ಕೈ ಮುಗಿವೇನು ಶಾಂತವಾಗು ಗಂಗೆ

ಸಂತೋಷ ದೇಶಪಾಂಡೆ
ಬಾಗಲಕೋಟೆ: ಮಹಾರಾಷ್ಟ್ರ ಕೊಂಕಣ ಹಾಗೂ ಬೆಳಗಾವಿ ಭಾಗದಲ್ಲಿ ಸುರಿದ ಭಾರಿ ಮಳೆಗೆ ಕೋಟೆನಾಡು ಸಂಪೂರ್ಣ ತತ್ತರಿಸಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಇನ್ನೂ ಕಡಿಮೆಯಾಗಿಲ್ಲ. ಪ್ರವಾಹ ಬಾಧಿತ ಪಟ್ಟಿಗೆ ಭಾನುವಾರ ಮತ್ತಷ್ಟು ಗ್ರಾಮಗಳು ಸೇರ್ಪಡೆಯಾಗಿವೆ.

ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಒಳ ಹರಿವು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಗ್ರಾಮಗಳಿಗೆ ಆವರಿಸಿರುವ ನೀರು ಇಳಿಮುಖಗೊಂಡಿಲ್ಲ. ಜಿಲ್ಲಾಡಳಿತದಿಂದ ಜನರನ್ನು ಸುರಕ್ಷಿತ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದ್ದು, ಈವರೆಗೆ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಗ್ರಾಮೀಣ ಭಾಗದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಲಾವೃತದಿಂದ ಪ್ರಮುಖ ರಸ್ತೆಗಳಿಗೆ ಮುಕ್ತಿ ಸಿಕ್ಕಿಲ್ಲ. ಸಂಚಾರಕ್ಕೆ ಸಂಚಕಾರ ಬಂದಿದೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಜಿಲ್ಲೆಗೆ ಆಗಮಿಸಿದ್ದಾಗ ಶುಕ್ರವಾರದವರೆಗೆ ಜಿಲ್ಲೆಯಲ್ಲಿ 94 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದವು. ನಂತರ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ ವೇಳೆ 150 ಗ್ರಾಮಗಳು ಬಾಧಿತಗೊಂಡಿದ್ದವು. ಭಾನುವಾರದವರೆಗೆ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಬಾಧಿತ ಗ್ರಾಮಗಳ ಸಂಖ್ಯೆ 191ಕ್ಕೆ ತಲುಪಿದೆ. ಈವರೆಗೆ 27,676 ಕುಟುಂಬಗಳ ಪೈಕಿ 1,28,443 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತೀವ್ರ ಅಪಾಯದಲ್ಲಿದ್ದ 19 ಜನರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. 242 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಇವರಲ್ಲಿ 76,898 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಆರೋಗ್ಯದ ಹಿತ ದೃಷ್ಟಿಯಿಂದ 215 ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಪ್ರವಾಹ ಪೀಡಿತಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಪ್ರವಾಹಕ್ಕೆ 3 ಜನರು ಮತ್ತು 49 ಜಾನುವಾರುಗಳು ಮೃತಪಟ್ಟಿವೆ. ಈಗಾಗಲೇ 64,950 ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಅವುಗಳಿಗೆ ಹಸಿ ಹಾಗೂ ಒಣ ಮೇವು ಒದಗಿಸಲಾಗುತ್ತಿದೆ. ಈ ಪೈಕಿ 20414 ಜಾನುವಾರುಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 392 ಮೆಟ್ರಿಕ್ ಟನ್ ಮೇವು ಸಂಗ್ರಹವಿದ್ದು, ಹಂಚಿಕೆ ಮಾಡಲಾಗುತ್ತಿದೆ. ಅನೇಕ ಭಾಗಗಳಲ್ಲಿ ಮೇವಿನ ಕೊರತೆ ಕಂಡು ಬಂದಿದ್ದು, ಮೂಕ ಪ್ರಾಣಿಗಳ ವೇದನೆ ಕರಳು ಹಿಂಡುವಂತೆ ಮಾಡಿದೆ.

ಪ್ರವಾಹ ಕಾರ್ಯದಲ್ಲಿ 3 ಎನ್‌ಡಿಆರ್‌ಎ್, 2 ಎಸ್‌ಡಿಆರ್‌ಎ್ ಮತ್ತು 3 ಆರ್ಮಿ ತಂಡ ಹಾಗೂ 1000 ಕ್ಕೂ ಹೆಚ್ಚು ಪೊಲೀಸ್, ಹೋಮ್ ಗಾರ್ಡ್ಸ್ ಸಿಬ್ಬಂದಿ, 100 ಸದಸ್ಯರ ಅಗ್ನಿಶಾಮಕ ತಂಡಗಳ ಜತೆಗೆ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕ್ಷಣ ಕ್ಷಣಕ್ಕೂ ಉಕ್ಕುವ ನದಿಗಳ ರುದ್ರನರ್ತನಕ್ಕೆ ರಕ್ಷಣಾ ಕಾರ್ಯಕ್ಕೆ ಹಲವು ಸವಾಲುಗಳು ಎದುರಾಗುತ್ತಿವೆ. ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದರೂ ಜನರ ಮೊಂಡುತನ ರಕ್ಷಣಾ ಸಿಬ್ಬಂದಿ ಹೈರಾಣ ಆಗುವಂತೆ ಮಾಡುತ್ತಿದೆ. ಜಿಲ್ಲೆಯಲ್ಲಿ ಈ ವರೆಗೆ ಅಂದಾಜಿಗೆ ಸಿಗದಷ್ಟು ಜಮೀನು ಮುಳುಗಡೆಯಾಗಿದ್ದು, ಅನೇಕ ಬೆಳೆಗಳು ಕೊಚ್ಚಿ ಹೋಗಿವೆ. ಪ್ರಾಥಮಿಕ ಮಾಹಿತಿ ಪ್ರಕಾರ 10 ಸಾವಿರ ಹೆಕ್ಟೇರ್ ಜಮೀನು ಮುಳುಗಡೆಯಾಗಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಪರಿಹಾರ ನೀಡಲು ಇಚ್ಛಿಸುವ ದಾನಿಗಳು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ವಿಶೇಷ ವಾಟ್ಸ್ ಆ್ಯಪ್ ನಂ:8971332723 ಸಂಪರ್ಕಿಸಲು ಜಿಲ್ಲಾಡಳಿತ ತಿಳಿಸಿದೆ.

ವ್ಯಾಪಕ ಪ್ರಮಾಣದಲ್ಲಿ ಹರಿದು ಬಂದ
ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹಕ್ಕೆ ನಿರಾಶ್ರಿತರಾಗಿರುವ ಜನರಿಗೆ ವಿವಿಧೆಡೆ ಸಂಘ, ಸಂಸ್ಥೆಗಳು, ಮಠ, ಮಾನ್ಯಗಳು, ಯುವಕರ ತಂಡ ದೊಡ್ಡ ಪ್ರಮಾಣದಲ್ಲಿ ಸಹಾಯ ಹಸ್ತ ಚಾಚಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸದಸ್ಯರು, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ, ಬಿವಿವಿ ಸಂಘದ ಮೆಡಿಕಲ್ ಕಾಲೇಜು ತಂಡ, ಆನಂದ ತೀರ್ಥ ಸಮಿತಿ, ರೆಡ್ ಕ್ರಾಸ್ ಸಂಸ್ಥೆ, ಶಾಲೆ, ಕಾಲೇಜುಗಳು ಸಂತ್ರಸ್ತರ ನೆರವಿಗೆ ಧಾವಿಸಿವೆ. ಬಾಗಲಕೋಟೆ ಜಿಲ್ಲೆಯಿಂದ ಅಷ್ಟೇ ಅಲ್ಲದೆ, ಬೆಂಗಳೂರು, ವಿಜಯಪುರ, ದಾವಣಗೆರೆ ಸೇರಿ ರಾಜ್ಯದ ನಾನಾ ಭಾಗಗಳಿಂದ ವ್ಯಾಪಕ ಪ್ರಮಾಣದಲ್ಲಿ ಅವಶ್ಯಕ ವಸ್ತುಗಳು, ಆಹಾರ ಪದಾರ್ಥಗಳು ಹರಿದು ಬರುತ್ತಿವೆ. ಜಿಲ್ಲೆಯ ಮಠ, ಮಾನ್ಯಗಳು, ಛತ್ರಗಳಲ್ಲಿ, ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ. ಕೂಡಲ ಸಂಗಮದ ಬಸವ ಧರ್ಮ ಪೀಠದಲ್ಲಿ 3500 ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ. 800 ಕೊಠಡಿ ಸಂತ್ರಸ್ತರಿಗೆ ನೀಡಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ
ಭೀಕರ ಪ್ರವಾಹಕ್ಕೆ ಜಿಲ್ಲೆಯ ಸಂತ್ರಸ್ತರ ನೋವು ಮುಗಿಲು ಮುಟ್ಟಿದೆ. ನೂರಾರು ವರ್ಷಗಳಿಂದ ಬದುಕಿ ಬಾಳಿದ ಮನೆ,ಮಠ, ಜಮೀನು ನೀರಲ್ಲಿ ಮುಳುಗಿರುವುದನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ. ಸಹಾಯ ಕೇಳಿ ಬಂದವರಿಗೆ ನೆರವಿನ ಹಸ್ತ ಚಾಚಿದ್ದ ಕೈಗಳು ಇಂದು ಕೈ ಮುಗಿಯುವ ಸ್ಥಿತಿ ಬಂದಿರುವುದು ದುರಂತ ಸಂಗತಿ. ನಿತ್ಯವು ಕಣ್ಣೀರಿನಲ್ಲಿ ದಿನದೂಡುತ್ತಿದ್ದು, ಪ್ರವಾಹ ಇಳಿಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಅನೇಕ ಜನರು ನಮಗೆ ಇದು ಯಾವ ಜನ್ಮದ ಪಾಪ ಎಂದು ಗೋಗರೆಯುತ್ತಿರುವ ದೃಶ್ಯಗಳು ಪರಿಹಾರ ಕೇಂದ್ರದಲ್ಲಿ ಕಂಡು ಬರುತ್ತಿವೆ. ಮಹತ್ವದ ದಾಖಲೆಗಳು, ಸಂಬಂಧಿಕರ ಭಾವಚಿತ್ರಗಳು ನೀರಲ್ಲಿ ಕಣ್ಮರೆಯಾಗಿರುವುದು ಕೂಡ ಮತ್ತಷ್ಟು ಚಿಂತೆಗೀಡು ಮಾಡಿದೆ. ಒಟ್ಟಿನಲ್ಲಿ ಪ್ರವಾಹ ಜಿಲ್ಲೆಯ ಜನರ ನಿದ್ದೆ, ನೆಮ್ಮದಿ ಕಸಿದುಕೊಂಡಿದೆ.