ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕ ಭಾಗದ 14 ಸ್ಥಾನಗಳಲ್ಲಿ 11 ಸೇರಿ ರಾಜ್ಯದಲ್ಲಿ 22ಕ್ಕೂ ಅಧಿಕ ಸ್ಥಾನ ಬಿಜೆಪಿ ಗೆಲ್ಲಲಿದೆ. ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದರು.

ನಗರದಲ್ಲಿ ಗುರುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ರ‌್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರ ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ವಂಚನೆ ಮಾಡಿದೆ. ನೇಕಾರರನ್ನು ನಿರ್ಲಕ್ಷೃ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಿಎಂ ಕುಮಾರಸ್ವಾಮಿ ರಾಜ್ಯದ ಜನರ ತೆರಿಗೆ ಲೂಟಿ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಸುಮಲತಾ ಸೋಲಿಸಲು 150 ಕೋಟಿ, ಅವರ ತಂದೆ, ಮಾಜಿ ಪಿಎಂ ದೇವೇಗೌಡರನ್ನು ಗೆಲ್ಲಿಸಲು 100 ಕೋಟಿಯಷ್ಟು ಹಣದ ಹೊಳೆ ಹರಿಸಿದ್ದಾರೆ. ಅವರು ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಹುಷಾರ್..
ಎಸ್ಸಿ,ಎಸ್ಟಿ ಜನಾಂಗಕ್ಕೆ ಕಾಂಗ್ರೆಸ್ ಯಾವ ಕೊಡುಗೆ ನೀಡಿಲ್ಲ. ದಿ.ಜಗಜೀವನರಾಮ್ ಅವರನ್ನು ಪ್ರಧಾನಿ ಮಾಡಲು ಅಟಲಜೀ ಮುಂದಾಗಿದ್ದರು. ಉದ್ದೇಶಪೂರ್ವಕವಾಗಿ ಅದಕ್ಕೂ ಕತ್ತರಿ ಹಾಕಿದರು ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿಮಾತಾಡಿದರೆ ಹುಷಾರ್ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ ಅವರು, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಪ್ರಾಮಾಣಿಕ ಮನುಷ್ಯ. ಅವರ ಬಳಿ ಹಣವಿಲ್ಲ. ಕಾರ್ಯಕರ್ತರು ಸ್ವಂತ ಜೇಬಿನಿಂದ 500 ರೂ. ಖರ್ಚು ಮಾಡಿ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಮಾಜಿ ಡಿಸಿಎಂ, ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ದಕ್ಷಿಣ ಕರ್ನಾಟಕ ಭಾಗದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಇದು ಒಳ್ಳೆಯದಲ್ಲ. ಈ ಭಾಗದಲ್ಲಿ ಉರಿ ಬಿಸಿಲು ಇದ್ದು, ಏ.23 ರಂದು ನಡೆಯುವ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವ ಹಾಗೇ ಕಾರ್ಯಕರ್ತರು ಮಾಡಬೇಕು. ಈ ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯಲ್ಲ ಎಂದರು.

ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಜಿಪಂ ಅಧ್ಯಕ್ಷರಾಗಿದ್ದ ವೇಳೆ ಜಿಲ್ಲೆಗೆ ಯಾವ ಕೊಡುಗೆ ಕೊಟ್ಟಿಲ್ಲ. ಒಂದು ಸಭೆ ಮಾಡಲಿಲ್ಲ. ಪತಿ ವಿಜಯಾನಂದ ಹೇಳಿದಂತೆ ಅವರು ಕೆಲಸ ಮಾಡುತ್ತಾರೆ. ಅವರ ದರ್ಪ, ದೌರ್ಜನ್ಯ, ವಸೂಲಿ ಹೇಗಿತ್ತು ಎನ್ನುವುದು ಈಗಾಗಲೇ ಜನರಿಗೆ ಗೊತ್ತಿದೆ. ಅದಕ್ಕೆ ಅವರನ್ನು ಸೋಲಿಸಿದ್ದಾರೆ. ಇದೀಗ ಮಲಪ್ರಭಾ, ಕೃಷ್ಣಾ ಮರಳುಗಾರಿಕೆ ಕಣ್ಣು ಹಾಕಿ ತಮ್ಮ ಕುಟುಂಬದವರನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ. ಭಯೋತ್ಪಾದನೆ, ನಕ್ಸಲ್ ಮುಕ್ತ ಮಾಡಲು ಪಣತೊಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಾಗಿ ಮೋದಿ ಸರ್ಕಾರ 60 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಕಳೆದ 5 ವರ್ಷದಲ್ಲಿ ಮೋದಿ ಸರ್ಕಾರ ದೇಶದ 54 ಲಕ್ಷ ಕೋಟಿ ರೂ.ಸಾಲ ತೀರಿಸಿ ಬೇರೆ ರಾಷ್ಟ್ರಗಳಿಗೆ ಸಾಲ ನೀಡಿದ್ದಾರೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಯೋಜನೆ ರೂಪಿಸಿದ್ದಾರೆ.
– ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಬಾಗಲಕೋಟೆ ಮತಕ್ಷೇತ್ರದ ಜನರು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರನ್ನು ಗೆಲ್ಲಿಸಬೇಕು. ಮೂರು ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ.
– ವೀರಣ್ಣ ಚರಂತಿಮಠ ಬಾಗಲಕೋಟೆ ಶಾಸಕ