ಕೇಂದ್ರ ಮಂತ್ರಿ ರೇಸ್‌ನಲ್ಲಿ ಅದೃಷ್ಟವಂತ!

ಅಶೋಕ ಶೆಟ್ಟರ
ಬಾಗಲಕೋಟೆ: ಸತತ ನಾಲ್ಕು ಗೆಲುವಿನ ಉತ್ಸಾಹದಲ್ಲಿರುವ ಸಂಸದ ಪಿ.ಸಿ. ಗದ್ದಿಗೌಡರ ಹೆಸರು ಮೋದಿ ಸಂಪುಟದ ಮಂತ್ರಿಗಿರಿ ರೇಸ್‌ನಲ್ಲಿ ಓಡಾಡುತ್ತಿದೆಯಾ ? ಅದೃಷ್ಟವಂತ ರಾಜಕಾರಣಿ ಎಂದು ಕರೆಯಲ್ಪಡುವ ಗೌಡರನ್ನು ಮಂತ್ರಿ ಸ್ಥಾನವೂ ಹುಡುಕಿಕೊಂಡು ಬರಲಿದೆಯಾ ? ಇದಕ್ಕೆ ಪೂರಕ ವಾತಾವರಣ ಇದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ.

ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರುವ ಬಗ್ಗೆ ಅಪಾರ ವಿಶ್ವಾಸದಲ್ಲಿದ್ದ ಬಿಜೆಪಿ ಬಾಗಲಕೋಟೆ ಕ್ಷೇತ್ರದಲ್ಲಿ ಗದ್ದಿಗೌಡರ ಗೆಲುವನ್ನು ಪಕ್ಕಾ ಮಾಡಿಕೊಂಡಿತ್ತು. ಇದೇ ಕಾರಣಕ್ಕೇನೋ ಫಲಿತಾಂಶಕ್ಕೂ ಒಂದು ದಿನ ಮೊದಲೇ ಸಂಸದ ಪಿ.ಸಿ. ಗದ್ದಿಗೌಡರ ಬಗ್ಗೆ ರಾಜ್ಯ ಮತ್ತು ಕೇಂದ್ರ ಕಚೇರಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ಪಕ್ಷದ ಕೇಂದ್ರ ಕಚೇರಿಯಿಂದ ದೂರವಾಣಿಯಲ್ಲಿ ಇವರ ಬಗ್ಗೆ ಮಾಹಿತಿ ಕೇಳಿದ್ದಾರೆ. ಇತ್ತ ರಾಜ್ಯ ಕಚೇರಿಯಿಂದಲೂ ಮಾಹಿತಿ ಕೇಳಿದ್ದು, ಈಗಾಗಲೇ ಇ-ಮೇಲ್ ಮುಖಾಂತರ ಗೌಡರು ಬೆಳೆದು ಬಂದ ರಾಜಕೀಯ ಹಿನ್ನಲೆ, ಎಷ್ಟು ಸಲ ಸಂಸದರು, ಶಾಸಕರು, ವಿಧಾನ ಪರಿಷತ್‌ಗೆ ಆಯ್ಕೆ ಆಗಿದ್ದರು, ಜಾತಿ, ಉಪಜಾತಿ ಹೀಗೆ ಎಲ್ಲ ಮಾಹಿತಿ ಪಡೆದಿದ್ದಾರಂತೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಕಮಲ ಬಾವುಟ ಹಾರಾಡುವಂತೆ ಮಾಡಿದ್ದಲ್ಲದೆ, ಆ ಗೆಲುವನ್ನು ಸತತ ನಾಲ್ಕನೇ ಸಲಕ್ಕೂ ಕೊಂಡೊಯ್ದಿರುವ ಕೀರ್ತಿ ಗದ್ದಿಗೌಡರಿಗೆ ಸಲ್ಲುತ್ತದೆ. 2014ರಲ್ಲಿ ಗೌಡರು ಹ್ಯಾಟ್ರಿಕ್ ಸಾಧಿಸಿದ್ದರೂ ಸಚಿವ ಸ್ಥಾನದ ರೇಸ್‌ನಲ್ಲಿ ಇವರ ಹೆಸರು ಚಾಲ್ತಿಗೆ ಬಂದಿರಲಿಲ್ಲ. ಸ್ವತಃ ಗೌಡರು ಸಹ ಆಕಾಂಕ್ಷಿ ಎಂದು ಹೇಳಿಕೊಂಡಿರಲಿಲ್ಲ. ಆದರೆ, ಇದೀಗ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮಾಧ್ಯಮದವರ ಪ್ರಶ್ನೆಗೆ ರಾಜ್ಯ ಮುಖಂಡರ ನಿರ್ಧಾರಕ್ಕೆ ಬದ್ಧ ಎಂದಿರುವುದು ತಾವೂ ಆಕಾಂಕ್ಷಿ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಲಿಂಗಾಯತ ಕೋಟಾದಲ್ಲಿ ಗೌಡರಿಗೆ ಚಾನ್ಸ್ ?
ಪಿ.ಸಿ. ಗದ್ದಿಗೌಡರಿಗೆ ಈ ಸಲ ಲಿಂಗಾಯತ ಕೋಟಾದಲ್ಲಿ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗಬಹುದು ಎನ್ನುವ ಲೆಕ್ಕಾಚಾರಗಳು ಇವೆ. ಹಿಂದಿನ ಮೋದಿ ಸಂಪುಟದಲ್ಲಿ ಆರಂಭದಲ್ಲಿ ಲಿಂಗಾಯತ ಕೋಟಾದಲ್ಲಿ ಸಿದ್ದೇಶ್ವರ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದರೂ ಬಳಿಕ ಹಿಂಪಡೆದಿದ್ದರು. ಲಿಂಗಾಯತರಿಗೆ ಮಂತ್ರಿಗಿರಿ ಕೊಡಬೇಕು ಎನ್ನುವ ಕೂಗು ದಟ್ಟವಾಗಿತ್ತು. ಈ ಸಲ ರಾಜ್ಯದಲ್ಲಿ ಬಿಜೆಪಿಗೆ ಭರ್ಜರಿ 28 ಸ್ಥಾನಗಳಲ್ಲಿ 25ರಲ್ಲಿ ಗೆಲುವು ಧಕ್ಕಿದೆ. ಹೀಗಾಗಿ ಲಿಂಗಾಯತರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಮುಂಬೈ -ಕರ್ನಾಟಕದಲ್ಲಿ ಈ ಸಮುದಾಯ ಅತ್ಯಂತ ಪ್ರಭಾವ ಹೊಂದಿದ್ದು, ಈ ಭಾಗದಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಸತತ ನಾಲ್ಕು ಸಲ ಗೆದ್ದಿದ್ದಾರೆ. ಗೌಡರು ಲಿಂಗಾಯತ ಗಾಣಿಗ ಸಮುದಾಯದಕ್ಕೆ ಸೇರಿದ್ದು, ಅದೃಷ್ಟ ಕೈಹಿಡಿಯಬಹುದು. ರಾಜ್ಯದ ಮುಖಂಡರು ಗೌಡರ ಪರ ಬ್ಯಾಟಿಂಗ್ ಮಾಡಿದಲ್ಲಿ ಇವರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ವಿರೋಧಿ ರಾಜಕಾರಣ
ಸಂಸದ ಪಿ.ಸಿ. ಗದ್ದಿಗೌಡರ ಆರಂಭದಿಂದಲೂ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಮೂಲತಃ ಜನತಾ ಪರಿವಾರದಲ್ಲಿ ಬೆಳೆದು ಬಂದಿದ್ದ ಇವರು,1982ಲ್ಲಿ ಜನತಾ ಪಕ್ಷದ ಬಾದಾಮಿ ತಾಲೂಕು ಘಟಕದ ಅಧ್ಯಕ್ಷರಾಗಿದ್ದರು. ಬಳಿಕ ಜಿಲ್ಲಾ ಪುನರ್‌ವಿಂಗಡನಾ ಸಮಿತಿ ಅಧ್ಯಕ್ಷರಾಗಿ ನೇಮಕವಾದರು. 1988ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಅವಿರೋಧವಾಗಿ ಆಯ್ಕೆ ಆಗಿದ್ದರು. 1994ರಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಬಾದಾಮಿ ವಿಧಾನಸಭೆಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಅನುಭವಿಸಿದ್ದರು. 2004ರಲ್ಲಿ ರಾಜಕೀಯ ದೃವೀಕರಣದಲ್ಲಿ ಬಿಜೆಪಿ ಪ್ರವೇಶ ಮಾಡಿ ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಪ್ರಥಮ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದಲ್ಲದೆ, ಕ್ಷೇತ್ರದ ಕಮಲ ಅರಳಿಸಿದ್ದರು. 2004ರಿಂದ 2019ರ ವರೆಗೆ ನಾಲ್ಕು ಚುನಾವಣೆಗಳಲ್ಲಿ ಮೂರು ಸಲ ಅವರ ಗೆಲುವಿನ ಅಂತರ ಒಂದು ಲಕ್ಷಕ್ಕೂ ಅಧಿಕ ಎನ್ನುವುದು ವಿಶೇಷ. ಈ ಹಿನ್ನಲೆಯಲ್ಲಿ ಈ ಸಲ ಅವರಿಗೆ ಮಂತ್ರಿಭಾಗ್ಯ ಸಿಗಬಹುದು ಎನ್ನಲಾಗುತ್ತಿದೆ.

ಬಿಎಸ್‌ವೈ ಭೇಟಿ?
ಶನಿವಾರ ನಡೆಯುವ ಸಂಸದರ ಸಭೆಯಲ್ಲಿ ಭಾಗವಹಿಸಲು ಗದ್ದಿಗೌಡರ ದೆಹಲಿಗೆ ತೆರಳಲಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ಬೆಂಗಳೂರಿಗೆ ಹೋಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸತತ ನಾಲ್ಕು ಸಲ ಗೆದ್ದಿದ್ದೇನೆ. ನನಗೆ ಸಚಿವ ಸ್ಥಾನ ನೀಡುವಂತೆ ನಮ್ಮ ಪಕ್ಷದ ರಾಜ್ಯ ಮುಖಂಡರಿಗೆ ಕೋರುತ್ತೇನೆ. ನಿರ್ಧಾರ ನಮ್ಮ ನಾಯಕರಿಗೆ ಬಿಟ್ಟಿದ್ದು. ಸಚಿವ ಸ್ಥಾನ ನೀಡಿದಲ್ಲಿ ಅದನ್ನು ನಿರ್ವಹಿಸಲು ಸಿದ್ಧ.
ಪಿ.ಸಿ.ಗದ್ದಿಗೌಡರ ಸಂಸದರು, ಬಾಗಲಕೋಟೆ.

Leave a Reply

Your email address will not be published. Required fields are marked *