ಕಾಶಪ್ಪನವರ ಬಹಿರಂಗ ಕ್ಷಮೆಯಾಚನೆ

ಬಾಗಲಕೋಟೆ: ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಸಂದರ್ಭದಲ್ಲಿ ನನ್ನೊಳಗೆ ತಪ್ಪು ಕಲ್ಪನೆ, ತಿಳಿವಳಿಕೆ ಮೂಡಿದ್ದರಿಂದ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಮಾತನಾಡಿದ್ದೆ. ಸೋಲಿನ ನೋವಿನಿಂದ ಹೊರಗೆ ಬಂದ ಮಾತುಗಳವು. ಅದಕ್ಕೆ ಇದೀಗ ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಚುನಾವಣೆಯಲ್ಲಿ ಸೋಲು ಆಗಿದ್ದರಿಂದ ಬಹಳ ಮನಸ್ಸಿಗೆ ನೋವು ಆಗಿತ್ತು. ಹೀಗಾಗಿ ಅಂದಿನ ಕೆಪಿಸಿಸಿ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ, ವಿ.ಪ. ಸದಸ್ಯ ಎಸ್.ಆರ್. ಪಾಟೀಲ, ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಮುಖಂಡ ರವೀಂದ್ರ ಕಲಬುರ್ಗಿ ಅವರ ವಿರುದ್ಧ ಮಾತನಾಡಿ ಪಕ್ಷದ ನಾಯಕರಿಗೆ ದೂರು ನೀಡಿದ್ದೆ. ನಂತರ ದಿನಗಳಲ್ಲಿ ನನ್ನೊಳಗಿನ ತಪ್ಪು ಕಲ್ಪನೆಗಳ ಬಗ್ಗೆ ಅರಿವಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಸಹ ಸಭೆ ನಡೆಸಿ ಮನವರಿಕೆ ಮಾಡಿದರು. ಈಗಾಗಲೇ ಈ ಎಲ್ಲ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಕ್ಷಮೆ ಕೇಳಿದ್ದೇನೆ. ಅಂದು ಬಹಿರಂಗ ಹೇಳಿಕೆ ನೀಡಿದ್ದರಿಂದ ಇಂದು ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೇನೆ ಹೊರತು ಪತ್ನಿ ವೀಣಾ ಕಾಶಪ್ಪನವರ ಲೋಕಸಭೆ ಅಭ್ಯರ್ಥಿಯಾಗಿದ್ದಾರೆಂಬ ಕಾರಣಕ್ಕಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾರೂ ವೈರಿಗಳಲ್ಲ, ಮಿತ್ರರಲ್ಲ !
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದೆ. ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ. ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನನ್ನ ವಿರುದ್ಧ ಕಣಕ್ಕೆ ಇಳಿದಿದ್ದರು. ಆ ಸಂದರ್ಭದಲ್ಲಿ ಪರಸ್ಪರ ಮಾತಿನ ಸಮರ ನಡೆಸಿದ್ದೆವು. ಇದೀಗ ಎಲ್ಲವನ್ನೂ ಮರೆತು ಒಗ್ಗಟ್ಟಿನಿಂದ ಚುನಾವಣೆ ಮಾಡಲಿದ್ದೇವೆ. ಇನ್ನು ಹುನಗುಂದ ಭಾಗದ ಕೆಲ ಮುಖಂಡರು ಪಕ್ಷ ತೊರೆದು ಎಂಐಎಂನಲ್ಲಿದ್ದಾರೆ. ಅವರು ಪಕ್ಷಕ್ಕೆ ಮರಳುತ್ತಾರೆಂದರೇ ಸ್ವಾಗತಿಸುತ್ತೇವೆ. ಕಾಂಗ್ರೆಸ್ ಸರ್ವ ಜನಾಂಗವನ್ನು ಪ್ರೀತಿ, ಗೌರವದಿಂದ ಕಾಣುತ್ತದೆ. ಯಾರೇ ಬಂದರೂ ಬರಮಾಡಿಕೊಳ್ಳುತ್ತದೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ವೈರಿಗಳಲ್ಲ, ಮಿತ್ರರೂ ಅಲ್ಲ ಎಂದರು.

ಡಿಸಿಸಿ ಬಗ್ಗೆ ನಾಯಕರು ನಿರ್ಧರಿಸುತ್ತಾರೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಒಪ್ಪಂದ ಕುರಿತು ಇದೀಗ ಏನು ಹೇಳುವದಿಲ್ಲ. ಒಪ್ಪಂದ ಆಗಿರುವ ಕುರಿತು ಹಿರಿಯ ಗಮನಕ್ಕೆ ತಂದಿದ್ದೇನೆ. ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದ ಕಾಶಪ್ಪನವರ, ರಾಜ್ಯ ಸರ್ಕಾರದ ಸಚಿವರ ಮೇಲೆ ನಡೆದಿರುವ ಐಟಿ ದಾಳಿ ದ್ವೇಷದಿಂದ ಕೂಡಿದೆ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷ, ರಾಜಕಾರಣಿ ಇರಲಿ ದ್ವೇಷದ ರಾಜಕಾರಣ ಮಾಡಬಾರದು ಎಂದು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಎಲ್. ಶಾಂತಗೇರಿ, ಗಂಗಾಧರ ದೊಡ್ಡಮನಿ, ಬಿ.ವಿ. ಪಾಟೀಲ, ಬಸವರಾಜ ಗಟ್ಟಿ, ಬಸವರಾಜ ಅಂಗಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಏ.1ರಂದು ಬಹಿರಂಗ ಸಮಾವೇಶ, ಮೆರವಣಿಗೆ
ಶುಭ ಮುಹೂರ್ತ ನೋಡಿ ಗುರುವಾರ ವೀಣಾ ಕಾಶಪ್ಪನವರ ಕಾಂಗ್ರೆಸ್‌ದ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಾ.1ರಂದು ಬಾಗಲಕೋಟೆಯಲ್ಲಿ ಬಹಿರಂಗ ಮೆರವಣಿಗೆ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದೇವೆ. ಸಕ್ರಿ ಕಾಲೇಜು ಮೈದಾನದಲ್ಲಿ ಸಮಾವೇಶ ಏರ್ಪಡಿಸಲಾಗುವುದು.

ಈ ವೇಳೆ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಿಎಂ ಸಿದ್ದರಾಮಯ್ಯ, ಮುಖಂಡರಾದ ಜಿ. ಪರಮೇಶ್ವರ್, ಎಸ್.ಆರ್. ಪಾಟೀಲ, ಸಿ.ಎಂ. ಇಬ್ರಾಹಿಂ, ಜಮೀರ್‌ಅಹ್ಮದ್, ಆರ್.ಬಿ. ತಿಮ್ಮಾಪುರ, ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ಎಸ್.ಜಿ. ನಂಜಯ್ಯನಮಠ, ಅಜಯಕುಮಾರ ಸರನಾಯಕ ಸೇರಿ ಜಿಲ್ಲೆ ಎಲ್ಲ ನಾಯಕರು ಆಗಮಿಸಲಿದ್ದಾರೆ ಎಂದು ಕಾಶಪ್ಪನವರ ಹೇಳಿದರು.

ಪ್ರಿಯಾಂಕ ಗಾಂಧಿಗೆ ಆಹ್ವಾನ
ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ ಸ್ಪರ್ಧೆ ಮಾಡಿದ್ದರಿಂದ ಪಕ್ಷದ ರಾಷ್ಟ್ರಮಟ್ಟದ ನಾಯಕಿ ಪ್ರಿಯಾಂಕ ಗಾಂಧಿ ಅವರು ಜಿಲ್ಲೆಗೆ ಆಗಮಿಸಿ ರ‌್ಯಾಲಿ ನಡೆಸುವಂತೆ ಆಹ್ವಾನ ನೀಡಿರುವುದಾಗಿ ಕಾಶಪ್ಪನವರ ತಿಳಿಸಿದರು.