ಅಮಾನತು ಆದೇಶ ಹಿಂಪಡೆದ ಜಿಪಂ ಸಿಇಒ

ಬಾಗಲಕೋಟೆ: ಅಧಿಕಾರಿಗಳು ಮತ್ತು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ನಡುವಿನ ಸಂಘರ್ಷ ಕೊನೆಗೂ ಅಂತ್ಯಗೊಂಡಿದೆ. ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ ಅಮಾನತು ಆದೇಶ ರದ್ದುಪಡಿಸಿದ ನಂತರ ಶಿಕ್ಷಕರು, ಕಾರ್ಯಕರ್ತೆಯರು ಮುಷ್ಕರ ಹಿಂಪಡೆದಿದ್ದಾರೆ.

14 ಶಿಕ್ಷಕರು ಹಾಗೂ ಐವರು ಅಂಗನವಾಡಿ ಕಾರ್ಯಕರ್ತೆಯರ ಅಮಾನತು ಆದೇಶ ಕ್ರಮ ಖಂಡಿಸಿ ಜಿಲ್ಲೆಯ ಪ್ರಾಥಮಿಕ ಶಾಲೆ ಶಿಕ್ಷಕರು, ಅಂಗನವಾಡಿ ಕಾರ್ಯಕತೆರ್ಯರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಹೋರಾತ್ರಿ ಧರಣಿ ಕುಳಿತಿದ್ದರು. ಕೊನೆಗೂ ಒತ್ತಡಕ್ಕೆ ಮಣಿದಿರುವ ಸಿಇಒ ಗಂಗೂಬಾಯಿ ಮಾನಕರ ಸೋಮವಾರ ತಡರಾತ್ರಿಯಲ್ಲಿ ಅಮಾನತು ಆದೇಶ ರದ್ದುಪಡಿಸಿದರು. ಈ ಆದೇಶ ಪ್ರತಿಯನ್ನು ಸಂಬಂಧಿಸಿದ ನೌಕರರಿಗೆ ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಜಿಪಂ ಉಪಕಾರ್ಯದರ್ಶಿ ದುರ್ಗೆಶ ರುದ್ರಾಕ್ಷಿ ತಲುಪಿಸಿದ ಬಳಿಕ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಧರಣಿ ಹಿಂಪಡೆದರು. ಮಂಗಳವಾರ ಎಂದಿನಂತೆ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳು ಕಾರ್ಯಾರಂಭ ಮಾಡಿದವು.

ಶಾಲೆಗೆ ಮತ್ತೆ ಸಿಇಒ ಭೇಟಿ: ನವನಗರದ ಸರ್ಕಾರಿ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ನಂ.7ಕ್ಕೆ ಡಿ.11 ರಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಆಕಸ್ಮಿಕ ಭೇಟಿ ನೀಡಿ ಅಲ್ಲಿಯ ಲೋಪಗಳನ್ನು ಗಮನಿಸಿ 12 ಶಿಕ್ಷಕರನ್ನು ಅಮಾನತು ಮಾಡಿದ್ದರು. ಅಮಾನತು ಆದೇಶ ರದ್ದುಪಡಿಸಿದ ಬಳಿಕ ಮಂಗಳವಾರ ಬೆಳಗ್ಗೆ ಸಿಇಒ ಮಾನಕರ, ಶಿಕ್ಷಣ ಇಲಾಖೆ ವಿವಿಧ ಅಧಿಕಾರಿಗಳೊಂದಿಗೆ ಮತ್ತೆ ಆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಈ ಶಾಲೆಯ ಶೈಕ್ಷಣಿಕ ಗುಣಮಟ್ಟ ತೀರಾ ಕೆಳ ಮಟ್ಟದಲ್ಲಿದೆ. ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಒತ್ತು ನೀಡಬೇಕು. ಶಾಲೆ ಆವರಣ, ಕೊಠಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ನೀಡುವ ಬಿಸಿಯೂಟ ಗುಣಮಟ್ಟದಿಂದ ಕೂಡಿರಬೇಕು. ಬ್ಲ್ಯಾಕ್ ಬೋರ್ಡ್ ದುರಸ್ತಿ ಮಾಡಿಸಬೇಕು. ಮತ್ತೆ ತಪ್ಪು ಕಂಡು ಬಂದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.

ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಎಸ್​ಐ ಕೆ.ಎಚ್.ಮುಜಾವರ, ಪಿಆರ್​ಪಿ ಎಂ.ಎಸ್. ಹಿರೇಮಠ, ಇಸಿಒ ಎಸ್.ಪಿ.ಹುಲ್ಯಾಳ, ಬಿಆರ್​ಪಿ ಎಸ್.ಎಸ್.ಸಾರಂಗಮಠ, ಸಿಆರ್​ಸಿ ಎಂ.ಬಿ.ಮನಿಯಾರ ಇದ್ದರು.

ಅಮಾನತು ರದ್ದು ಆದೇಶ ಪತ್ರದಲ್ಲಿ ಏನಿದೆ?

ಶಿಕ್ಷಕರ ಸಂಘಟನೆ ಪ್ರತಿಭಟನೆ ನಡೆಸಿ ಅಮಾನತು ಆದೇಶ ರದ್ದು ಪಡಿಸುವಂತೆ ಕೋರಿದೆ. ಅಲ್ಲದೆ, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವಿಧಾನ ಪರಿಷತ್ ಸದಸ್ಯರು, ಜಿಪಂ ಅಧ್ಯಕ್ಷರು ದೂರವಾಣಿ ಮೂಲಕ ಮಾತನಾಡಿ ಆದೇಶ ರದ್ದುಪಡಿಸುವಂತೆ ತಿಳಿಸಿದ್ದರಿಂದ ಸಾರ್ವಜನಿಕ, ಆಡಳಿತಾತ್ಮಕ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರಿ ಕಾಯ್ದೆ 10(5)(ಸಿ) ಅನ್ವಯ ಅಮಾನತು ಆದೇಶ ರದ್ದುಗೊಳಿಸಲಾಗಿದೆ. ಶಾಲೆಯಲ್ಲಿ ಮತ್ತೆ ಲೋಪಗಳಾಗದಂತೆ ನೋಡಿಕೊಳ್ಳಬೇಕು. ಕೂಡಲೇ ಮರಳಿ ತಮ್ಮ ಶಾಲೆಗೆ ಹಾಜರಾಗಿ ಕಾರ್ಯನಿರ್ವಹಿಸಬೇಕು ಎಂದು ಆದೇಶ ಪತ್ರದಲ್ಲಿ ಜಿಪಂ ಸಿಇಒ ಗಂಗೂಬಾಯಿ ಮಾನಕರ ಶಿಕ್ಷಕರಿಗೆ ಸೂಚಿಸಿದ್ದಾರೆ.