ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಣ ಇಲಾಖೆ ಸಜ್ಜು !

ಸಂತೋಷ ದೇಶಪಾಂಡೆ
ಬಾಗಲಕೋಟೆ: ಬೇಸಿಗೆ ರಜೆ ಮುಗಿಯುತ್ತ ಬಂದಿದ್ದು, ಕೆಲವೇ ದಿನಗಳಲ್ಲಿ ಜಿಲ್ಲೆಯ ಶಾಲೆಗಳ ಬಾಗಿಲು ತೆರೆದುಕೊಳ್ಳಲಿವೆ. ಈ ಹಿನ್ನೆಲೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಜನರಲ್ಲಿ ಶಿಕ್ಷಣ ಕುರಿತು ಜಾಗೃತಿ ಮೂಡಿಸಲು ಸಜ್ಜಾಗಿದೆ.

ಜಿಲ್ಲೆಯಲ್ಲಿ 1303 ಸರ್ಕಾರಿ ಪ್ರಾಥಮಿಕ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ 19, ಖಾಸಗಿ ಅನುದಾನಿತ 113, ಅನುದಾನ ರಹಿತ 466 ಪ್ರಾಥಮಿಕ ಶಾಲೆಗಳು, 183 ಸರ್ಕಾರಿ ಪ್ರೌಢಶಾಲೆಗಳು, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 19, ಅನುದಾನಿತ 124, ಅನುದಾನ ರಹಿತ 142 ಪ್ರೌಢಶಾಲೆಗಳಿವೆ.

ಮೇ 29ರಂದು ತರಗತಿಗಳು ಆರಂಭವಾಗಲಿದ್ದು, 28ರಂದು ಸ್ವಚ್ಛತಾ ಕಾರ್ಯ ನಡೆಯಲಿದೆ, ಮೇ 29ರಂದು ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಅಲಂಕೃತಗೊಳಿಸಿ, ತಳಿರು ತೋರಣ ಕಟ್ಟಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಸ್ವಾಗತ ಕೋರಲಾಗುತ್ತದೆ. ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲು ಶಿಕ್ಷಣ ಇಲಾಖೆ ಸಿದ್ಧತೆ ಆರಂಭಿಸಿದೆ. ಅಂದು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯಶಿಕ್ಷಕರು, ಸಹಶಿಕ್ಷಕರು ಮಕ್ಕಳೊಂದಿಗೆ ಕುಳಿತು ಸಹಭೋಜನ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಈ ಶೈಕ್ಷಣಿಕ ವರ್ಷದಲ್ಲಿ ಅನೇಕ ಕಾರ್ಯ ಚಟುವಟಿಕೆ ಹಮ್ಮಿಕೊಂಡಿದೆ. ಸೇತು ಬಂಧು ಯೋಜನೆಯಡಿ ಈ ಹಿಂದಿನ ಶೈಕ್ಷಣಿಕ ತರಗತಿಯಲ್ಲಿ ಮಗು ಎಷ್ಟು ಕಲಿಕಾ ಸಾಮರ್ಥ್ಯ ಹೊಂದಿದೆ ಎಂಬುದನ್ನು ಅರಿಯಲು ಮಕ್ಕಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಆರಂಭದಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲು ಯೋಜನೆ ರೂಪಿಸಿದೆ. ಪ್ರತಿಯೊಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರ್ಯಾಗಾರ, ವಿಷಯ ತಜ್ಞರಿಂದ ಶಿಕ್ಷರಿಗೆ ತರಬೇತಿ ಸೇರಿ ನಾನಾ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಜಿಲ್ಲೆಗೆ ಈಗಾಗಲೆ ಅಗತ್ಯವಿರುವ ಪಠ್ಯಪುಸ್ತಕಗಳಲ್ಲಿ ಶೇ.50ರಷ್ಟು ಬಂದಿವೆ. ಕೆಲವು ದಿನಗಳಲ್ಲಿ ಉಳಿದ ಪಠ್ಯಪುಸ್ತಕ, ಸಮವಸ್ತ್ರ ಬರಲಿವೆ. ಶಾಲಾ ಆರಂಭ ದಿನದಿಂದ ಮಕ್ಕಳಿಗೆ ವಿತರಣೆ ಕಾರ್ಯ ನಡೆಯಲಿದೆ. ಶಾಲಾ ಪ್ರಾರಂಭೋತ್ಸವಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ, ಅದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ. ಇಲ್ಲವೆ ಕಾಗದ ಪತ್ರದಲ್ಲಿ ಮಾತ್ರ ಉಳಿಯುತ್ತದೆಯೇ ? ಎನ್ನುವುದು ಕಾದು ನೋಡಬೇಕು.

ಜಾಗೃತಿ ಕಾರ್ಯಕ್ರಮ
ಜನರಲ್ಲಿ ಶಿಕ್ಷಣದ ಮಹತ್ವ ಸಾರಲು ಹಾಗೂ ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದೆಂಬ ಉದ್ದೇಶದಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಕ್ಕಳನ್ನು ಶಾಲೆಗಳತ್ತ ಸೆಳೆಯಲು ನಾನಾ ಯೋಜನೆಗಳನ್ನು ಆರಂಭದ ದಿನಗಳಲ್ಲಿ ಜಾರಿ ಮಾಡಲಿದೆ. ಮೊದಲ ದಿನದಿಂದ ಶಾಲಾ ದಾಖಲಾತಿ ಅಂದೋಲನ, ನಗರ ಹಾಗೂ ಪ್ರತಿ ಹಳ್ಳಿಗಳಲ್ಲಿ ಪ್ರಭಾತ ಪೇರಿ ನಡೆಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ದೊರೆಯಲಿದೆ. ಖಾಸಗಿ ಶಾಲೆಗಳು ಜಾಗೃತಿ ಮೂಡಿಸುವ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಭಿತ್ತಿಪತ್ರಗಳ ಮೂಲಕ ಜಾಗೃತಿ ನಡೆಸಲು ಇಲಾಖೆ ಮುಂದಾಗಿದೆ. ಭಿತ್ತಿಪತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯ, ಪ್ರಯೋಜನೆಗಳನ್ನು ಮುದ್ರಿಸಲಾಗುತ್ತದೆ.

ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪೌಢಶಾಲೆಗಳು ಮೇ 29ರಂದು ಆರಂಭವಾಗಲಿದೆ. ಮೇ 28ರಂದು ಶಿಕ್ಷಕರು ಸಭೆ ಸೇರಿ ಶಾಲಾ ಆರಂಭೋತ್ಸವಕ್ಕೆ ಸಿದ್ಧತೆ ನಡೆಸಲಿದ್ದಾರೆ. ಶಿಕ್ಷಣದಿಂದ ಯಾವುದೇ ವಿದ್ಯಾರ್ಥಿ ವಂಚಿತವಾಗಬಾರದು. ಹೀಗಾಗಿ ಈ ಸಾರಿ ವಿನೂತನವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯ, ಪ್ರಯೋಜನೆಗಳನ್ನು ಒಳಗೊಂಡ ಭಿತ್ತಿಪತ್ರ ಮುದ್ರಿಸಿ ಪ್ರತಿ ಮನೆಗೂ ಹಂಚಲಾಗುತ್ತದೆ. ಹಳ್ಳಿಗಳಲ್ಲಿ ಡಂಗೂರ ಸಾರಲಾಗುತ್ತದೆ. ಶಾಲೆಗಳನ್ನು ಶೃಂಗರಿಸಿ ಮೊದಲ ದಿನ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಗುವುದು. ಅಂದು ಮಧ್ಯಾಹ್ನ ಸಿಹಿ ಭೋಜನ ಕೂಟ ನಡೆಯಲಿದೆ. ವರ್ಷವಿಡೀ ಗುಣಮಟ್ಟ ಶಿಕ್ಷಣಕ್ಕೆ, ಫಲಿತಾಂಶ ಸುಧಾರಣೆಗೆ ಒತ್ತು ನೀಡಲಾಗುವುದು. ಇನ್ನೂ ಅನೇಕ ಯೋಜನೆ ಹಾಕಿಕೊಳ್ಳಲಾಗಿದೆ.
ಬಿ.ಎಚ್. ಗೋನಾಳ ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟೆ

Leave a Reply

Your email address will not be published. Required fields are marked *