ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಏ.23ರಂದು ನಡೆಯಲಿರುವ ಮತದಾನ ಹಿನ್ನೆಲೆ ಭಾನುವಾರ ಸಂಜೆ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದೆ.

ಕ್ಷೇತ್ರದಲ್ಲಿ ಎರಡು ವಾರಗಳಿಂದ ಪ್ರಮುಖ ಎರಡು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಮತದಾರರ ಮನ ಮುಟ್ಟಲು ಇನ್ನಿಲ್ಲದ ಪ್ರಯತ್ನ ನಡೆಸಿದವು.

ಬಹಿರಂಗ ಪ್ರಚಾರಕ್ಕೆ ಭಾನುವಾರ ಕೊನೆಯ ದಿನವಾಗಿದ್ದರಿಂದ ಬೆಳಗ್ಗೆಯಿಂದಲೇ ಕಾಂಗ್ರೆಸ್, ಬಿಜೆಪಿ ಸೇರಿ ಕಣದಲ್ಲಿರುವ ಉಳಿದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿರುಸಿನ ಪ್ರಚಾರ, ಪಾದಯಾತ್ರೆ, ಬಹಿರಂಗ ಸಭೆ, ರ‌್ಯಾಲಿಗಳ ಮೂಲಕ ಕೊನೆಯ ಕ್ಷಣದವರೆಗೂ ಶಕ್ತಿ ಪ್ರದರ್ಶಿಸಿದರು.

ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಯ ದಿನ ಜಿಲ್ಲೆಯ ಹುನಗುಂದ, ರಬಕವಿ-ಬನಹಟ್ಟಿ, ಮುಧೋಳ, ಕೆರೂರಿನಲ್ಲಿ ಬಹಿರಂಗ ಪ್ರಚಾರ ನಡೆಸಿ ವೀಣಾ ಕಾಶಪ್ಪನವರ ಪರ ಮತಬೇಟೆ ನಡೆಸಿದರು. ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಬಿಜೆಪಿ ಗೆಲುವು ಸಾಧಿಸಬಾರದು ಎಂದು ಗುಟುರು ಹಾಕಿದರು.

ತೇಜಸ್ವಿ ಸೂರ್ಯ ಪ್ರಚಾರ
ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ನರಗುಂದದಲ್ಲಿ ಬಿಜೆಪಿ ಬಲ ಪ್ರದರ್ಶನ ನಡೆಸಿತು. ಬೆಂಗಳೂರು ದಕ್ಷಿಣ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಹ್ಯಾಟ್ರಿಕ್ ಹುಲಿ, ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮಾತನಾಡಿ, ನಾನು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರಿಂದಲೇ ಜನರು ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ಕೆಲಸ ಮಾಡದಿದ್ದರೆ ದೇವರು ನನ್ನನ್ನು ಕ್ಷಮಿಸುತ್ತಾನಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ಏತನ್ಮಧ್ಯೆ ಕೆಲ ಸಂಘಟನೆಗಳು ಕೊನೆಯ ಘಳಿಗೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ತಮ್ಮ ಬೆಂಬಲ ವ್ಯಕ್ತಪಡಿಸುವುದು ಕಂಡು ಬಂದಿತು. ಪಕ್ಷೇತರ ಅಭ್ಯರ್ಥಿಗಳು ಗಲ್ಲಿ ಗಲ್ಲಿ ಸುತ್ತಿ ಪಾದಯಾತ್ರೆ ನಡೆಸಿದರು.

ಮೌನ ಮತಬೇಟೆ
ಮತದಾನದ ಮುನ್ನಾ ದಿನ ಸೋಮವಾರ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೌನ ಮತಬೇಟೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಬಿರುಸಿನ ಪ್ರಚಾರ ನಡೆಸಿದರು. ಜತೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷೃದ ಅಭ್ಯರ್ಥಿ ವೀಣಾ ಕಾಶಪ್ಪನವರ ಪರವಾಗಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ರಾಜ್ಯ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮೈತ್ರಿ ಪಕ್ಷೃಗಳ ಮುಖಂಡರು ಎರಡು ವಾರ ಭರ್ಜರಿ ಪ್ರಚಾರ ನಡೆಸಿದರು.