ಮನೆ ಹಾನಿ ಸಮೀಕ್ಷೆ ಆರಂಭ

ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸಾಕಷ್ಟು ಮನೆಗಳು ಹಾನಿಗೊಳಗಾಗಿದ್ದು, ವಿವಿಧ ನುರಿತ ಇಂಜಿನಿಯರಗಳನ್ನು ಒಳಗೊಂಡ ತಂಡದಿಂದ ಗ್ರಾಮವಾರು ಮನೆಗಳ ಹಾನಿ ಸಮೀಕ್ಷೆ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಉಪವಿಭಾಗ ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇವರ ಜತೆಗೆ ವಿವಿಧ ತಾಂತ್ರಿಕ ಕಾಲೇಜುಗಳ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹಾಗೂ ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ತಂಡದೊಂದಿಗೆ ಜಂಟಿಯಾಗಿ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಾಗಲಕೋಟೆ ಇಂಜಿನಿಯರಿಂಗ್ ಕಾಲೇಜು, ಬಿವಿವಿಎಸ್ ಪಾಲಿಟೆಕ್ನಿಕ್, ಸರ್ಕಾರಿ ಪಾಲಿಟೆಕ್ನಿಕ್, ಗುಳೇದಗುಡ್ಡದ ಬಿವಿವಿಎಸ್ ಪಾಲಿಟೆಕ್ನಿಕ್, ಹುನಗುಂದದ ಸಿ.ವಿ.ಚರಂತಿಮಠ ರೂರಲ್ ಪಾಲಿಟೆಕ್ನಿಕ್, ಮುಧೋಳದ ಬೀಳೂರು ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜು, ಮಹಾಲಿಂಗಪುರದ ಕೆಎಲ್‌ಇ ಸೊಸೈಟಿ ಪಾಲಿಟೆಕ್ನಿಕ್, ಬೀಳಗಿ ಮತ್ತು ರಬಕವಿ-ಬನಹಟ್ಟಿಯ ಸರ್ಕಾರಿ ಪಾಲಿಟೆಕ್ನಿಕ್‌ನ ತಲಾ 6 ಜನ ತಾಂತ್ರಿಕ ಸಿಬ್ಬಂದಿ ಸೇರಿ ಒಟ್ಟು 54 ತಾಂತ್ರಿಕ ಸಿಬ್ಬಂದಿಯನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದರು.

ಸರ್ಕಾರದ ಆದೇಶದನ್ವಯ ಶೇ.15 ರಿಂದ ಶೇ.25 ರಷ್ಟು ಮೂಲ ರಚನೆಗೆ ಧಕ್ಕೆಯಾಗದೆ ಅಲ್ಪಸ್ವಲ್ಪ ಹಾನಿಗೀಡಾದ ಮನೆಗಳಿಗೆ 25 ಸಾವಿರ ಹಾಗೂ ಶೇ.25 ರಿಂದ ಶೇ.75ರಷ್ಟು ಮನೆ ಗೋಡೆ ಅಥವಾ ತಾರಸಿ ಪುನರ್ ನಿರ್ಮಾಣ ಅಗತ್ಯವಿರುವ ಭಾಗಶಃ ಹಾನಿಗೀಡಾದ ಮನೆಗಳಿಗೆ 1ಲಕ್ಷ ರೂ.ಪರಿಹಾರಧನ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಂಪೂರ್ಣ ಹಾನಿಗೊಳಗಾದ ಮನೆಗಳ ಸಂಪೂರ್ಣ ಪುನರ್ ನಿರ್ಮಾಣಕ್ಕಾಗಿ ಪ್ರತಿ ಮನೆಗೆ 5 ಲಕ್ಷ ರೂ.ಪರಿಹಾರ ಧನ ನೀಡಲಾಗುವುದು. ಸಂಪೂರ್ಣ ಮನೆ ಹಾನಿಗೊಳಗಾದವರು ತಮ್ಮ ಮನೆಯನ್ನು ತಾವೇ ನಿರ್ಮಿಸಿಕೊಳ್ಳಲು ಬಯಸಿದಲ್ಲಿ 5 ಲಕ್ಷ ರೂ. ಹಂತ ಹಂತವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಅನಧಿಕೃತವಾಗಿ ಕೃಷಿ ಭೂಮಿಗಳಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಹ ಸಮೀಕ್ಷೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಇಲ್ಲಿವರೆಗೆ 40,292 ಜನರು ಸಂತ್ರಸ್ತರಾಗಿದ್ದು, 232 ಪರಿಹಾರ ಕೇಂದ್ರದ ಮೂಲಕ ಊಟ, ಆರೋಗ್ಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.