ಕೋಟೆನಾಡಿನ ಜೆಡಿಎಸ್‌ನಲ್ಲಿ ನೀರವ ಮೌನ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕೋಟೆನಾಡಿನಲ್ಲಿ ಕೈ-ಕಮಲ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಮುಖಂಡರು ಕಾರ್ಯಕರ್ತರು ಟಿಕೆಟ್‌ಗಾಗಿ ಲಾಭಿ, ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳಗಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ ಜೆಡಿಎಸ್‌ನಲ್ಲಿ ಮಾತ್ರ ನೀರವ ಮೌನ ಆವರಿಸಿದೆ !

ಮೈತ್ರಿ ಧರ್ಮ ಪಾಲಿಸಲು ಕಾಂಗ್ರೆಸ್ ಜತೆ ಜೆಡಿಎಸ್ ಪಕ್ಷ ಸೀಟು ಹಂಚಿಕೆ ಮಾಡಿಕೊಂಡು ಬಾಗಲಕೋಟೆ ಲೋಕಸಭೆ ಮತಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಇದು ಜಿಲ್ಲೆಯ ಜೆಡಿಎಸ್ ನಾಯಕರು, ಕಾರ್ಯಕರ್ತರಲ್ಲಿ ನಿರುತ್ಸಾಹ, ಬೇಸರ ಉಂಟು ಮಾಡಿದೆ. ಪಕ್ಷದ ವರಿಷ್ಠರ ಮೇಲೆ ಒಳಗೊಳಗೆ ಮುನಿಸಿಕೊಂಡಿದ್ದಾರೆ. ಬಹಿರಂಗವಾಗಿ ಹೇಳಿಕೊಳ್ಳಲು ಆಗದೆ, ಅನುಭವಿಸಲೂ ಆಗದೆ ಒಳಗೊಳಗೆ ಸಂಕಟ ಅನುಭವಿಸುತ್ತಿದ್ದಾರೆ.

ಕಳೆದ ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ವಿರುದ್ಧ ಜೆಡಿಎಸ್ ಸ್ಪರ್ಧಿಸಿ ಕೆಲವು ಕಡೆ ಪ್ರಬಲ ಪೈಪೋಟಿ ನೀಡಿತ್ತು. ಒಂದು ಸ್ಥಾನ ಗೆಲ್ಲದಿದ್ದರೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಹಣೆಬರಹ ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಕೆಲವು ಕಡೆ ಉತ್ತಮ ಪೈಪೋಟಿಯನ್ನೂ ನೀಡಿತ್ತು. ಇದನ್ನು ಗಮನಿಸದ ದಳಪತಿಗಳು ಜಿಲ್ಲೆಯನ್ನು ಕಡೆಗಣಿಸಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಸೌಜನ್ಯಕ್ಕಾದರೂ ಸಭೆ ಕರೆದು ಜಿಲ್ಲೆಯ ಮುಖಂಡರ ಜತೆ ಸಮಾಲೋಚನೆ ಮಾಡಲಿಲ್ಲ. ಇದು ಮುಖಂಡರು, ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಹೆಸರು ಹೇಳಲಿಚ್ಛಿಸದ ಜೆಡಿಎಸ್ ನಾಯಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ಚುನಾವಣೆ ಬಂದರೆ ರಾಜಕೀಯ ಪಕ್ಷಗಳಲ್ಲಿ ಸಂಭ್ರಮ, ಸಭೆ, ಜಯಘೋಷ, ತುರುಸಿನ ಪ್ರಚಾರ ಪ್ರಮುಖ ವೇದಿಕೆಯಾಗಬೇಕಿತ್ತು. ಮೈತ್ರಿ ಪಕ್ಷ ಕಾಂಗ್ರೆಸ್‌ನ ಜಿಲ್ಲಾ ಮುಖಂಡರು ಜೆಡಿಎಸ್ ಬಗ್ಗೆ ನಿರ್ಲಕ್ಷೃ ಧೋರಣೆ, ರಾಜ್ಯ ನಾಯಕರ ನಿಸ್ಕಾಳಜಿಯಿಂದಾಗಿ ಜಿಲ್ಲೆಯ ಜೆಡಿಎಸ್ ಪಾಲಿಗೆ ಈ ಬಾರಿಯ ಲೋಕಸಭೆ ಚುನಾವಣೆ ಇದ್ದೂ ಇಲ್ಲದಂತಾಗಿದೆ. ಹೀಗಾಗಿ ಜಿಲ್ಲಾ ಹಾಗೂ ತಾಲೂಕುಗಳ ಪಕ್ಷದ ಕಚೇರಿಗಳಲ್ಲಿ ಜವಾನರು ಬಿಟ್ಟರೆ ಮತ್ಯಾರೂ ಕಾಣಿಸುತ್ತಿಲ್ಲ.

ಸಂಘಟನಗೆ ಆಂತರಿಕ ಭಿನ್ನಮತ
ಜೆಡಿಎಸ್ ಪಕ್ಷಕ್ಕೆ ಆಂತರಿಕ ಭಿನ್ನಮತ ಕೂಡ ತೆಲೆನೋವಾಗಿ ಪರಿಣಮಿಸಿದೆ. ನಿನ್ನೆ ಮೊನ್ನೆವರೆಗೂ ಪರಸ್ಪರ ಪ್ರೀತಿಯಿಂದ ಇದ್ದ ನಾಯಕರು ಈಗ ಚಿಕ್ಕ ಕಾರಣಗಳಿಗೂ ಬಹಿರಂಗ ಕಚ್ಚಾಟಕ್ಕೆ ಕಾರಣವಾಗಿದೆ. ಇದು ಜಿಲ್ಲಾ ವಕ್ತಾರರ ಉಚ್ಚಾನೆವರೆಗೂ ಹೋಗಿದೆ. ಪಕ್ಷದೊಳಗಿನ ಆಂತರಿಕ ಕಚ್ಚಾಟ ಜಿಲ್ಲಾ ಜೆಡಿಎಸ್‌ಗೆ ದೊಡ್ಡ ಹಿನ್ನಡೆಯಾಗುತ್ತಿದೆ.

ಕ್ಯಾರೇ ಎನ್ನದ ಕಾಂಗ್ರೆಸ್ ನಾಯಕರು
ಪರಸ್ಪರ ಸಹಕಾರದಿಂದ ಸರ್ಕಾರ ರಚನೆ ಮಾಡಿದ್ದೇವೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು 10 ತಿಂಗಳಾಯ್ತು. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಹ ಪಾಲು ಹೊಂದಿದೆ. ಸೋತರೂ ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹೆಚ್ಚಿನ ಪ್ರಾಬಲ್ಯ ಹೊಂದುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಂದು ಸೀಟು ಬಿಟ್ಟು ಕೊಡಲಲಿಲ್ಲ. ಇದನ್ನು ನಾವು ಪ್ರಶ್ನೆ ಮಾಡಲಿಲ್ಲ. ಈಗ ನೋಡಿದರೆ ಪ್ರೀತಿಯಿಂದ ಒಂದು ಮಾತು ಆಡುವುದಿಲ್ಲ. ಜಿಲ್ಲೆಯ ಜೆಡಿಎಸ್ ನಾಯಕರ ಬಗ್ಗೆ ನಿರ್ಲಕ್ಷೃ ವಹಿಸುತ್ತಿದ್ದಾರೆ. ಇದನ್ನು ಸಹಿಸಿಕೊಂಡು ಹೇಗೆ ಮತದಾರರ ಬಳಿ ಹೋಗುವುದು ಎಂದು ಜೆಡಿಎಸ್ ಪಕ್ಷದ ನಾಯಕರು ‘ವಿಜಯವಾಣಿ’ ಎದುರು ಅಸಮಧಾನ ಹೊರ ಹಾಕಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಮತಕ್ಷೇತ್ರಗಳ ಪೈಕಿ ಬಾಗಲಕೋಟೆ ಮತಕ್ಷೇತ್ರ ಬಿಎಸ್‌ಪಿಗೆ ಬಿಟ್ಟು ಕೊಟ್ಟಿದ್ದರೆ, ಹುನಗುಂದ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಈಗಿನ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಅವರಿಗೆ ಬೆಂಬಲ ಸೂಚಿಸಿ ಅಭ್ಯರ್ಥಿ ಕಣಕ್ಕೆ ಇಳಿಸಿರಲಿಲ್ಲ. ಉಳಿದಂತೆ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ 5ರಲ್ಲಿ ಸ್ಪರ್ಧೆ ಮಾಡಿತ್ತು. ಹುನಗುಂದ, ತೇರದಾಳ, ಬಾದಾಮಿ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗಣನೀಯ ಮತ ಪಡೆದು ರಾಷ್ಟ್ರೀಯ ಪಕ್ಷಗಳ ಸೋಲು, ಗೆಲುವಿನ ಲೆಕ್ಕಾಚಾರ ಬುಡಮೇಲು ಮಾಡಿತ್ತು. ಲೋಕಸಭೆ ಚುನಾವಣೆಯಲ್ಲಿ ಈ ಮತಗಳು ಕಾಂಗ್ರೆಸ್‌ಗೆ ಪ್ಲಸ್ ಆಗಬೇಕಾದರೆ ಜಿಲ್ಲೆಯ ಜೆಡಿಎಸ್ ಪಕ್ಷದ ಪರಾರ್ಜಿತ ಅಭ್ಯರ್ಥಿಗಳು, ನಾಯಕರ ಬೆಂಬಲ ಬೇಕೆ ಬೇಕು. ಕೈ ಪಡೆ ತತ್ಸಾರ ಮಾಡಿದಲ್ಲಿ ಬೆಲೆ ತೆರಬೇಕಾದೀತು ಎಂಬುದು ಜೆಡಿಎಸ್ ನಾಯಕರ ಎಚ್ಚರಿಸಿದ್ದಾರೆ.

ಬಾಗಲಕೋಟೆ ಲೋಕಸಭೆ ಕ್ಷೇತ್ರ ಪಕ್ಷಕ್ಕೆ ಪಡೆಯಲು ವರಿಷ್ಠರಿಗೆ ತಿಳಿಸಿದ್ದೇವು. ಅವಕಾಶ ಸಿಕ್ಕಲ್ಲಿ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಅವರನ್ನು ಕಣಕ್ಕೆ ಇಳಿಸುವ ಆಲೋಚನೆ ಇತ್ತು. ಇದೀಗ ಕಾಂಗ್ರೆಸ್‌ಗೆ ಕ್ಷೇತ್ರ ಹಂಚಿಕೆಯಾಗಿದೆ. ಪಕ್ಷದ ಮುಖಂಡರ ಮಾಗದರ್ಶನದಲ್ಲಿ ನಾವು ಸಾಗುತ್ತೇವೆ. ಕೆಲವು ಸಮಸ್ಯೆ ಇದ್ದು, ವರಿಷ್ಠರ ಗಮನಕ್ಕೆ ತರುತ್ತೇವೆ.
– ಸಲೀಂ ಮೋಮಿನ್ ಜೆಡಿಎಸ್ ಜಿಲ್ಲಾ ಮುಖಂಡ