ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ

ಬಾಗಲಕೋಟೆ: ಸಾಮೂಹಿಕ ವಿವಾಹಗಳೆಂದರೆ ಮೂಗು ಮುರಿಯಬಾರದು. ಈ ರೀತಿಯ ಪುಣ್ಯ ಸಮಾರಂಭದಲ್ಲಿ ಮದುವೆಯಾಗುವವರು ಭಾಗ್ಯವಂತರು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬಿಲ್‌ಕೆರೂರ ಬಿಲ್ವಾಶ್ರಮ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳ ಜನ್ಮಶತಮಾನೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಸಾಮೂಹಿಕ ವಿವಾಹಗಳೆಂದರೆ ಬಡವರ ಮದುವೆಯಲ್ಲ, ಭಾಗ್ಯವಂತರ ಮದುವೆ. ಜನುಜ ಜನ್ಮ ಪುಣ್ಯ ಇದ್ದರೇ ಮಾತ್ರ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುತ್ತದೆ. ಹತ್ತಾರು ಜನ ಹರ-ಗುರು ಚರಮೂರ್ತಿಗಳು, ಗಣ್ಯಮಾನ್ಯರು, ಸಹಸ್ರಾರು ಸಂಖ್ಯೆಯ ಜನರು ಭಾಗಿಗಳಾಗಿ ವಧು-ವರರನ್ನು ಹರಸುವ ಭಾಗ್ಯ ಈ ಸಾಮೂಹಿಕ ವಿವಾಹಗಳಲ್ಲಿ ಮಾತ್ರ ದೊರೆಯುತ್ತದೆ. ಶ್ರೀಮಂತರು ಸಹ ತಮ್ಮ ಮಕ್ಕಳ ಮದುವೆಯನ್ನು ಇಂತಹ ಕಾರ್ಯಕ್ರಮಗಳಲ್ಲಿಯೇ ಮಾಡುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹಾಗೂ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿದ್ದು, ದುಂದುವೆಚ್ಚ ತಡೆದು ಕುಟುಂಬಕ್ಕಾಗಬಹುದಾದ ಸಾಲದ ಹೊರೆ ತಪ್ಪಿಸುತ್ತವೆ. ನೂತನ ವಧು-ವರರು ಪರಸ್ಪರ ಹೊಂದಾಣಿಕೆ ಜೀವನ ನಡೆಸಿ ಅನ್ಯೋನ್ಯವಾಗಿ ಬಾಳಬೇಕು ಎಂದು ಹರಸಿದರು.

ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು. ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿಲ್‌ಕೆರೂರ ಶ್ರೀಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂ.ರುದ್ರಮುನಿ ಶಿವಯೋಗಿ ಶಿವಾಚಾರ‌್ಯರ ಜನ್ಮ ಶತಮಾನೋತ್ಸವ ಕಾರ‌್ಯಕ್ರದ ಯಶಸ್ಸಿಗೆ ಸಹಕರಿಸಿದ ಹಾಗೂ ದಾನಿಗಳ ಸೇವೆ ಸ್ಮರಿಸಿದರು.

ನಿಡಗುಂದಿ, ಮುತ್ತತ್ತಿ ಶ್ರೀಗಳು ಸೇರಿ ಅನೇಕ ಮಠಾಧೀಶರು, ಮಾಜಿ ಶಾಸಕರಾದ ಗೌರಮ್ಮ ಕಾಶಪ್ಪನವರ ಹಾಗೂ ವಿಜಯಾನಂದ ಕಾಶಪ್ಪನವರ, ನಿವೃತ್ತ ನ್ಯಾಯಾಧೀಶ ಎಸ್.ವೈ.ಕುಂಬಾರ, ಆರ್.ಆರ್.ಪಾಟೀಲ ವೇದಿಕೆಯಲ್ಲಿದ್ದರು. ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಸ್ವಾಗತಿಸಿದರು. ಕೊಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ನಿರೂಪಿಸಿ, ವಂದಿಸಿದರು.

30 ಜೋಡಿ ಮದುವೆ
ಸರ್ವಧರ್ಮ ಸಾಮೂಹಿಕ ಕಾರ್ಯಕ್ರಮದಲ್ಲಿ 30 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹರ-ಗುರು ಚರಮೂರ್ತಿಗಳು, ಗಣ್ಯರು, ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ ನವದಂಪತಿಗಳಿಗೆ ಅಕ್ಷತೆ ಹಾಕಿ ಹರಸಿದರು.