More

    ಯುವ ಶಕ್ತಿಯಿಂದ ದೇಶದ ಅಭಿವೃದ್ಧಿ: ಗೋವಿಂದ ಕಾರಜೋಳ

    ಬಾಗಲಕೋಟೆ: ದೇಶ ಕಂಡ ಶ್ರೇಷ್ಠ ಚಿಂತಕ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣ ಹಾಗೂ ದೇಶದ ಅಭಿವೃದ್ದಿಗೆ ಯುವಕರು ಮುಂದಾಗಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಲಹೆ ನೀಡಿದರು.

    ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

    ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.

    ಶತಮಾನ ಕಳೆದರೂ ಸ್ವಾಮಿ ವಿವೇಕಾನಂದರು ನೀಡಿರುವ ಆದರ್ಶಗಳನ್ನು ಭಾರತ ದೇಶ ಅಷ್ಟೇ ಅಲ್ಲ, ಬೇರೆ ದೇಶದವರು ಸಹ ಗೌರವಿಸಿ ಅನುಸರಿಸುತ್ತಿದ್ದಾರೆ. ದೇಶದಲ್ಲಿ ಶೇ.35 ರಷ್ಟು ಯುವಕರಿದ್ದಾರೆ. ಬುದ್ಧಿವಂತರು, ಪ್ರಪಂಚ ಬಲ್ಲವರಾಗಿರುವ ಯುವ ಜನಾಂಗದಿಂದ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ನಮ್ಮ ಸರ್ಕಾರ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

    ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು. ಗುರುಗಳ ಮಾರ್ಗದರ್ಶನದಲ್ಲಿ ದೇಶಕ್ಕೆ ಉತ್ತಮವಾದ ಸಂಶೋಧನೆ, ಆವಿಷ್ಕಾರ, ಆದರ್ಶನಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕು. ಮಾನವೀಯ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಡಾ.ಶಶಿಕಲಾ ಮೊರಬದ ಉಪನ್ಯಾಸ ನೀಡಿ, ಯುವಕರಲ್ಲಿ ಬುದ್ಧಿ ಮತ್ತು ಭಾವಗಳು ಚಿಂತನೆಯಲ್ಲಿ ಇರಬೇಕು. ಮನಸ್ಸಿಗೆ ಪ್ರಶ್ನಿಸಿಕೊಳ್ಳಬೇಕಾದರೆ ಮನಸ್ಸು ಗಟ್ಟಿಗೊಳಿಸಿಕೊಳ್ಳಬೇಕು. ಶರೀರ ಬಲಿಷ್ಟವಿದ್ದಾಗ ಮಾತ್ರ ಉತ್ತಮ ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ಇದನ್ನೇ ಸ್ವಾಮಿ ವಿವೇಕಾನಂದರು ಮಾಡಿದ್ದು, ಶರೀರ ಮತ್ತು ಮನಸ್ಸು ಎರಡು ಮಹತ್ವವಾಗಿವೆ. ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವ ಪ್ರಕ್ರಿಯೆ ಬಹಳ ಸುಲಭವಲ್ಲ. ದೇಹಕ್ಕೆ ಪೂರಕವಾದ ಮನಸ್ಸು ಸಿದ್ಧಗೊಳಿಸಬೇಕು. ವ್ಯಕ್ತಿಯ ಮೋಕ್ಷ ಸಾರ್ವತ್ರಿಕ ಮೋಕ್ಷವಾದಾಗ ನಿಜವಾದ ಮುಕ್ತಿ ಸಿಗಲು ಸಾಧ್ಯವಾಗುತ್ತದೆ ಎಂದರು.

    ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅರುಣಕುಮಾರ ಗಾಳಿ ಇತರರು ಉಪಸ್ಥಿತರಿದ್ದರು.

    ವಿಜೇತರಿಗೆ ಬಹುಮಾನ
    ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಈರಣ್ಣ ಹಿರೇಮಠ (ಪ್ರಥಮ), ವಿಜಯಲಕ್ಷ್ಮೀ ಕಿರಸೂರ (ದ್ವಿತೀಯ), ದೀಪಾ ಮಾದರ (ತೃತೀಯ) ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಸವಿತಾ ತೆಗ್ಗಿ (ಪ್ರಥಮ), ದೀಪಾ ಕೆಂಚಣ್ಣವರ (ದ್ವಿತೀಯ), ರೇಣುಕಾ ಪೂಜಾರಿ (ತೃತೀಯ) ಅವರಿಗೆ ಬಹುಮಾನವನ್ನು ವಿತರಿಸಲಾಯಿತು.

    ವಿದ್ಯಾರ್ಥಿಗಳು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಯುವ ಜನತೆಗೆ ಮಾರ್ಗದರ್ಶಕರಾಗುವುದರ ಜತೆಗೆ ಯುವಕರ ಸ್ಫೂರ್ತಿಯಾಗಿದ್ದಾರೆ. ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು.
    ವೀರಣ್ಣ ಚರಂತಿಮಠ, ಶಾಸಕ ಬಾಗಲಕೋಟೆ

    477 ಲ್ಯಾಪ್‌ಟಾಪ್ ವಿತರಣೆ
    ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಒಟ್ಟು 477 ಲ್ಯಾಪ್‌ಟಾಪ್‌ಗಳನ್ನು ಉಚಿತ ನೀಡಲಾಗುತ್ತಿದೆ. ಲ್ಯಾಪ್‌ಟಾಪ್ ಸಿಗದವರಿಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕೊಡಿಸುವ ಕೆಲಸ ಮಾಡಲಾಗುವುದ. ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಮಾಡುವ ಲ್ಯಾಪ್‌ಟಾಪ್ ಯೋಜನೆ ಮುಂದುವರಿಸಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts