ಸೋಲಿನ ಭೀತಿಯಿಂದ ಐಟಿ ದಾಳಿ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿಯಿಂದ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಿಸುತ್ತಿದೆ ಎಂದು ಕೆಪಿಸಿಸಿ ಚುನಾವಣೆ ಸಮಿತಿ ಅಧ್ಯಕ್ಷ, ವಿ.ಪ. ಸದಸ್ಯ ಪ್ರಕಾಶ ರಾಠೋಡ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಬರೀ ಸುಳ್ಳು ಹೇಳಿಕೊಂಡು ಮೋದಿ ತಿರುಗಾಡುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಜನಾರ್ದನ ರೆಡ್ಡಿ ತಮ್ಮ ಪುತ್ರಿ ವಿವಾಹ ಅದ್ದೂರಿಯಾಗಿ ಮಾಡಿದರು. ಆವಾಗ ಐಟಿ ಇಲಾಖೆ ಯಾವ ಕ್ರಮ ಕೈಗೊಳ್ಳಲಿಲ್ಲ. ಬಿ.ಎಸ್. ಯಡಿಯೂರಪ್ಪ ಶಾಸಕರ ಖರೀದಿಗೆ ಮುಂದಾದರೂ ಅವರ ಮನೆ ಮೇಲೆ ದಾಳಿ ಮಾಡಲಿಲ್ಲ. ಆದರೆ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಆಪ್ತರು, ನಾಯಕರ ಮೇಲೆ ಐಟಿ ದಾಳಿ ಮಾಡುವುದರ ಉದ್ದೇಶ ಜನರಿಗೆ ಅರ್ಥವಾಗಿದೆ ಎಂದರು. ಕಾಂಗ್ರೆಸ್ ವಕ್ತಾರ ಅನೀಲ ದಡ್ಡಿ, ಮುಖಂಡ ಚಂದ್ರಶೇಖರ ವಾಜಂತ್ರಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಕಾಂಗ್ರೆಸ್‌ಗೆ ಜೆಡಿಯು ಬೆಂಬಲ
ವಿ.ಪ. ಮಾಜಿ ಸದಸ್ಯ ಡಾ.ಎಂ.ಪಿ. ನಾಡಗೌಡ ಮಾತನಾಡಿ, ಜೆಡಿಯು ಪಕ್ಷ ಮೋದಿ ಅವರನ್ನು ವಿರೋಧಿಸುತ್ತದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡಿಲ್ಲ ಎಂದರು.

ಐಟಿ ದಾಳಿ ವಿಷಯಕ್ಕೂ ಸಚಿವ ಶಿವಾನಂದ ಪಾಟೀಲರಿಗೂ ಸಂಬಂಧವಿಲ್ಲ. ಆರೀಫ್ ಕಾರ್ಲೇಕರ್, ಯಾಸೀನ್ ತುಂಬರಮಟ್ಟಿ ಡಿಸಿಸಿ ಬ್ಯಾಂಕ್ ಸಿಬ್ಬಂದಿ. ಶಿವಾನಂದ ಪಾಟೀಲರ ಆಪ್ತರಲ್ಲ. ಇದಕ್ಕೆ ಬೇರೆ ರೀತಿಯಲ್ಲಿ ಅರ್ಥ ಕಲ್ಪಿಸಬಾರದು.
– ಎಂ.ಬಿ. ಸೌದಾಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ