದಾಕ್ಕಾಗಿ ಒಂದೇ ಬಸ್‌ನಲ್ಲಿ ತೆರಳಲಾಗಿದೆ.
ಆರ್.ರಾಮಚಂದ್ರನ್, ಬಾಗಲಕೋಟೆ ಜಿಲ್ಲಾಧಿಕಾರಿ