ಜಿಲ್ಲೆಗೆ 75 ಕೋಟಿ ರೂ. ಬಿಡುಗಡೆ

ಬಾಗಲಕೋಟೆ: ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಸರ್ಕಾರದಿಂದ ಈವರೆಗೆ 75 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ವಿವಿಧ ನೋಡಲ್ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮೊದಲು 10 ಕೋಟಿ, ಸೋಮವಾರ 25 ಕೋಟಿ ಹಾಗೂ ಮಂಗಳವಾರ 40 ಕೋಟಿ ಸೇರಿ 75 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ತಲಾ 10 ಸಾವಿರ ರೂ.ಗಳಂತೆ ಆರ್‌ಟಿಜಿಎಸ್ ಮೂಲಕ ನೇರವಾಗಿ 8500 ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಸೋಮವಾರ 8.5 ಕೋಟಿ ರೂ. ಜಮಾ ಮಾಡಲಾಗಿದೆ. ಬುಧವಾರ 15 ಸಾವಿರ ಹಾಗೂ ಇನ್ನೆರಡು ದಿನದಲ್ಲಿ ಮತ್ತೆ 15 ಸಾವಿರ ಸೇರಿ 30 ಸಾವಿರ ಸಂತ್ರಸ್ತರಿಗೆ ಹಣ ಜಮೆ ಮಾಡಲಾಗುವುದು ಎಂದು ತಿಳಿಸಿದರು.

ಪಾರದರ್ಶಕ ಕಾರ್ಯ:
ಪ್ರವಾಹ ಪರಿಹಾರವನ್ನು ನುರಿತ ತಂಡಗಳ ಮೂಲಕ ನೇರವಾಗಿ ಆಯಾ ಸಂತ್ರಸ್ತರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯ ಸಂಪೂರ್ಣ ಪಾರದರ್ಶಕವಾಗಿ ನಡೆದಿದೆ. ಪರಿಹಾರದಲ್ಲಿ ಯಾವುದೇ ದುರುಪಯೋಗಕ್ಕೆ ಅವಕಾಶ ನೀಡದೆ ಅಧಿಕಾರಿಗಳು ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. 2 ದಿನಗಳಿಂದ ಸಂತ್ರಸ್ತರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗಳ ಆರ್‌ಟಿಜಿಎಸ್ ಕ್ರೋಡೀಕರಣದತ್ತ ಗಮನ ಹರಿಸಲಾಗಿತ್ತು. ಇವೆಲ್ಲವನ್ನು ಸಂಗ್ರಹಿಸಲಾಗಿದೆ ಎಂದು ಡಿಸಿ ತಿಳಿಸಿದರು.

ತಾತ್ಕಾಲಿಕ ಶೆಡ್ ನಿರ್ಮಾಣ :
ಪ್ರವಾಹದಿಂದ ಸಂಪೂರ್ಣವಾಗಿ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಕೊಡಲಾಗುತ್ತಿದೆ. ಲೋಕೋಪಯೋಗಿ, ನಿರ್ಮಿತಿ ಕೇಂದ್ರ ಹಾಗೂ ಭೂಸೇನಾ ನಿಗಮದಿಂದ ಜಂಟಿಯಾಗಿ ತಾತ್ಕಾಲಿಕ ಶೆಡ್ ನಿರ್ಮಿಸುವ ಕಾರ್ಯ ಮಾಡಲಾಗುತ್ತದೆ. ಸಂಪೂರ್ಣ ಮನೆ ಹಾಳಾಗಿರುವ ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುವ ಸಂತ್ರಸ್ತರಿಗೆ ಗರಿಷ್ಠ 10 ತಿಂಗಳ ಅವಧಿಗೆ ಸೀಮಿತಗೊಳಿಸಿ ಮಾಸಿಕ 5 ಸಾವಿರ ರೂ.ಗಳಂತೆ ಬಾಡಿಗೆ ಮೊತ್ತವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಪಟ್ಟದಕಲ್ಲು ಸಂಪೂರ್ಣ ಸ್ಥಳಾಂತರಕ್ಕೆ ಡಿಸಿ ಒಲವು :
ಪ್ರವಾಹದಿಂದ ತತ್ತರಿಸಿದ ಐತಿಹಾಸಿಕ ಸ್ಮಾರಕಗಳ ತಾಣವಾದ ಪಟ್ಟದಕಲ್ಲು ಗ್ರಾಮವನ್ನು ಸಂಪೂರ್ಣ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಗಳು ಒಲವು ತೋರಿದ್ದು, ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಆಸರೆ ಮನೆ :
2009ರ ಪ್ರವಾಹದ ನಂತರ ನಿರಾಶ್ರಿತರಿಗಾಗಿ ಸಾವಿರಾರು ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಸಂತ್ರಸ್ತರು ಬಳಸದ ಕಾರಣ ಆಸರೆ ಮನೆಗಳು ಶಿಥಿಲಗೊಂಡಿವೆ. ಅವುಗಳನ್ನು ಪುನಃ ದುರಸ್ತಿ ಮಾಡಿಸುವ ಜತೆಗೆ ಸುತ್ತಮುತ್ತ ಬೆಳೆದಿರುವ ಜಾಲಿಕಂಟಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲವರಿಗೆ ಹಕ್ಕುಪತ್ರ ವಿತರಣೆ ಬಾಕಿ ಸೇರಿ ಇನ್ನಿತರ ವಿಷಯಗಳನ್ನು ಬಗೆಹರಿಸುವ ವಿಶ್ವಾಸವನ್ನು ಡಿಸಿ ವ್ಯಕ್ತಪಡಿಸಿದರು. ಸಂಪೂರ್ಣ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರು ತಾವೇ ತಮ್ಮ ಅನುಕೂಲದಂತೆ ಮನೆ ನಿರ್ಮಿಸಿಕೊಳ್ಳುವುದಾದರೆ ಹಂತ ಹಂತವಾಗಿ 5 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಪಿಡಿಒ ಹಾಗೂ ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆ ಎಂದರು.

ಪ್ರಾಣಹಾನಿ ಪರಿಹಾರ ವಿತರಣೆ :
ಪ್ರವಾಹದಿಂದ ಇಲ್ಲಿವರೆಗೆ 3 ಜನ ಮೃತಪಟ್ಟಿದ್ದು, ತಲಾ 5 ಲಕ್ಷ ರೂ.ಗಳಂತೆ 15 ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ. 150 ಜಾನುವಾರುಗಳು ಸಾವಿಗೀಡಾಗಿದ್ದು, ಒಟ್ಟು 5 ಲಕ್ಷ ರೂ. ಪರಿಹಾರ ಧನವನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ 24,800 ಮನೆಗಳು ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಡಿಎಚ್‌ಒ ಡಾ.ಅನಂತ ದೇಸಾಯಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಬಾಗಲಕೋಟೆ ನಗರಸಭೆ ಆಯುಕ್ತ ಗಣಪತಿ ಪಾಟೀಲ ಸೇರಿ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *