7ನೇ ವೇತನ ವರದಿ ಸಂಪೂರ್ಣ ಜಾರಿಗೆ ಆಗ್ರಹ

ಬಾಗಲಕೋಟೆ: ಕಮಲೇಶಚಂದ್ರ ಆಯೋಗದ 7ನೇ ವೇತನ ವರದಿಯನ್ನು ಸಂಪೂರ್ಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮೀಣ ಅಂಚೆ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸ್ಟೇಷನ್ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿ ಎದುರು ದಿನವಿಡಿ ಪ್ರತಿಭಟನೆ ನಡೆಸಿದ ಗ್ರಾಮೀಣ ಅಂಚೆ ನೌಕರರು ಕೇಂದ್ರ ಸರ್ಕಾರ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ 15 ದಶಕಗಳ ಹಿಂದೆಯೇ ಅಂಚೆ ಇಲಾಖೆ ಆರಂಭಗೊಂಡಿದೆ. ಇಂಥ ಇಲಾಖೆಯಲ್ಲಿ ಗ್ರಾಮೀಣ ನೌಕರರನ್ನು ಜೀತ ಪದ್ಧತಿಗಿಂತ ಕೆಟ್ಟದಾಗಿ ದುಡಿಸಿಕೊಳ್ಳುತ್ತಿದ್ದಾರೆ. ನಮಗೆ ಸ್ವಾತಂತ್ರ್ಯ ಸಮಾನತೆ ಕನಸಾಗಿ ಉಳಿದಿದೆ. ಕೇಂದ್ರದಲ್ಲಿ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಗ್ರಾಮೀಣ ಅಂಚೆ ನೌಕರರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿವೆ ಎಂದು ಕಿಡಿಕಾರಿದರು.

ಗ್ರಾಮೀಣ ಅಂಚೆ ಸೇವಕರ ಹಿತ ಕಾಪಾಡಲು ಕಮಲೇಶಚಂದ್ರ ಆಯೋಗದ ವರದಿ ಅನ್ವಯ 2016 ಜನವರಿ 1ರಿಂದ 7ನೇ ವೇತನವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು. ಗ್ರ್ಯಾಚುಟಿ 5 ಲಕ್ಷಕ್ಕೆ ಏರಿಸಬೇಕು. ಶೇ.10ರಷ್ಟು ಟಿಆರ್​ಸಿಎ ವೇತನದಲ್ಲಿ ರಿಕವರಿ ಮಾಡಿ ಎಸ್​ಡಿಬಿಎಸ್ ಜತೆ ಇಎಸ್​ಐ, ಪಿಎಫ್ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. ವಾರ್ಷಿಕ 30ದಿನಗಳ ರಜೆಯನ್ನು ನೀಡಬೇಕು. ಅದರಲ್ಲಿ 180ದಿನಗಳ ರಜೆಯನ್ನು ನೌಕರರ ಖಾತೆಗೆ ಜಮಾ ಮಾಡಬೇಕು. ನೌಕರ ನಿವೃತ್ತಿ ಹೊಂದಿದಾಗ ಅದನ್ನು 6 ತಿಂಗಳ ಸಂಬಳ ಸಹಿತ ರಜೆ ಎಂದು ಪರಿಗಣಿಸಿ 7ನೇ ವೇತನ ವರದಿಯಂತೆ ನಿಯಮ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮೀಣ ಅಂಚೆ ನೌಕರರ ಮಕ್ಕಳ ವಿದ್ಯಾಭ್ಯಾಸ ಭತ್ಯೆಯಾಗಿ ವಾರ್ಷಿಕ 6 ಸಾವಿರ ರೂ. ಇಬ್ಬರು ಮಕ್ಕಳಿಗೆ ಒದಗಿಸಬೇಕು. 12, 24 ಮತ್ತು 36 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ವಾರ್ಷಿಕ ಎರಡು ಇನ್ಕ್ರಿಮೆಂಟ್ ನೀಡಬೇಕು.

ಪರಿಮಿತಿಯಲ್ಲಿರುವ ವರ್ಗಾವಣೆ ಸೌಲಭ್ಯ ವನ್ನು ಮೂರು ಬಾರಿ ಜಿಡಿಎಸ್ ನೌಕರರಿಗೆ ಅವರ ಸಂಬಳದಲ್ಲಿ ಯಾವುದೇ ರೀತಿಯ ವ್ಯತ್ಯಾಸ ವಾಗದಂತೆ ಜಾರಿಗೊಳಿಸಬೇಕು. ಬ್ರ್ಯಾಂಚ್ ಅಂಚೆ ಕಚೇರಿಯಲ್ಲಿ ಒಬ್ಬರು ಕೆಲಸ ಮಾಡುವ ಜಾಗದಲ್ಲಿ ಎರಡು ಹುದ್ದೆಗಳನ್ನು ಸೃಜಿಸಬೇಕು. ಜಿಡಿಎಸ್ ನೌಕರರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಗ್ರಾಮೀಣ ಅಂಚೆ ಸೇವಕರ ಸಂಘದ ವಿಭಾಗೀಯ ಅಧ್ಯಕ್ಷ ಎ.ಬಿ.ಪಾಟೀಲ, ಎಸ್.ಟಿ.ಬಂಟನೂರ, ಎ.ಎ.ಮನಗೂಳಿ, ಎಚ್. ಬಿ.ಪರುತಗೌಡ್ರ ಸೇರಿ ಇತರರು ಇದ್ದರು.