ಸರ್ಕಾರಿ ಉದ್ಯೋಗ ಕೊಡಿಸೋದಾಗಿ ವಂಚನೆ

ಬಾಗಲಕೋಟೆ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಮಾಡಿದ್ದಾರೆ. ಈ ಬಗ್ಗೆ ಬನಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಅನೀಲ ಧೂಪದಾಳ ಮತ್ತು ಭರತೇಶ ಧೂಪದಾಳ ಆರೋಪಿಸಿದರು.

2016-17ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಸಬ್‌ರಿಜಿಸ್ಟ್ರಾರ್ 63 ಹಾಗೂ ಪಿಎಸ್‌ಐ 59 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ನೇಮಕ ಬಯಸಿ ಅರ್ಜಿ ಹಾಕಿ ಪರೀಕ್ಷೆ ಕೂಡ ಬರೆದಿದ್ದೇವು. ಈ ಸಂದರ್ಭದಲ್ಲಿ ನಮ್ಮ ಊರಿನ ಪಕ್ಕದ ಯಲ್ಲಟ್ಟಿ ಗ್ರಾಮದ ದೇವಸ್ಥಾನಕ್ಕೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಿದ್ದಾಪುರ ಗ್ರಾಮದ ಅಣ್ಣಾಸಾಬ ಕುರಣಿ, ರವಿಕುಮಾರ ಅಸುತಿ, ದುರದುಂಡೇಶ್ವರ ಉಳವಿ, ಸಂಗಪ್ಪ ಉಳವಿ, ತಿಪ್ಪೇಸ್ವಾಮಿ ಬರುತ್ತಿದ್ದರು.

ನಮ್ಮ ತಂದೆ ಕೂಡ ಮೇಲಿಂದ ಮೇಲೆ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಈ ವೇಳೆ ನಮ್ಮ ತಂದೆ ಯಮನಪ್ಪ ಧೂಪದಾಳ ಅವರಿಗೆ ಸಿದ್ದಾಪುರ ಗ್ರಾಮದವರು ಪರಿಚಿತರಾಗಿದ್ದಾರೆ. ನಮಗೆ ಮಂತ್ರಿಗಳು, ಹಿರಿಯ ಅಧಿಕಾರಿಗಳು ಪರಿಚಯ ಇದ್ದಾರೆ. ನಿಮ್ಮ ಮಕ್ಕಳಿಗೆ ನೌಕರಿ ಕೊಡಿಸುತ್ತೇವೆ ಎಂದು ಸಬ್ ರಿಜಿಸ್ಟ್ರಾರ್ ಹುದ್ದೆಗೆ 65 ಲಕ್ಷ ರೂ., ಪಿಎಸ್‌ಐ ಹುದ್ದೆಗೆ 55 ಲಕ್ಷ ರೂ. ಬೇಡಿಕೆ ಇಟ್ಟರು. ಇದನ್ನೆಲ್ಲ ನಂಬಿದ ನಮ್ಮ ತಂದೆ ಯಮನಪ್ಪ 51 ಲಕ್ಷ 50 ರೂ. ನೀಡಿದ್ದಾರೆ. ಕೆಲವು ಮೊತ್ತದ ನಗದನ್ನು ನೇರವಾಗಿ ನೀಡಿದ್ದು, ಬನಹಟ್ಟಿ ಬ್ಯಾಂಕ್ ಅಕೌಂಟ್ ಮೂಲಕವೂ ಹಣ ವರ್ಗಾವಣೆ ಮಾಡಿದ್ದಾರೆ. ಹಲವು ದಿನಗಳ ನಂತರ ನಮಗೆ ಇವರು ಮಾಡಿರುವ ವಂಚನೆ ಅರ್ಥವಾಯಿತು. ಬಳಿಕ ಸಾಕಷ್ಟು ಹೋರಾಟ ನಡೆಸಿದೆವು. 51 ಲಕ್ಷ 50 ರೂ. ಮೊತ್ತದಲ್ಲಿ 20 ಲಕ್ಷ ರೂ.ವಾಪಸ್ ನೀಡಿದ್ದಾರೆ. ಉಳಿದ ಹಣ ನೀಡಿಲ್ಲ ಎಂದು ದೂರಿದರು.

ಅಷ್ಟೇ ಅಲ್ಲದೆ, ಮೂಲ ಶೈಕ್ಷಣಿಕ ದಾಖಲೆಗಳನ್ನು ಕೂಡ ಮರಳಿಸಿಲ್ಲ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಲು 11 ತಿಂಗಳಿಂದ ಅಲೆದಾಡಿದರೂ ಪ್ರಕರಣ ದಾಖಲಿಸಿಕೊಂಡಿಲ್ಲ. ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಮಾಧ್ಯಮಗಳ ಎದುರು ಸಹೋದರರು ಅಳಲು ತೋಡಿಕೊಂಡರು.

ಈಗಾಗಲೇ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ತಮಗೆ ನ್ಯಾಯ ಸಿಗದಿದ್ದರೆ ಸಾಮೂಹಿಕವಾಗಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಇಬ್ಬರು ಸಹೋದರರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. ತಂದೆ ಯಮಪ್ಪ ಧೂಪದಾಳ, ತಾಯಿ ಸುಂದರವ್ವ ಧೂಪದಾಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅನೀಲ ಹಾಗೂ ಭರತೇಶ ಧೂಪದಾಳ ಅವರಿಗೆ ಆಗಿರುವ ವಂಚನೆ ಕುರಿತು ಗಮನಕ್ಕೆ ಬಂದಿದೆ. ಈ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆ ಬನಹಟ್ಟಿ ಪೊಲೀಸರಿಗೆ ಸೂಚನೆ ನೀಡಲಾಗುವುದು. ತನಿಖೆ ಕೈಗೊಂಡು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
ಅಭಿನವ ಖರೆ, ಬಾಗಲಕೋಟೆ ಎಸ್ಪಿ

Leave a Reply

Your email address will not be published. Required fields are marked *