ಮೋದಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ !

ಬಾಗಲಕೋಟೆ: ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ನೂರಾರು ಭರವಸೆ ನೀಡಿ ಯಾವುದನ್ನೂ ಈಡೇರಿಸಿಲ್ಲ. ಸುಳ್ಳುಗಳ ಸರಮಾಲೆಗಳ ಭಾಷಣ ಮಾಡಿ ವಚನ ಭ್ರಷ್ಟರಾಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಬೀಳಗಿ ತಾಲೂಕಿನ ಸುನಗ ಗ್ರಾಮದಲ್ಲಿ ಮಂಗಳವಾರ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಚ್ಛೇ ದಿನ್ ಬರುತ್ತದೆ ಎಂದು ಹೇಳಿದ್ದ ಮೋದಿ ಅವರು 5 ವರ್ಷದಲ್ಲಿ ಜನಸಾಮಾನ್ಯರಿಗೆ ನೀಡಿದ ಕೊಡುಗೆ ಶೂನ್ಯ. ಮಾತು ತಪ್ಪಿರುವ ಅವರಿಗೆ ಮತ ಕೇಳುವ ನೈತಿಕ ಹಕ್ಕು ಇಲ್ಲ. ಬಿಜೆಪಿ ಪ್ರಣಾಳಿಕೆಯಲ್ಲಿ ಬರೀ ಪೊಳ್ಳು ಭರವಸೆ ನೀಡಲಾಗಿದೆ. ನಿವೃತ್ತಿ ವೇತನ ಹೆಚ್ಚಳ, 370 ಕಾಯ್ದೆ ರದ್ದು, ರಾಮಮಂದಿರ ನಿರ್ಮಾಣ ಹೀಗೆ ಹಳೇ ಭರವಸೆಗಳನ್ನೇ ನೀಡಿದ್ದಾರೆ ಎಂದು ಲೇವಡಿ ಮಾಡಿದರು.

ಉತ್ತರ ಕರ್ನಾಟಕದ ಬಾಗಲಕೋಟೆ ಮತಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಜಿಪಂ ಅಧ್ಯಕ್ಷೆಯಾಗಿ ಜನಪರ ಆಡಳಿತ ನೀಡಿದ್ದಾರೆ. ಅವರ ಕಾರ್ಯಬದ್ಧತೆಯಿಂದಲೇ ಜನಮಾನಸದಲ್ಲಿ ಉಳಿದಿದ್ದಾರೆ. ಕೆಲಸ ಮಾಡುವವರನ್ನು ಜನರು ಕೈ ಹಿಡಿದು ಬೆಳೆಸಬೇಕು. ವೀಣಾ ಕಾಶಪ್ಪನವರಗೆ ಜನರು ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ವಿಪ ಸದಸ್ಯ ಎಸ್.ಆರ್. ಪಾಟೀಲ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಶಾಸಕರಾದ ಜೆ.ಟೆ. ಪಾಟೀಲ, ಎಸ್.ಜಿ. ನಂಜಯ್ಯನಮಠ, ವಿಜಯಾನಂದ ಕಾಶಪ್ಪನವರ, ನಂದಿಹಳ್ಳಿ ಹಾಲಪ್ಪ, ಬಸವಪ್ರಭು ಸರನಾಡಗೌಡ, ಶಿವಾನಂದ ನಿಂಗನೂರ, ರಾಜುಮನ್ನಿಕೇರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಜಿಪಂ ಸದಸ್ಯೆ ಕಸ್ತೂರಿ ಲಿಂಗಣ್ಣವರ ಇತರರು ಇದ್ದರು.

ಐದಿನೈದು ವರ್ಷಗಳ ಕಾಲ ಅಧಿಕಾರ ನಡೆಸಿದವರು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದೆ ನಿರ್ಲಕ್ಷೃ ಮಾಡಿದ್ದಾರೆ. ಬಾಗಲಕೋಟೆ -ಕುಡಚಿ ರೈಲ್ವೆ ಮಾರ್ಗ ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ. ಯುವಕರಿಗೆ , ಮಹಿಳೆಯರಿಗೆ ಉದ್ಯೋಗ ಸೃಷ್ಟಿಮಾಡಲಿಲ್ಲ. ಮತ್ತೊಂದು ಬಾರಿ ಮೋದಿ ಮುಖ ನೋಡಿ ಮತ ನೀಡಿ ಎಂದು ಕೇಳುತ್ತಿದ್ದಾರೆ. ತಮ್ಮ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುತ್ತಿಲ್ಲ. ಈ ಸಾರಿ ನನಗೆ ಅವಕಾಶ ನೀಡಿ ನಿಮ್ಮ ಸೇವೆ ಮಾಡುತ್ತೇನೆ.
– ವೀಣಾ ಕಾಶಪ್ಪನವರ ಕಾಂಗ್ರೆಸ್ ಅಭ್ಯರ್ಥಿ