ಮೋದಿ ತಾಕತ್ ಇರುವ ಪ್ರಧಾನಿ

ಬಾಗಲಕೋಟೆ: ನರೇಂದ್ರ ಮೋದಿಯವರು ದೇಶದ ಹೆಮ್ಮೆಯ ತಾಕತ್ ಇರುವ ಪ್ರಧಾನಿಯಾಗಿದ್ದಾರೆ ಎಂದು ಬಿಜೆಪಿ ಯುವ ನಾಯಕ, ಬೆಂಗಳೂರು ದಕ್ಷಿಣ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು.

ಬಾಗಲಕೋಟೆ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯ ನರಗುಂದದಲ್ಲಿ ಭಾನುವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿಯಾಗಿರುವ ಮೋದಿಯವರು ಬಲಿಷ್ಠ ನಾಯಕತ್ವ ಗುಣ ಹೊಂದಿದ್ದಾರೆ. ಅದಕ್ಕೆ ಅವರ ಮುಖ ನೋಡಿ ಮತ ಹಾಕಿ ಎಂದು ಹೇಳುತ್ತಿದ್ದೇವೆ. ಆದರೆ, ನೀವ್ಯಾಕೆ ರಾಹುಲ್ ಗಾಂಧಿ ಫೋಟೋವನ್ನು ತೋರಿಸುತ್ತಿಲ್ಲ. ರಾಹುಲ್ ಗಾಂಧಿ ಫೋಟೋ ತೋರಿಸಿದರೆ ಬಿಜೆಪಿಗೆ ಮತ ಹೋಗುತ್ತವೆ ಎಂಬ ಭಯ ಸಿದ್ದರಾಮಯ್ಯನವರಿಗೆ ಕಾಡುತ್ತಿದೆ ಎಂದು ತಿರುಗೇಟು ನೀಡಿದರು.

ಬಾಗಲಕೋಟೆಯಲ್ಲಿ ನಾಲ್ಕನೇ ಬಾರಿಯೂ ಗದ್ದಿಗೌಡರು ಗೆಲುವು ಸಾಧಿಸಲಿದ್ದಾರೆ. ಅವರೊಬ್ಬ ಪ್ರಾಮಾಣಿಕ ಹಾಗೂ ಅಭಿವೃದ್ಧಿಗೆ ಒತ್ತು ಕೊಡುವ ರಾಜಕಾರಣಿ ಎಂದು ಹೇಳಿದರು.

ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮಾತನಾಡಿ, ಬಾಗಲಕೋಟೆ ಲೋಕಸಭೆ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದಲೇ ಜನ ನನಗೆ ಮೂರು ಬಾರಿ ಆಶೀರ್ವದಿಸಿದ್ದಾರೆ. ಏನೂ ಕೆಲಸ ಮಾಡದೆ ಇದ್ದರೆ ದೇವರು ನನ್ನನ್ನು ಕ್ಷಮಿಸುತ್ತಾನಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಮೋದಿ ನೋಡಿ ಮತ ಕೊಡಿ ಎಂದು ಕೇಳುತ್ತೇವೆ ಎಂದರೆ ದೇಶ ಸುಭದ್ರವಾಗಲು ಪ್ರಧಾನಿಯಾಗುವವರು ಗಟ್ಟಿಯಾಗಿರಬೇಕಾಗುತ್ತದೆ. ಹೀಗಾಗಿ ದೇಶವನ್ನು ರಕ್ಷಣೆ ಮಾಡಲು ಹಾಗೂ ಅಭಿವೃದ್ಧಿಯತ್ತ ಕೊಂಡೊಯ್ಯಲು ಮೋದಿಯವರ ನಾಯಕತ್ವ ದೇಶಕ್ಕೆ ಅಗತ್ಯವಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಮೋದಿಯವರು ಪ್ರಧಾನಿಯಾಗುತ್ತಾರೆ ಎಂಬುದು ಜನರಿಗೆ ತಿಳಿದಿದೆ. ಆದರೆ ಪ್ರತಿಪಕ್ಷದವರಿಗೆ ಮಾತ್ರ ಇದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.

ನಾನು ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರ ಕುರಿತು ಸಂಪೂರ್ಣ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದೇನೆ. ಆ ಸಾಧನೆಯನ್ನು ನೋಡಿಯೇ ನನಗೆ ಮತ್ತೊಮ್ಮೆ ಸ್ಪರ್ಧೆ ಮಾಡಲು ಅವಕಾಶ ನೀಡಿದ್ದಾರೆ. ಬಾಗಲಕೋಟೆ ಲೋಕಸಭೆ ಮತಕ್ಷೇತ್ರದಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯನವರು ನನ್ನ ಕ್ಷೇತ್ರದ ಶಾಸಕರಾಗಿದ್ದಾರೆ. ಮುಂದೆ ನಾ ಕೈಗೊಳ್ಳುವ ಕೆಲಸಗಳಿಗೆ ಭೂಮಿ ಪೂಜೆ ಮಾಡಲು ಕರೆಯುತ್ತೇನೆ. ಆಗಲಾದರೂ ಗೊತ್ತಾಗಲಿದೆ ನನ್ನ ಅಭಿವೃದ್ಧಿ ಹೇಗಿದೆ ಎಂದು ಹೇಳಿದರು. ಶಾಸಕ ಸಿ.ಸಿ.ಪಾಟೀಲ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *