ಕೋಟೆನಾಡಲ್ಲಿ ‘ಗೌಡ’ರಿಗೆ ವಿಜಯ

ಬಾಗಲಕೋಟೆ: ಹ್ಯಾಟ್ರಿಕ್ ವೀರ ಎನ್ನುವ ಖ್ಯಾತಿಗೆ ಒಳಗಾಗಿದ್ದ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ನಾಲ್ಕನೇ ಸಲ ವಿಜಯ ಪತಾಕೆ ಹಾರಿಸುವ ಮೂಲಕ ಕ್ಷೇತ್ರದ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದ ಎಸ್.ಬಿ. ಪಾಟೀಲ 1962 ರಿಂದ 1977ರ ಅವಧಿಯಲ್ಲಿ ನಾಲ್ಕು ಸಲ ಸಂಸದರಾಗಿ ಆಯ್ಕೆ ಆಗುವ ಮೂಲಕ ಈವರೆಗೆ ಕ್ಷೇತ್ರದಲ್ಲಿ ಅತಿ ಹೆಚ್ಚು ಸಲ ಸಂಸದರಾಗಿ ದಾಖಲೆ ಬರೆದಿದ್ದರು. ಈಗ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸಹ ಸತತ ನಾಲ್ಕು ಸಲ ಗೆಲುವು ಸಾಧಿಸುವ ಮೂಲಕ ಪಾಟೀಲ ಅವರ ದಾಖಲೆ ಸರಿಗಟ್ಟಿದ್ದಾರೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರ ಅಂದರೆ ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಭದ್ರಕೋಟೆ ಆಗಿತ್ತು. ಆ ಕೋಟೆಯನ್ನು ಛಿದ್ರ ಮಾಡಿ ಸುದೀರ್ಘ ಅವಧಿಗೆ ಅಧಿಕಾರ ವಂಚಿತ ಮಾಡಿದ್ದು ಬಿಜೆಪಿಯ ಪಿ.ಸಿ. ಗದ್ದಿಗೌಡರ.

ಮೂಲತಃ ಜನತಾ ಪರಿವಾರದ ಗದ್ದಿಗೌಡರ 2004ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಿದ್ದರು. ಅಲ್ಲಿಂದ ಈವರೆಗೆ ನಡೆದ ನಾಲ್ಕು ಚುನಾವಣೆಯಲ್ಲಿ ಗೆಲುವಿನ ದಾಖಲೆ ಬರೆದಿದ್ದಾರೆ.
ನಾಲ್ಕು ಸಲ ಎದುರಿಸಿದ ಚುನಾವಣೆಯಲ್ಲಿ ಮೂರು ಸಲ ಗೆಲುವಿನ ಅಂತರ ಒಂದು ಲಕ್ಷದ ಮೇಲೆ ಇರುವುದು ಮತ್ತೊಂದು ದಾಖಲೆ. 2004ರಲ್ಲಿ ಕಾಂಗ್ರೆಸ್ ಪಕ್ಷದ ಆರ್.ಎಸ್. ಪಾಟೀಲ ವಿರುದ್ಧ 1,67,383 ಮತಗಳಿಂದ ಗೆಲುವು ಪಡೆದಿದ್ದರು. 2009ರಲ್ಲಿ ಕಾಂಗ್ರೆಸ್ ಪಕ್ಷದ ಜೆ.ಟಿ. ಪಾಟೀಲ ವಿರುದ್ಧ 35,446 ಮತಗಳು ಹಾಗೂ 2014ರಲ್ಲಿ ಅಜಯಕುಮಾರ ಸರನಾಯಕ ವಿರುದ್ಧ 1,16,560 ಮತಗಳ ಅಂತರದಲ್ಲಿ ವಿಜಯಶಾಲಿ ಆಗಿದ್ದರು.

ಈಗ ನಡೆದ ಚುನಾವಣೆಯಲ್ಲಿ ವೀಣಾ ಕಾಶಪ್ಪನವರ ವಿರುದ್ಧ ಹಿಂದಿನ ಮೂರು ಸಲದ ಅಂತರಕ್ಕಿಂತಲೂ ಅಧಿಕವಾಗಿ ದಾಖಲೆಯ 1,68,187 ಮತಗಳಿಂದ ವಿಜಯಮಾಲೆ ಹಾಕಿಕೊಂಡಿದ್ದಾರೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ಅಂತರದ ಗೆಲುವು ಎಂದು ಸಹ ದಾಖಲಾಗಿದೆ.

ಗೌಡರಿಗೆ ಟರ್ನಿಂಗ್
ನಾಲ್ಕು ಸಲ ಗೆದ್ದು ಬಂದಿರುವ ಪಿ.ಸಿ. ಗದ್ದಿಗೌಡರ ಅವರನ್ನು ರಾಜಕೀಯ ವಲಯದಲ್ಲಿ ಅದೃಷ್ಟವಂತ ರಾಜಕಾರಣಿ ಎಂದು ಕರೆಯಲಾಗುತ್ತಿದೆ. ಚುನಾವಣೆ ಬಂದಾಗಲೆಲ್ಲ ಬಿಜೆಪಿ ಪರ ಕಂಡು ಬರುವ ಅಲೆಯಲ್ಲಿ ಗೆದ್ದು ಬರುತ್ತಾರೆ ಎನ್ನುವುದು ಕ್ಷೇತ್ರದ ತುಂಬೆಲ್ಲ ಜನಜನಿತ.

2004ರಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರ ಇಂಡಿಯಾ ಶೈನಿಂಗ್ ಅಲೆಯಲ್ಲಿ ಗೆದ್ದು ಬೀಗಿದರು. 2009ರಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅಲೆಯಲ್ಲಿ ವಿಜಯಶಾಲಿಯಾದರು. 2014 ಮತ್ತು 2019ರಲ್ಲಿ ನರೇಂದ್ರ ಮೋದಿ ಅವರ ಸುನಾಮಿಯಲ್ಲಿ ಭಾರಿ ಅಂತರದ ಗೆಲುವು ಪಡೆದರು.

ಗದ್ದಿಗೌಡರು ಮೂರು ಸಲ ಸಂಸದರಾಗಿದ್ದರೂ ಕ್ಷೇತ್ರದಲ್ಲಿ ನಿರೀಕ್ಷಿತ ಕೆಲಸ ಮಾಡಿಲ್ಲ ಎನ್ನುವ ಅಸಮಧಾನ ಇದೆ. ಆ ಎಲ್ಲ ಅಸಮಾಧಾನವನ್ನು ಮರೆಸಿದ್ದು ಪ್ರಧಾನಿ ನರೇಂದ್ರ ಮೋದಿ ಅಲೆ. ಮತದಾನದಕ್ಕೆ ಇನ್ನು ಐದು ದಿನ ಇರುವಾಗ ಮೋದಿ ಅವರು ಬಾಗಲಕೋಟೆಯಲ್ಲಿ ನಡೆಸಿದ ಪ್ರಚಾರ ಸಭೆ ಗೌಡರ ಗೆಲುವಿನ ಟರ್ನಿಂಗ್ ಪಾಯಿಂಟ್ ಆಗಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ಮೆಚ್ಚಿ ಜನರು ತೀರ್ಪು ನೀಡಿದ್ದಾರೆ. ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರ ಪರಿಶ್ರಮದಿಂದ ಗೆಲುವು ಸಿಕ್ಕಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಶಾಸಕರು ಆಗಿದ್ದೆ ಆಕಸ್ಮಿಕ. ಇನ್ನು ಅವರ ಪ್ರಭಾವ ಈ ಚುನಾವಣೆಯಲ್ಲಿ ಎಲ್ಲಿಂದ ಆಗುತ್ತದೆ? ಮೋದಿ ಅವರ ಸಂಪುಟದಲ್ಲಿ ಸಚಿವ ಸ್ಥಾನದ ಬಗ್ಗೆ ರಾಜ್ಯ ನಾಯಕರ ಗಮನಕ್ಕೆ ತರುತ್ತೇನೆ. ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದು.
– ಪಿ.ಸಿ. ಗದ್ದಿಗೌಡರ ಬಿಜೆಪಿ ವಿಜೇತ ಅಭ್ಯರ್ಥಿ

ಜನರ ತೀರ್ಪಿಗೆ ತಲೆಬಾಗುತ್ತೇವೆ. ದೇಶದಲ್ಲಿ ಇದುವರೆಗೆ ಹಲವಾರು ಚುನಾವಣೆಗಳು ನಡೆದಿವೆ. ಸೋಲು ಗೆಲುವು ಇದ್ದೇ ಇರುತ್ತದೆ. ಈ ಸಾರಿಯ ಚುನಾವಣೆಯಲ್ಲಿ ಬಿಜೆಪಿ ಇಷ್ಟೊಂದು ಸ್ಥಾನ ಪಡೆದುಕೊಳ್ಳಲು ಏನೋ ಶಕ್ತಿ ಅಡಗಿರಬೇಕು. ಅದು ಮೋದಿ ಶಕ್ತಿನಾ ಮತ್ಯಾವ ಶಕ್ತಿನಾ ಗೊತ್ತಿಲ್ಲ. ಹುನಗುಂದ ಸೇರಿ ಲೋಕಸಭೆ ಮತಕ್ಷೇತ್ರದ ಯಾವುದೇ ಭಾಗದಲ್ಲಿ ಹಿನ್ನಡೆ ಆಗಿದ್ದರೂ ಅದಕ್ಕೆ ನಾನೇ ಹೊಣೆ.
– ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕ


Leave a Reply

Your email address will not be published. Required fields are marked *