ಕಮಲ ಕಟ್ಟಿಹಾಕಲು ಮಹಿಳಾಸ್ತ್ರ!

ಅಶೋಕ ಶೆಟ್ಟರ
ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ರಣಕಣ ರಂಗೇಳುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿವೆ. ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿಯನ್ನು ಕಟ್ಟಿಹಾಕಲು ಕಾಂಗ್ರೆಸ್ ಪ್ರಬಲ ಮಹಿಳಾಸ ಪ್ರಯೋಗಿಸಿದೆ.

ಈವರೆಗೂ ಪುರುಷರಷ್ಟೆ ಕಾಣಿಸಿಕೊಳ್ಳುತ್ತಿದ್ದ ಬಾಗಲಕೋಟೆ ಲೋಕಸಭಾ ಕಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಮಹಿಳಾ ಅಭ್ಯರ್ಥಿಗೆ ಜೈಕಾರ ಹಾಕಿದ್ದು, ಮಹಿಳಾ ಮತದಾರರಲ್ಲಿ ಹೊಸ ಉತ್ಸಾಹ ಮೂಡಿಸಲು ಮುಂದಾಗಿದೆ.

ಈಗಾಗಲೇ ರಾಜಕಾರಣದಲ್ಲಿ ಪಳಗಿದ ಕುಟುಂಬ ಎಂದೇ ಬಿಂಬಿತವಾಗಿರುವ ಕಾಶಪ್ಪನವರ ಮನೆಯಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಣೆ ಮಾಡಿದ್ದರಿಂದ ಕಣದಲ್ಲಿ ತೀವ್ರ ಪೈಪೋಟಿ ಏರ್ಪಡಲಿದೆ ಎಂದು ಹೇಳಲಾಗುತ್ತಿದೆ.

1980ರಲ್ಲಿ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ, 1991ರಲ್ಲಿ ಲಿಂಗಾಯತ ಗಾಣಿಗ ಸಮುದಾಯ ಸಿದ್ದು ನ್ಯಾಮಗೌಡ ಅವರನ್ನು ಹೊರತುಪಡಿಸಿದಲ್ಲಿ ಈವರೆಗೂ ನಡೆದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ರಡ್ಡಿ ಸಮುದಾಯದವರು ಕಾಣಿಸಿಕೊಂಡಿದ್ದರು. ದೀರ್ಘ ಅವಧಿ ಬಳಿಕ ಮತ್ತೆ ಲಿಂಗಾಯತ(ಪಂಚಮಸಾಲಿ) ಸಮುದಾಯಕ್ಕೆ ಅದರಲ್ಲೂ ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಬದಲಾದ ತಂತ್ರಗಾರಿಕೆ
ಬಾಗಲಕೋಟೆ ಕ್ಷೇತ್ರದಲ್ಲಿ ಸೋಲಿನ ಸರಮಾಲೆ ಹೊತ್ತಿರುವ ಕಾಂಗ್ರೆಸ್ ಪಕ್ಷ ಈ ಸಲ ಶತಾಯಗತಾಯ ಗೆಲುವಿನ ದಡ ಮುಟ್ಟಲೇಬೇಕೆಂದು ತನ್ನ ಚುನಾವಣಾ ರಣನೀತಿಯನ್ನು ಬದಲಿಸಿದೆ. ಈವರೆಗೆ ಹಾವೇರಿ ಲೋಕಸಭೆಗೆ ಮುಸ್ಲಿಂ ಹಾಗೂ ಬಾಗಲಕೋಟೆಗೆ ರಡ್ಡಿ ಸಮುದಾಯಕ್ಕೆ ಟಿಕೆಟ್ ಹಂಚಿಕೆ ಮಾಡುತ್ತಿದ್ದನ್ನು ಈ ಸಲ ಬದಲಾಯಿಸಿದೆ. ರಡ್ಡಿ ಸಮುದಾಯಕ್ಕೆ ಟಿಕೆಟ್‌ನ್ನು ಹಾವೇರಿಗೆ ಶಿಫ್ಟ್ ಮಾಡಿದ್ದು, ಇಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಿದೆ.

ಇಬ್ಬರದ್ದು ಪ್ರಬಲ ಸಮುದಾಯ
ಸದ್ಯ ಬಿಜೆಪಿಯಿಂದ ಸತತ ಮೂರು ಸಲ ಗೆದ್ದಿರುವ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಅವರನ್ನೇ ಆ ಪಕ್ಷದ ಅಭ್ಯರ್ಥಿಯನ್ನಾಗಿ ಮತ್ತೆ ಕಣಕ್ಕೆ ಇಳಿಸಲಾಗಿದೆ. ಅವರ ಎದುರಾಳಿಯಾಗಿ ದೋಸ್ತಿ ಪಕ್ಷಗಳ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ ಅಭ್ಯರ್ಥಿ ಆಗಲಿದ್ದಾರೆ.

ಕ್ಷೇತ್ರದಲ್ಲಿ ಪ್ರಬಲವಾಗಿರುವ ಗಾಣಿಗ ಸಮುದಾಯದ ಪಿ.ಸಿ.ಗದ್ದಿಗೌಡರ ಹಾಗೂ ಪಂಚಮಸಾಲಿ ಸಮಾಜದ ವೀಣಾ ಕಾಶಪ್ಪನವರ ಚುನಾವಣಾ ಕುರುಕ್ಷೇತ್ರದಲ್ಲಿ ಕದನಕ್ಕೆ ಇಳಿಯಲಿದ್ದು, ಜಾತಿ ಸಮೀಕರಣದಲ್ಲೂ ಎರಡು ಪಕ್ಷಗಳು ತಮ್ಮದೇ ಆದ ಮತಬ್ಯಾಂಕ್ ಹೊಂದಿವೆ. ಇದರ ಜತೆಗೆ ಕಾಂಗ್ರೆಸ್ ಪಕ್ಷ ಮಹಿಳೆಗೆ ಟಿಕೆಟ್ ಕೊಟ್ಟಿರುವುದರಿಂದ ಮಹಿಳಾ ಮತಬುಟ್ಟೆಗೆ ಕನ್ನಹಾಕಲು ತಂತ್ರರೂಪಿಸುತ್ತಿದೆ.

ರಾಜಕೀಯ ಪಟ್ಟು ಬಲ್ಲವರು
ಚುನಾವಣೆ ಕಣಕ್ಕೆ ಇಳಿಯಲಿರುವ ಪಿ.ಸಿ.ಗದ್ದಿಗೌಡರ ಈಗಾಗಲೇ ರಾಜಕೀಯದಲ್ಲಿ ಪಳಗಿದ ಹುಲಿ. ಮೂಲತಃ ಜನತಾ ಪರಿವಾರದಿಂದ ಬಂದಿರುವ ಅವರು ಹೆಗಡೆ ಅವರನ್ನು ಹತ್ತಿರದಿಂದ ಬಲ್ಲವರು. ಜನತಾದಳದಿಂದ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಒಂದು ಸಲ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಅವರು 2004ರಲ್ಲಿ ಬಿಜೆಪಿ ಸೇರಿ ಸಂಸತ್ ಪ್ರವೇಶ ಮಾಡಿದ ಬಳಿಕ ಈವರೆಗೂ ಹಿಂತಿರುಗಿ ನೋಡಿಲ್ಲ. ಗೆಲುವಿನ ನಾಗಾಲೋಟದಲ್ಲಿದ್ದಾರೆ. ಚುನಾವಣೆ ಗೆಲುವಿನ ತಂತ್ರಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದು, ಈ ಸಲವೂ ತಮ್ಮ ರಾಜಕೀಯ ಪಟ್ಟುಗಳನ್ನು ಪ್ರಯೋಗಿಸಿ ಗೆಲುವು ಸಾಧಿಸುವ ಉತ್ಸಾಹದಲ್ಲಿ ಇದ್ದಾರೆ.

ಇನ್ನು ವೀಣಾ ಕಾಶಪ್ಪನವರ ಮೊದಲ ಸಲ ಲೋಕಸಭೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ರಾಜಕೀಯ ಅವರ ಕುಟುಂಬಕ್ಕೆ ಹೊಸದೇನು ಅಲ್ಲ. ಸ್ವತಃ ವೀಣಾ ಅವರು ಜಿಪಂ ಅಧ್ಯಕ್ಷೆಯಾಗಿ 33 ತಿಂಗಳು ಅಧಿಕಾರ ನಡೆಸಿದ್ದಾರೆ. ಇವರ ಪತಿ ವಿಜಯಾನಂದ ಕಾಶಪ್ಪನವರ ಕಳೆದ ಬಾರಿ ಹುನಗುಂದ ಕ್ಷೇತ್ರದ ಶಾಸಕರಾಗಿದ್ದರು. ವೀಣಾ ಅವರ ಅತ್ತೆ ಗೌರಮ್ಮ ಕಾಶಪ್ಪನವರ ಸಹ ಶಾಸಕಿಯಾಗಿದ್ದರು. ಮಾವ(ಪತಿಯ ತಂದೆ)ದಿ. ಎಸ್. .ಆರ್. ಕಾಶಪ್ಪನವರ ಹುನಗುಂದ ಕ್ಷೇತ್ರದಿಂದ ಮೂರು ಸಲ ಶಾಸಕರಾಗಿದ್ದರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಕುಟುಂಬ ರಾಜಕೀಯ ಕ್ಷೇತ್ರದಲ್ಲಿ ಸೋಲು-ಗೆಲುವು ಎರಡನ್ನು ಅನುಭವಿಸಿದ್ದರೂ ರಾಜಕೀಯ ಪಟ್ಟುಗಳನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದೆ. ಚುನಾವಣಾ ಕದನ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ಸಿಗೆ ಬೇಕಿದೆ ಒಗ್ಗಟ್ಟಿನ ಬಲ
ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ಸಿಗರೇ ಸಾಕು ಎನ್ನುವ ಅಪವಾದವೊಂದು ಯಾವಾಗಲೂ ಕೇಳಿ ಬರುತ್ತಿದೆ. ಜಿಲ್ಲೆಯಲ್ಲೂ ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡರೂ ಅಂತರಾಳದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗ ಸತ್ಯ! ಹೀಗಾಗಿ ಕ್ಷೇತ್ರದಲ್ಲಿ ಅಭೇದ್ಯ ಕೋಟೆ ಕಟ್ಟಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರದ ಅವಶ್ಯಕತೆ ಇದೆ. ಮುಖಂಡರ ನಡುವೆಯೇ ಅನೇಕ ಭಿನ್ನಾಭಿಪ್ರಾಯ ಇರುವುದು ಆಗಾಗ ಬಹಿರಂಗ ಆಗುತ್ತಲೇ ಬಂದಿದೆ. ಭಿನ್ನಾಭಿಪ್ರಾಯ ಸರಿಪಡಿಸಿಕೊಂಡರೆ ಮಾತ್ರ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೇ ವಿನಾ ಈಗ ಇರುವ ಪರಿಸ್ಥಿತಿ ಮುಂದುವರಿದಲ್ಲಿ ಒಳಪೆಟ್ಟು ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಈ ಸಮಸ್ಯೆ ಬಿಜೆಪಿಯಲ್ಲಿ ಇಲ್ಲವೆಂದಲ್ಲ. ಅದು ದೊಡ್ಡಮಟ್ಟದಲ್ಲಿ ಎದ್ದು ಕಾಣಿಸುತ್ತಿಲ್ಲ. ಅಲ್ಲಿಯೂ ಗದ್ದಿಗೌಡರಿಗೆ ಒಂದಷ್ಟು ಜನರು ಒಳಪೆಟ್ಟು ಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ, ಗದ್ದಿಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅಲೆ ದೊಡ್ಡಮಟ್ಟದಲ್ಲಿ ಕೈಹಿಡಿಯುವ ಸಾಧ್ಯತೆ ಇರುವುದರಿಂದ ಅತೃಪ್ತರ ತೆರೆ ಹಿಂದಿನ ಆಟ ಸೌಂಡ್ ಮಾಡಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಮಹಿಳೆಗೆ ಸ್ಪರ್ಧಿಸುವ ಅವಕಾಶ ನೀಡಿದ್ದು ಖುಷಿ ವಿಚಾರ. ರಾಜ್ಯ ಮುಖಂಡರ ಜತೆಗೆ ಜಿಲ್ಲೆಯ ಎಲ್ಲ ಹಿರಿ-ಕಿರಿ ಮುಖಂಡರು ಸೇರಿ ನನಗೆ ಟಿಕೆಟ್ ಕೊಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಧನೆಗಳು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾನು ಹೊಂದಿರುವ ಕಲ್ಪನೆ ಹಾಗೂ ಜಿಪಂ ಅಧ್ಯಕ್ಷೆಯಾಗಿ ಗ್ರಾಮ ವಾಸ್ತವ್ಯದಂತ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದು ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ.
ವೀಣಾ ಕಾಶಪ್ಪನವರ, ಕಾಂಗ್ರೆಸ್ ಅಭ್ಯರ್ಥಿ

ಚುನಾವಣೆಯಲ್ಲಿ ನನ್ನ ಎದುರಾಳಿ ಯಾರು ಎನ್ನುವುದು ನನಗೆ ಮುಖ್ಯವಲ್ಲ. ಚುನಾವಣೆ ಎಂದ ಮೇಲೆ ಸಹಜವಾಗಿ ನಡೆಯುವ ಹೋರಾಟವನ್ನು ನಾನು ಮಾಡುತ್ತೇನೆ. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನಗೆ ತೃಪ್ತಿ ಇದೆ. ಆದರೆ, ರಾಜ್ಯ ಸರ್ಕಾರ ಸರಿಯಾಗಿ ಸ್ಪಂದನೆ ನೀಡದೆ ಇದ್ದಿದ್ದಕ್ಕೆ ಕಾಮಗಾರಿಗಳು ಸ್ವಲ್ಪ ವಿಳಂಬ ಆಗಿವೆ. ಅಭಿವೃದ್ಧಿ ಯೋಜನೆಗಳನ್ನು ಸಾಕಷ್ಟು ತಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕಾರ್ಯಗಳು ಹಾಗೂ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರ ಶಕ್ತಿಯಿಂದಾಗಿ ಮತ್ತೊಮ್ಮೆ ನನ್ನ ಗೆಲುವು ಖಚಿತ.
ಪಿ.ಸಿ.ಗದ್ದಿಗೌಡರ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ