ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ಬಾಗಲಕೋಟೆ: ಸೂಕ್ತ ಪರಿಹಾರ ಹಾಗೂ ಗ್ರಾಮ ಸ್ಥಳಾಂತರಕ್ಕೆ ಒತ್ತಾಯಿಸಿ ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನೆರೆ ಸಂತ್ರಸ್ತರು ಶನಿವಾರ ದಿಢೀರ್ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ನೂರಾರು ಮಹಿಳೆಯರು ಸೇರಿ ಸಂತ್ರಸ್ತರು ಯಾವುದೇ ವಾಹನ ಹೋಗಲು ಅವಕಾಶ ನೀಡದೆ ರಸ್ತೆಯಲ್ಲಿ ಕುಳಿತ ಪರಿಣಾಮ 3 ಗಂಟೆಗೂ ಅಧಿಕ ಸಮಯ ರಸ್ತೆ ಬಂದ್ ಆಗಿ ವಾಹನ ಸವಾರರು ಪರದಾಡಿದರು. ರಸ್ತೆಯ ಎರಡು ಕಡೆ ಒಂದು ಕಿ.ಮೀವರೆಗೆ ವಾಹನಗಳ ಸಾಲು ಕಂಡುಬಂತು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮುಧೋಳ ಪೊಲೀಸರು ಸಂತ್ರಸ್ತರ ಮನವೊಲಿಸಲು ಹರಸಾಹಸ ಪಟ್ಟರೂ ಸಂತ್ರಸ್ತರು ಮಣಿಯಲಿಲ್ಲ. ಕೊನೆಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಮಧ್ಯಾಹ್ನ 12 ಗಂಟೆಯ ವೇಳೆಗೆ ಧರಣಿ ಕೈಬಿಟ್ಟರು.

ಘಟಪ್ರಭಾ ಪ್ರವಾಹದಿಂದ ಗ್ರಾಮದಲ್ಲಿ ಸಾಕಷ್ಟು ಮನೆಗಳು ಬಿದ್ದಿದ್ದರೂ ಅರ್ಹ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಬೆಳೆಗಳು ಕೊಚ್ಚಿ ಹೋಗಿದ್ದು, ದುಡಿಯಲು ಕೆಲಸವಿಲ್ಲದೆ ಕೂಲಿಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ. ಜನರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಗ್ರಾಮದಲ್ಲಿ ವಾಸಿಸಲು ಸಾಧ್ಯವಿಲ್ಲದಂತಹ ವಾತಾವರಣವಿದೆ. ಕೂಡಲೇ ಜೀರಗಾಳ ಗ್ರಾಮವನ್ನು ಸ್ಥಳಾಂತರ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳಕ್ಕೆ ಮುಧೋಳ ತಹಸೀಲ್ದಾರ್ ಎಸ್.ಬಿ. ಇಂಗಳೆ, ಸಿಪಿಐ ಎಚ್.ಆರ್. ಪಾಟೀಲ, ಪಿಎಸ್‌ಐ ಶಿವಶಂಕರ ಮುಕರಿ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಚರ್ಚಿಸಿದರು.

ಕಣ್ಣೀರಿಟ್ಟ ಮಹಿಳೆಯರು
ಮಹಿಳೆಯರಂತೂ ಕಣ್ಣೀರು ಸುರಿಸುತ್ತ ಮನೆಯಲ್ಲಿ ಹಿಡಿ ಕಾಳುಕಡಿ ಇಲ್ಲ, ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿದೆ. ಕಾಯಿಲೆ ಬಿದ್ದರೂ ಕೈಯಲ್ಲಿ ಕಾಸಿಲ್ಲದೆ ಆಸ್ಪತ್ರೆಗೆ ಹೋಗಲು ಆಗುತ್ತಿಲ್ಲ. ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಡಿಸಿಎಂ ಇದ್ದರೂ ನೆರೆ ಸಂತ್ರಸ್ತರಿಗೆ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳಂತೂ ಇದ್ದೇವೋ, ಸತ್ತಿದ್ದೇವೋ ನೋಡಲು ಸಹ ಬಂದಿಲ್ಲ. ಹತ್ತು ಸಾವಿರ ರೂ. ಪರಿಹಾರ ಕೊಡುವಲ್ಲೂ ತಾರತಮ್ಯ ಮಾಡಲಾಗಿದೆ. ದುಡಿವ ಕೈಗೆ ಕೆಲಸ ಕೊಡಿ ಎಂದು ಬೇಡಿಕೊಂಡರು.

Leave a Reply

Your email address will not be published. Required fields are marked *