ಮಂತ್ರಾಲಯ ಪ್ರಸಾದ ಸಾಲಿಗ್ರಾಮವಾಗಿ ಪರಿವರ್ತನೆ: ದೇವರ ಪವಾಡವೆಂದ ಭಕ್ತರು!

ಬಾಗಲಕೋಟೆ: ರಾಯರ ಸನ್ನಿಧಿ ಮಂತ್ರಾಲಯದಿಂದ ತಂದ ಪ್ರಸಾದವು ಸಾಲಿಗ್ರಾಮವಾಗಿ ಪರಿವರ್ತನೆಯಾಗಿದೆ ಎನ್ನಲಾದ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದ್ದು, ಇದು ರಾಘವೇಂದ್ರ ಸ್ವಾಮಿಯ ಪವಾಡ ಎಂದು ಭಕ್ತರು ಹೇಳುತ್ತಿದ್ದಾರೆ.

ಬಾಗಲಕೋಟೆಯ ಪ್ರಲ್ಹಾದ ಸೀಮಿಕೆರಿ ಅವರ ಮನೆಯಲ್ಲಿ ಈ ಪವಾಡ ನಡೆದಿದೆ ಎನ್ನಲಾಗಿದ್ದು, ನಾಲ್ಕೈದು ತಿಂಗಳ ಹಿಂದೆ ಮಂತ್ರಾಲಯದಿಂದ ನಿರ್ಮಾಲ್ಯ, ಮಂತ್ರಾಕ್ಷತೆ ಪ್ರಸಾದವನ್ನು ತಂದಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ನೋಡಿದಾಗ ಸಾಲಿಗ್ರಾಮವಾಗಿ ಪರಿವರ್ತನೆಯಾಗಿರುವುದನ್ನು ಕಂಡು ಅಚ್ಚರಿಗೆ ಒಳಗಾದೆವು ಎಂದು ಮನೆಯವರು ತಿಳಿಸಿದ್ದಾರೆ.

ಒಟ್ಟು ಹತ್ತು ಸಾಲಿಗ್ರಾಮಗಳು ಕಾಣಿಸಿಕೊಂಡಿದ್ದು, ಅದು ಸಾಲಿಗ್ರಾಮವೋ ಅಥವಾ ಇಲ್ಲವೋ ಎಂದು ಅನುಮಾನಗೊಂಡ ಪ್ರಲ್ಹಾದ ಹಾಗೂ ಸುಧೀಂದ್ರ ಅವರು ಖಚಿತ ಪಡಿಸಿಕೊಳ್ಳಲು ಮಂತ್ರಾಲಯಕ್ಕೆ ತೆರಳಿದ್ದರು. ಆಗ ರಾಘವೇಂದ್ರ ಮಠದ ಶ್ರೀಗಳಾದ ಸುಭುದೇಂದ್ರ ತೀರ್ಥ ಸ್ವಾಮೀಜಿ ಅವರು ಅದು ಸಾಲಿಗ್ರಾಮ ಎಂದು ಖಚಿತ ಪಡಿಸಿದರು ಎಂದು ಹೇಳಿದ್ದಾರೆ.

ಹತ್ತು ಸಾಲಿಗ್ರಾಮದಲ್ಲಿ ಐದು ಸಾಲಿಗ್ರಾಮಗಳನ್ನು ಶ್ರೀಮಠದಲ್ಲಿ ನಿತ್ಯ ಪೂಜೆಗಾಗಿ ಸೀಮಿಕೇರಿ ಕುಟುಂಬದವರು ವಿಧಿವಿಧಾನಗಳ ಮೂಲಕ ಸಮರ್ಪಣೆ ಮಾಡಿದ್ದು, ಉಳಿದ ಐದು ಸಾಲಿಗ್ರಾಮವನ್ನು ಮನೆಗೆ ಮರಳಿ ತಂದಿದ್ದಾರೆ.

ಸಾಲಿಗ್ರಾಮ ವೀಕ್ಷಣೆಗೆ ಜನರ ಆಗಮನ
ಬಾಗಲಕೋಟೆಯ ವಿದ್ಯಾಗಿರಿ 12 ನೇ ಕ್ರಾಸ್​ನಲ್ಲಿ ಪ್ರಲ್ಹಾದ ಸೀಮಿಕೆರಿ ಅವರ ನಿವಾಸವಿದ್ದು, ಸಾಲಿಗ್ರಾಮ ಕಣ್ತುಂಬಿಕೊಳ್ಳಲು ಭಕ್ತರ ದಂಡು ಆಗಮಿಸುತ್ತಿದೆ. ಬೆಳಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಕುತೂಹಲದಿಂದ ಸೀಮಿಕೆರಿ ಅವರ ಮನೆಯತ್ತ ಭಕ್ತರು ಹೆಜ್ಜೆ ಹಾಕುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)