ರೇಷ್ಮಾ ಕೊಲೆ ಖಂಡಿಸಿ ಕರವೇ ಪ್ರತಿಭಟನೆ

ಬಾಗಲಕೋಟೆ: ಕರವೇ ರಾಜ್ಯ ಮಹಿಳಾದ ಘಟಕದ ಉಪಾಧ್ಯಕ್ಷೆ ರೇಷ್ಮಾ ಪಡೇಕನೂರ ಹತ್ಯೆ ಖಂಡಿಸಿ ಕರವೇ ಜಿಲ್ಲಾ ಘಟಕ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತಕ್ಕೆ ಆಗಮಿಸಿದ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಕನ್ನಡ ನಾಡು, ನುಡಿ, ನೆಲ-ಜಲ ಮತ್ತು ಮಹಿಳಾ ಸಬಲೀಕರಣಕ್ಕೆ ರೇಷ್ಮಾ ಪಡೇಕನೂರ ಅವಿರತವಾಗಿ ಶ್ರಮಿಸಿದ್ದರು. ನೇರ, ದಿಟ್ಟ ಮಹಿಳೆಯಾಗಿದ್ದ ರೇಷ್ಮಾ ಅವರು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದರು. ಅವರನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜ ತೆಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸರ್ಕಾರ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇದರ ಹಿಂದೆ ಯಾರೇ ಇದ್ದರೂ ಅವರ ಮೇಲೆ ವಾರದೊಳಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕರವೇ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಾ ಬೆಟಗೇರಿ, ಮುಖಂಡರಾದ ಬಸವರಾಜ ಧರ್ಮಂತಿ, ಬಸವರಾಜ ಅಂಬಿಗೇರ, ಆತ್ಮಾರಾಮ ನೀಲನಾಯಕ, ಮಲ್ಲು ಕಟ್ಟಿಮನಿ, ವೆಂಕಟೇಶ ಮತ್ತಿಕಟ್ಟಿ, ವೀರಣ್ಣ ಬಡಿಗೇರ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *