More

    ನರೇಗಾ ಯೋಜನೆ ಬಾಗಲಕೋಟೆ ಮುಂಚೂಣಿ

    ಬಾಗಲಕೋಟೆ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ನರೇಗಾ ಯೋಜನೆಯಡಿ ಕೆರೆ, ಶಾಲಾ ಆಟದ ಮೈದಾನ, ಶಾಲಾ ಕಂಪೌಂಡ್ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಪ್ರತಿದಿನ 12 ರಿಂದ 15 ಸಾವಿರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

    ನರೇಗಾ ಯೋಜನೆಯಡಿ 38.85 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು, ಇಲ್ಲಿಯವರೆಗೆ ಒಟ್ಟು 31.45 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಶೇ.80.96 ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆ 7ನೇ ಸ್ಥಾನ ಪಡೆದುಕೊಂಡು ಮಹತ್ತರ ಸಾಧನೆ ಮಾಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರಸಕ್ತ ಸಾಲಿನಲ್ಲಿ ಅನುಮೋದನೆಗೊಂಡ 5044 ಕುರಿ ದೊಡ್ಡಿಗಳ ಪೈಕಿ 1114 ಕಾಮಗಾರಿಗಳು ಪೂರ್ಣಗೊಂಡಿವೆ. 162 ಕೆರೆ ಅಭಿವೃದ್ದಿ ಕಾಮಗಾರಿಗಳ ಪೈಕಿ 34 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. 256 ಶಾಲಾ ಕಂಪೌಂಡ್‌ಗಳ ಪೈಕಿ 66 ಕಾಮಗಾರಿಗಳು ಪೂರ್ಣಗೊಂಡಿವೆ. ನರೇಗಾ ಮತ್ತು ಶಿಕ್ಷಣ ಇಲಾಖೆಯ ಅನುದಾನದ ಒಗ್ಗೂಡಿಸುವಿಕೆಯಡಿ 170 ಶಾಲಾ ಶೌಚಗೃಹ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ 163 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕಾಗಿ 212.85 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.

    ನೆರ ಹಾವಳಿಗೆ ತುತ್ತಾದ 111 ಸಿ.ಸಿ ರಸ್ತೆ, 67 ಚರಂಡಿ, 18 ಬಸಿ ಕಾಲುವೆ, 17 ಶಾಲಾ ಕಂಪೌಂಡ್, 16 ಆಟದ ಮೈದಾನ, 12 ಚೆಕ್‌ಡ್ಯಾಂ, 12 ಸಿಡಿ, 16 ಶೌಚಗೃಹದ ದುರಸ್ಥಿ, 15 ಸ್ಮಶಾನ ಅಭಿವೃದ್ಧಿ, 11 ಕೃಷಿ ಹೊಂಡ ಹಾಗೂ 2 ಘನ ತ್ಯಾಜ್ಯ ವಿಲೇವಾರಿ ಸೇರಿ ಒಟ್ಟು 565 ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ ಒಟ್ಟು 789.06 ಲಕ್ಷ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

    ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)
    ಸ್ವಚ್ಛ ಭಾರತ ಮಿಷನ್‌ದಡಿ ಬೇಸ್‌ಲೈನ್ ಸರ್ವೇ ನಂತರ ಬಿಟ್ಟು ಹೋದ ಕುಟುಂಬಗಳಿಗೆ ಶೌಚೃಗೃಹ ನಿರ್ಮಿಸಲು 10543 ಗುರಿ ಹೊಂದಲಾಗಿದ್ದು, ಈ ಪೈಕಿ 4987 ಶೌಚಗೃಹ ನಿರ್ಮಿಸಲಾಗಿದೆ. 5556 ಶೌಚಗೃಹ ಪ್ರಗತಿಯಲ್ಲಿವೆ. 238 ಅಂಗನವಾಡಿಗಳ ಪೈಕಿ 60 ಅಂಗನವಾಡಿಗಳಿಗೆ ಶೌಚಗೃಹ ನಿರ್ಮಿಸಲಾಗಿದ್ದು, ಉಳಿದ 178 ಪ್ರಗತಿಯಲ್ಲಿವೆ. 28 ಶಾಲೆಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಗುರಿ ಹೊಂದಲಾಗಿದ್ದು, 18 ಶೌಚಗೃಹ ನಿರ್ಮಿಸಲಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನು 570 ಶೌಚಗೃಹ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

    ಕಾರ್ಯನಿರ್ವಹಣೆ ನಿರ್ಲಕ್ಷೃ ಧೋರಣೆ ಅನುಸರಿಸಿದ ಜಿಲ್ಲೆಯ 6 ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸಲಾಗಿದೆ. ಅಲ್ಲದೆ ನರೇಗಾ ಯೋಜನೆಯಡಿ ಅವ್ಯವಹಾರ ಮಾಡಿ ಸಾಭಿತಾದ ಜಮಖಂಡಿ ತಾಲೂಕಿನ ಪಿಡಿಒ ಪಿ.ಪಿ.ರಾವಳ ಅವರ 2 ವಾರ್ಷಿಕ ವೇತನ ಬಡ್ತಿಗಳನ್ನು ಖಾಯಂ ತಡೆ ಹಿಡಿಯಲು ಆದೇಶಿಸಿದೆ. ಕರ್ತವ್ಯ ಲೋಪ ಹಿನ್ನಲೆಯಲ್ಲಿ ಹುನಗುಂದ ತಾ.ಪಂ. ಎಂ.ಆರ್.ದೊಡ್ಡಮನಿ, ಎಸ್.ಪಿ.ನಂಜಯ್ಯನಮಠ ಅಮಾನತ್ತುಗೊಳಿಸಲಾಗಿದೆ ಎಂದು ತಿಳಿಸಿದರು.

    ಇನ್ನು ಎನ್.ಆರ್.ಎಲ್.ಎಂ ಯೋಜನೆಯಡಿ 2019-20ನೇ ಸಾಲಿಗೆ ನೀಡಿದ ಭೌತಿಕ ಗುರಿಗೆ ಅನುಗುಣವಾಗಿ ಎಲ್ಲ ಚಟುವಟಿಕೆಗಳಲ್ಲಿ ಶೇ.100 ರಷ್ಟು ಸಾಧನೆಯಾಗಿದೆ. ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆಯು 3ನೇ ಸ್ಥಾನದಲ್ಲಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಗುರುಗಳು ಬಂದರು ಗುರುವಾರ ಎನ್ನುವ ಹೊಸ ಯೋಜನೆ ಜಾರಿಗೊಳಿಸಲಾಗಿದೆ. ಕಳೆದ ಸಾರಿ ಕಡಿಮೆ ಲಿತಾಂಶ ಹೊಂದಿದ ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಫಲಿತಾಂಶ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಅನಿರೀಕ್ಷಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಮೂಲ ಸೌಕರ್ಯ, ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಲಾಗುತ್ತಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಸರ್ಕಾರದಿಂದ 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇದುವರೆ 18.11 ಲಕ್ಷ ರೂ. ಖರ್ಚು ಮಾಡುವ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts