ಲೋಕಸಮರಕ್ಕೆ ರಣಕಲಿಗಳು ಫೈನಲ್

ಅಶೋಕ ಶೆಟ್ಟರ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದು, ಬಿಜೆಪಿ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಅವರನ್ನು ನಾಲ್ಕನೇ ಬಾರಿಗೆ ಅಭ್ಯರ್ಥಿಯನ್ನಾಗಿ ಮಾಡಿದೆ. ಅವರ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದಿಂದ ವೀಣಾ ಕಾಶಪ್ಪನವರ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಪಡೆದಿರುವ ಬಿಜೆಪಿ ಗೆಲುವಿನ ಉತ್ಸಾಹದಲ್ಲಿದೆ. ಮತ್ತೊಂದು ಕಡೆಗೆ ಸೋಲಿನ ಸರಪಳಿಯಿಂದ ಹೊರಬರಲು ಈ ಬಾರಿ ಕಾಂಗ್ರೆಸ್ ಪಕ್ಷ ತನ್ನ ತಂತ್ರಗಾರಿಕೆ ಬದಲಿಸಿದೆ. ಕ್ಷೇತ್ರದಲ್ಲಿ ಬಹುವರ್ಷಗಳ ಬಳಿಕ ಲಿಂಗಾಯತ ಮತ್ತು ಮಹಿಳಾ ಕೋಟಾದಡಿ ವೀಣಾ ಕಾಶಪ್ಪನವರಿಗೆ ಟಿಕೆಟ್ ಘೋಷಣೆ ಮಾಡಿದೆ.

ವೀಣಾ ಕಾಶಪ್ಪನವರ ಲೋಕಸಭೆ ರಣರಂಗಕ್ಕೆ ಹೊಸಮುಖ ಆಗಿದ್ದರೂ ರಾಜಕೀಯ ಕ್ಷೇತ್ರಕ್ಕೆ ಹೊಸಬರೇನು ಅಲ್ಲ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ 33 ತಿಂಗಳು ಅಧಿಕಾರ ನಡೆಸಿದ್ದಾರೆ. ಜತೆಗೆ ಅವರದ್ದು 24*7 ರಾಜಕೀಯ ಕುಟುಂಬ ಸಹ ಹೌದು. ವೀಣಾ ಅವರ ಮಾವ, ಅತ್ತೆ, ಪತಿ ಸಹ ಶಾಸಕರಾಗಿದ್ದವರು.
ವೀಣಾ ಅವರು ಎರಡು ವರ್ಷಗಳಿಂದಲೂ ಲೋಕಸಭೆ ಚುನಾವಣೆ ಟಿಕೆಟ್ ಗುರಿಯಾಗಿಟ್ಟುಕೊಂಡಿದ್ದರು. ಜಿಪಂ ಅಧ್ಯಕ್ಷೆ ಆಗಿದ್ದಾಗ ಕ್ಷೇತ್ರದಲ್ಲಿ ಸಾಕಷ್ಟು ಪರಿಚಯ ಸಹ ಆಗಿದ್ದಾರೆ. ಇದೀಗ ತೀವ್ರ ಪೈಪೋಟಿಯ ನಡುವೆ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ. ಇದರಿಂದ ಈ ಸಲದ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕದನ ಜೋರಾಗಿಯೇ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಗೌಡರಿಗೆ ಮೋದಿ ಹವಾ, ವೀಣಾಗೆ ಸಿದ್ದು ಬಲ !
ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಈಗಾಗಲೇ ಮೂರು ಅವಧಿಯಲ್ಲಿ ಗೆಲುವು ಕಂಡಿದ್ದಾರೆ. ಕ್ಷೇತ್ರಕ್ಕೆ ಪರಿಚಿತರು. ಆದರೆ, ಸತತ ಮೂರು ಬಾರಿ ಅಧಿಕಾರದಲ್ಲಿ ಇದ್ದಿದ್ದರಿಂದ ವೈಯಕ್ತಿಕವಾಗಿ ಅವರ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಸಹಜವಾಗಿ ಕೇಳಿ ಬರುತ್ತಿವೆ. ಆದರೆ, ಅದೆಲ್ಲಕ್ಕಿಂತ ಇದು ದೇಶದ ಚುಕ್ಕಾಣಿ ಯಾರ ಕೈಗೆ ಎನ್ನುವ ಚರ್ಚೆ ದೊಡ್ಡಮಟ್ಟದಲ್ಲಿ ಆಗುತ್ತಿರುವುದು ಹಾಲಿ ಸಂಸದರಿಗೆ ವರವಾಗಿ ಪರಿಣಮಿಸಿದೆ. ಮೋದಿ ಅಲೆ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ಇದನ್ನೇ ಬಿಜೆಪಿ ನೆಚ್ಚಿಕೊಂಡಿದೆ.

ಇತ್ತ ಕಾಂಗ್ರೆಸ್ ಪಕ್ಷ ಸಹ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಲ ಹೆಚ್ಚು ಅವಲಂಬಿಸಿದೆ. ಅವರು ಜಿಲ್ಲೆಯ ಬಾದಾಮಿ ಶಾಸಕರೂ ಆಗಿರುವುದರಿಂದ ಅವರ ವರ್ಚಸ್ಸುನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ. ಕ್ಷೇತ್ರವನ್ನು ಪಕ್ಷಕ್ಕೆ ದಕ್ಕಿಸಿಕೊಡುವುದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಹಿಂದ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳುವ ಸವಾಲು ಅವರ ಎದುರಿಗೆ ಇದೆ. ಕ್ಷೇತ್ರದಲ್ಲಿ ಸೋಲಿನ ಸರಪಳಿಯಲ್ಲಿ ಸಿಕ್ಕಿರುವ ಕಾಂಗ್ರೆಸ್‌ಗೆ ಗೆಲುವಿನ ರುಚಿ ಸಿಗಬಹುದು ಎನ್ನುವ ವಿಶ್ವಾಸದಲ್ಲಿ ಕೈ ಪಡೆ ಇದೆ.

ಕ್ಷೇತ್ರದ ಇತಿಹಾಸದಲ್ಲಿ ಮೊದಲು ಬಾರಿಗೆ ಮಹಿಳೆಗೆ ಟಿಕೆಟ್ ನೀಡಿದ್ದು ಬಹಳ ಸಂತಸ ತಂದಿದೆ. ಈಗಾಗಲೇ ಜಿಪಂ ಅಧ್ಯಕ್ಷೆಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಈ ವಿಷಯವಾಗಿ ನಾನು ಅಭಿವೃದ್ಧಿ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ ವಿನಃ ಯಾರನ್ನೂ ತೆಗಳುವ ಕೆಲಸ ಮಾಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತರು ಸೇರಿ ಎಲ್ಲ ಹಿರಿಯ-ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ.
-ವೀಣಾ ಕಾಶಪ್ಪನವರ ಕಾಂಗ್ರೆಸ್ ಘೋಷಿತ ಅಭ್ಯರ್ಥಿ

ಕ್ಷೇತ್ರದಲ್ಲಿ ಅಮೃತ, ಹೃದಯ ಯೋಜನೆಗಳನ್ನು ತಂದಿದ್ದೇನೆ. ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದೇನೆ. ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿದ್ದೇನೆ. ಇದರ ಜತೆಗೆ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎನ್ನುವುದು ಎಲ್ಲರ ಆಶಯವಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನನ್ನ ವೈಯಕ್ತಿಕ ಸಂಪರ್ಕ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಶಕ್ತಿ, ನರೇಂದ್ರ ಮೋದಿ ಅಲೆ ಎಲ್ಲವೂ ಒಗ್ಗೂಡಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ.
-ಪಿ.ಸಿ.ಗದ್ದಿಗೌಡರ ಹಾಲಿ ಸಂಸದ, ಬಿಜೆಪಿ ಘೋಷಿತ ಅಭ್ಯರ್ಥಿ