ನಗರಸಭೆಗೆ ಆಯುಕ್ತ ಮೇಘಣ್ಣವರ ಭೇಟಿ

ಬಾಗಲಕೋಟೆ: ಬಾಗಲಕೋಟೆ ನಗರಸಭೆಗೆ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಮಂಗಳವಾರ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.

ಬಾಗಲಕೋಟೆ ನಗರಕ್ಕೆ ಕುಡಿಯುವ ನೀರಿನ ಲಭ್ಯತೆ, ಅನುದಾನ ಬಳಕೆ, ಕಾಮಗಾರಿಗಳ ಸ್ಥಿತಿಗತಿ ಕುರಿತು ಪರಿಶೀಲನೆ ಮಾಡಿ ಮಾಹಿತಿ ಪಡೆದರು. ಈ ವೇಳೆ ನಗರಸಭೆ ಅಧಿಕಾರಿಗಳು, ಬಾಗಲಕೋಟೆ ನಗರಕ್ಕೆ ನೀರು ಪೂರೈಕೆಯಾಗುವ ಆನದಿನ್ನಿ ಬ್ಯಾರೇಜ್‌ನಲ್ಲಿ ನೀರು ಇದೆ. ಹೆರಕಲ್ ಬ್ಯಾರೇಜ್ ನಿರ್ಮಾಣ ಮಾಡಿದ್ದರಿಂದ ಅದರ ಹಿನ್ನೀರು ಆನಿದಿನ್ನಿ ಬ್ಯಾರೇಜ್‌ವರೆಗೆ ಆವರಿಸಿದೆ. 0.108 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಬ್ಯಾರೇಜ್ ಭರ್ತಿಯಾಗಿದೆ. ಮೇ ತಿಂಗಳ ವರೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತ ಪಿ.ಎ.ಮೇಘಣ್ಣವರ, ಬಾಗಲಕೋಟೆ ನಗರಕ್ಕೆ ನೀರಿನ ಅಗತ್ಯವಿದ್ದಲ್ಲಿ ಕೂಡಲೇ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರನ್ನು ಸಂಪರ್ಕಿಸಬೇಕು. ಅವರ ಮೂಲಕ ನನ್ನ ಗಮನಕ್ಕೆ ತಂದಲ್ಲಿ ನೀರು ಒದಗಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ನಗರಸಭೆ ಕಡತಗಳ ವಿಲೇವಾರಿಯನ್ನು ಬೇಗನೆ ಮಾಡಬೇಕು ಎಂದು ಸೂಚನೆ ನೀಡಿದರು.

ಈ ವೇಳೆ ನಗರಸಭೆ ಆಯುಕ್ತ ಗಣಪತಿ ಪಾಟೀಲ ಸೇರಿ ನಗರಸಭೆಯ ವಿವಿಧ ಅಧಿಕಾರಿಗಳು ಇದ್ದರು.

ದಿಢೀರ್ ಸ್ವಚ್ಛತಾ ಕಾರ್ಯ..

ನಗರಸಭೆ ಅಧಿಕಾರಿಗಳ ನಿರ್ಲಕ್ಷೃ ಪರಿಣಾಮ ನಗರಸಭೆ ಆವರಣ, ಕಟ್ಟಡದ ಹಲವು ಭಾಗದಲ್ಲಿ ಗಲೀಜು ತುಂಬಿಕೊಂಡಿತ್ತು. ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ನಗರಸಭೆಗೆ ಭೇಟಿ ನೀಡುವ ವಿಷಯ ಗೊತ್ತಾಗುತ್ತಿದ್ದಂತೆ ಸ್ವಚ್ಛತಾ ಕಾರ್ಯ ಭರದಿಂದ ಸಾಗಿತು.