ಹಕ್ಕು ಪಡೆಯಲು ಹೋರಾಟಕ್ಕೆ ಸಿದ್ಧರಾಗಿ

ಬಾಗಲಕೋಟೆ: ಮಾದಿಗ ಸಮಾಜದ ಬೇಡಿಕೆ, ನೋವನ್ನು ಯಾವ ಪಕ್ಷವೂ ಆಲಿಸುತ್ತಿಲ್ಲ. ಸಂವಿಧಾನ ಬದ್ಧ ಮೀಸಲಾತಿ ಹಕ್ಕು ದೊರಕಿಸಿಕೊಡುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿ ದಕ್ಷಿಣ ಭಾರತದ ಮಾದಿಗ ಸಮಾಜ ಒಂದಾಗಿ ಹೋರಾಟಕ್ಕಿಳಿಯಬೇಕು. ಎಂತಹುದೇ ಕಠಿಣ ಸಂದರ್ಭ ಎದುರಿಸಲು ಸಿದ್ಧರಾಗಬೇಕು ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.

ರಾಜ್ಯ ಮಾದಿಗ ಮಹಾಸಭಾ, ಮಾತಂಗ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಸಹಯೋಗದಲ್ಲಿ ಭಾನುವಾರ ನವಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಾಬು ಜಗಜೀವರಾಮ್ ಅವರ ಸಂಘರ್ಷ ಪಥದ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ತತ್ತ್ವಾದರ್ಶನದಲ್ಲಿ ಡಾ.ಬಾಬು ಜಗಜೀವನರಾಮ್ ಸಾಗಿದರು. ಎಂದಿಗೂ ಅಸ್ಪಶ್ಯರಲ್ಲಿ ಒಡಕುಂಟು ಮಾಡುವ ಕಾರ್ಯ ಮಾಡಲಿಲ್ಲ. ಅಂಬೇಡ್ಕರ್ ತಮ್ಮ ಜೀವನದಲ್ಲಿ ಮಾದಿಗ ಸಮಾಜ ನಂಬಿದ್ದರು. ಇಂದು ವೈಚಾರಿಕೆ ಸಂಘರ್ಷ ನಡೆಯುತ್ತಿದೆ. ಅಂಬೇಡ್ಕರ್ ಮತ್ತು ಜಗಜೀವನರಾಮ್ ಅವರ ಮಧ್ಯೆ ವೈಚಾರಿಕೆ ಭಿನ್ನಮತವಿಲ್ಲ. ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಧಾರವಾಡ ವಿವಿ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಸಮುದಾಯದ ಒಂದೇ ಬೇಡಿಕೆ ಮೀಸಲಾತಿ, ಅದನ್ನು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ದಲಿತರಲ್ಲಿಯೇ ಬಹುಸಂಖ್ಯಾತರಾಗಿರುವ ಮಾದಿಗ ಸಮಾಜಕ್ಕೆ ನ್ಯಾಯ ದೊರೆಯುತ್ತಿಲ್ಲ. ಮೀಸಲಾತಿ ಹಸಿದವರಿಗೆ ಸಂವಿಧಾನ ನ್ಯಾಯಬದ್ಧವಾಗಿ ಕಟ್ಟಿಕೊಟ್ಟ ಬುತ್ತಿ. ಎಲ್ಲರಿಗೂ ಅವರವರ ತುತ್ತು ಸಿಗಬೇಕು. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಸಲ್ಲ. ಮೀಸಲಾತಿಯನ್ನು ಸಮಾನವಾಗಿ ಹಂಚುವ ತಾಯ್ತನ ಸರ್ಕಾರಗಳಿಗೆ ಬರಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹಂಪಿ ಮಾತಂಗ ಮಠದ ಪೂರ್ಣಾನಂದ ಭಾರತೀ ಸ್ವಾಮೀಜಿ ಮಾತನಾಡಿ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳ ಸ್ಥಾನಮಾನಗಳು ಮಾದಿಗರಿಗೆ ಸಿಗಬೇಕು. ಅವುಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟದ ಜತೆಗೆ ಶಿಕ್ಷೃಣ ಪಡೆದು ಇತಿಹಾಸ ನಿರ್ಮಿಸುವತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಮಾತಂಗ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷೃ ಪ್ರೊ.ಎ.ಕೆ. ಹಂಪಣ್ಣ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಎಂ.ಯು. ಮೂಗನೂರ, ಭೀ.ನರಸಪ್ಪ, ಸುಬ್ಬರಾಜ ಹೊಸಕೋಟೆ, ಸಿ.ದಾನಪ್ಪ, ಸಿದ್ದು ಮಾದರ, ರಾಮಚಂದ್ರ ಕಾಂಬಳೆ, ರಾಜೇಂದ್ರ ಐಹೊಳೆ, ನಾಗರಾಜ ಹೊಸಕೋಟೆ, ಶಿವಾನಂದ ಟವಳಿ, ರಾಜು ಮನ್ನಿಕೇರಿ ಸೇರಿದಂತೆ ಇತರರು ಇದ್ದರು.

ಮಾದಿಗರನ್ನು ಕಡೆಗಣಿಸಬೇಡಿ. ಅವರನ್ನು ನಿರ್ಲಕ್ಷೃ ಮಾಡಿದವರಿಗೆ ಒಳ್ಳೆಯದಾಗಿಲ್ಲ. ಮಾದಿಗರು ತಿರುಗಿ ಬಿದ್ದರೆ ಕಷ್ಟವಾಗುತ್ತದೆ. ಸಿದ್ದರಾಮಯ್ಯ ಮಾದಿಗರ ಶಾಪದಿಂದ ಸೋತರು. ಬಾದಾಮಿಯಲ್ಲಿ ಅವರ ಆಶೀರ್ವಾದಿಂದ ಗೆದ್ದರು. ಈ ಬಗ್ಗೆ ಆತ್ಮಾವಲೋಕನ ಮಾಡಬೇಕು. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಭರವಸೆ ನೀಡಿವೆ. ಅನುಷ್ಠಾನಕ್ಕೆ ತಂದಿಲ್ಲ. ಹೀಗೆ ಮುಂದುವರಿದಲ್ಲಿ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು.
– ವೀರಭದ್ರಪ್ಪ ಹಾಲಹರವಿ ಮಾಜಿ ಶಾಸಕ

ಡಾ. ಬಾಬುಜೀವನರಾಮ್ ಹಾಗೂ ಡಾ. ಅಂಬೇಡ್ಕರ್ ನಡುವೆ ಭಿನ್ನಮತವಿದೆ ಎಂದು ಬುದ್ಧಿಜೀವಿಗಳೆನಿಕೊಂಡವರು ಅಪಾಯಕಾರಿ ಪ್ರಚಾರ ಮಾಡುತ್ತಿದ್ದಾರೆ. ದಾಖಲೆ ತಿರುಚುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟಿಸಬೇಕು. ಇಬ್ಬರ ನಡುವೆ ಭಿನ್ನಮತ, ವೈರುಧ್ಯ ಇರಲಿಲ್ಲ. ಒಂದೇ ವೈಚಾರಿಕ ಭಾವನೆ ಹೊಂದಿದ್ದರು. ಸದಾಶಿವ ವರದಿ ಜಾರಿ ಮಾಡಲು ಆಗ್ರಹಿಸಿ ನಾಯಕರಿಗೆ ಶಾಲು, ಹಾರ ಹಾಕಿ ಸಾಕಾಗಿ ಹೋಗಿದೆ. ಇನ್ನು ಸಹಿಸಲು ಸಾಧ್ಯವಿಲ್ಲ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಮೇಶ ಜಿಗಜಿಣಗಿ, ಆರ್.ಬಿ. ತಿಮ್ಮಾಪುರ ಯಾರೇ ಇರಲಿ, ಬೇಡಿಕೆ ಈಡೇರಿಸದ ನಾಯಕರಿಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು.
– ಮುತ್ತಣ್ಣ ಬೆಣ್ಣೂರ ಸ್ವಾಗತ ಸಮಿತಿಯ ಅಧ್ಯಕ್ಷೃ, ಸಮಾಜದ ಮುಖಂಡ