ಕೈ ಸಂಭಾವ್ಯ ಅಭ್ಯರ್ಥಿಗಳು ಇನ್ನೂ ನಿಗೂಢ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿದ್ದು, ಆಯ್ಕೆಯ ಪರಮಾಧಿಕಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.

ಬೆಂಗಳೂರಲ್ಲಿ ಶುಕ್ರವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕರೆಯಲಾಗಿದ್ದ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳು ಯಾರ‌್ಯಾರು ಎನ್ನುವುದು ನಿರ್ಧರಿಸಲು ಸಾಧ್ಯವಾಗಿಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ 15ರ ಗಡಿ ದಾಟಿದ್ದು, ಇದರಲ್ಲಿ ಮೂವರು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಷ್ಟವಾಗಿದೆ. ಒಬ್ಬೊಬ್ಬ ಆಕಾಂಕ್ಷಿಗಳ ಹಿಂದೆ ಒಬ್ಬೊಬ್ಬ ಹಿರಿಯ ನಾಯಕರ ಒಲುವು ಇರುವುದು ಸದ್ಯಕ್ಕೆ ನಿರ್ಧಾರ ತೆಗೆದುಕೊಳ್ಳಲು ಆಗಲಿಲ್ಲ ಎಂದು ಹೇಳಲಾಗುತ್ತಿದೆ.

ಆರಂಭದಲ್ಲಿ ಎಲ್ಲ ನಾಯಕರನ್ನು ಒಳಗೊಂಡ ಸಭೆ ನಡೆಸಿ, ಬಳಿಕ ಮುಖಂಡರನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಅವರಿಂದ ಅಭಿಪ್ರಾಯ ಪಡೆದ ಸಿದ್ದರಾಮಯ್ಯ, ಬಳಿಕ ಎಲ್ಲರನ್ನು ಕೂಡಿಸಿಕೊಂಡು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಮುಖಂಡರಿಗೆ ನೀಡಲಾಗುವುದು. ಯಾರೇ ಅಭ್ಯರ್ಥಿಯಾದರೂ ಜಿಲ್ಲೆಯ ಎಲ್ಲ ಮುಖಂಡರು ಒಗ್ಗೂಡಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಶಾಸಕ ಜೆ.ಟಿ. ಪಾಟೀಲ ಅಸಮಧಾನ!
ಪಟ್ಟಿಯಲ್ಲಿ ಬೀಳಗಿ ವಿಧಾನಸಭೆ ಕ್ಷೇತ್ರದ ಆಕಾಂಕ್ಷಿಗಳ ಹೆಸರು ಇಲ್ಲದ್ದಕ್ಕೆ ಮಾಜಿ ಶಾಸಕ ಜೆ.ಟಿ. ಪಾಟೀಲ ಅಸಮಧಾನ ಹೊರಹಾಕಿದರು ಎನ್ನಲಾಗಿದೆ. ಬೀಳಗಿಯಲ್ಲಿ ಬಸವಪ್ರಭು ಸರನಾಡಗೌಡ, ಜಿಪಂ ಬಸವರಾಜ ಖೋತ ಹಾಗೂ ಶಿವಾನಂದ ನಿಂಗನೂರ ಆಕಾಂಕ್ಷಿಗಳಿದ್ದಾರೆ. ಅವರ ಹೆಸರೇಕೆ ಇಲ್ಲ ಎಂದು ಗರಂ ಆದರು. ಬಳಿಕ ಅವರನ್ನು ಸಮಾಧಾನ ಪಡಿಸಲಾಯಿತು ಎಂದು ಹೇಳಲಾಗುತ್ತಿದೆ.

ಮಾಹಿತಿ ಸಂಗ್ರಹ
ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆಯೂ ಸಿದ್ದರಾಮಯ್ಯ ಮಾಹಿತಿ ಸಂಗ್ರಹಿಸಿದ್ದಾರೆ. ವೀಣಾ ಕಾಶಪ್ಪನವರ, ಶಿವಾನಂದ ಉದಪುಡಿ, ಶ್ರೀಶೈಲ ದಳವಾಯಿ, ರಕ್ಷಿತಾ ಈಟಿ, ಎಸ್.ಜಿ. ನಂಜಯ್ಯನಮಠ ಸೇರಿ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಸಚಿವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ದಳವಾಯಿ ಬದಲು ಮೇಟಿ ಹೆಸರು ಇರಲಿ!
ಮೂರ‌್ನಾಲ್ಕು ದಿನಗಳಿಂದ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಶ್ರೀಶೈಲ ದಳವಾಯಿ ಬಗ್ಗೆ ವೈಯಕ್ತಿವಾಗಿ ಸಿದ್ದರಾಮಯ್ಯ ಅವರಿಗೆ ಆಸಕ್ತಿ ಇದ್ದಂತಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಲಿಂಗಾಯತ ಇಲ್ಲವೆ ಕುರುಬ ಸಮಾಜಕ್ಕೆ ಟಿಕೆಟ್ ಕೊಡಬೇಕು ಎನ್ನುವ ಒತ್ತಡ ಇದ್ದು, ಕುರುಬ ಸಮಾಜಕ್ಕೆ ಸಿಕ್ಕಲ್ಲಿ ದಳವಾಯಿ ಹೆಸರು ಮುಂಚೂಣಿಯಲ್ಲಿ ಇದ್ದಂತಿದೆ. ಆದರೆ, ಇದಕ್ಕೆ ಕೆಲ ಹಿರಿಯ ಮುಖಂಡರು ಆಕ್ಷೇಪ ಎತ್ತಿದ್ದಾರಂತೆ. ಹಾಗೊಂದು ವೇಳೆ ಕುರುಬ ಸಮಾಜಕ್ಕೆ ಆದ್ಯತೆ ಕೊಡುವುದಾದಲ್ಲಿ ಮಾಜಿ ಸಚಿವ ಎಚ್.ವೈ. ಮೇಟಿ ಅವರ ಹೆಸರನ್ನು ಪರಿಶೀಲಿಸಿ ಎನ್ನುವ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಲಿಂಗಾಯತ ಲಾಭಿ ಜೋರು
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸತತ ಮೂರು ಸಲ ಸೋಲು ಅನುಭವಿಸಿದ್ದು, ಈ ಸಲ ಗೆಲುವು ಪಡೆಯಲು ಬಹುಸಂಖ್ಯೆಯ ಮತದಾರರು ಇರುವ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಬೇಕು ಎನ್ನುವ ಒತ್ತಾಸೆಯೂ ಜಾಸ್ತಿ ಇದೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಬತ್ತಳಿಕೆಯಲ್ಲಿ ಇರುವ ಲಿಂಗಾಯತ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಬಿಟ್ಟುಕೊಟ್ಟಿಲ್ಲ. ಎಸ್.ಆರ್. ಪಾಟೀಲ ಅವರು ಈಗಾಗಲೇ ನಯವಾಗಿಯೇ ಸ್ಪರ್ಧೆಗೆ ಒಲ್ಲೆ ಎಂದಿದ್ದರಿಂದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕಡೆಗೆ ಸಿದ್ದರಾಮಯ್ಯ ಕಣ್ಣಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಹಾಲಿ ಶಾಸಕರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿಗೆ ನೀಡುತ್ತಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾದಲ್ಲಿ ಇನ್ನಾೃರು ಸಂಭಾವ್ಯರ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ ಎನ್ನುವುದು ನಿಗೂಢವಾಗಿದೆ.

ಕೃಷ್ಣೆ ಬಗ್ಗೆ ಸರ್ಕಾರ ಧೋರಣೆಗೆ ಎಸ್ಸಾರ್ಪಿ ಅತೃಪ್ತಿ?
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಅವರ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಬಗ್ಗೆ ಸರ್ಕಾರದ ನಿರ್ಲಕ್ಷೃ ಪ್ರಸ್ತಾಪಿಸಿದ್ದು, ಸರ್ಕಾರ ಧೋರಣೆ ಬಗ್ಗೆ ಬೇಸರ ಹೊರಹಾಕಿದರು ಎನ್ನಲಾಗುತ್ತಿದೆ.
ಬಜೆಟ್‌ನಲ್ಲಿ ಕೃಷ್ಣಾ ಯೋಜನೆಗೆ ಅನುದಾನ ನೀಡಿಲ್ಲ. ಈ ನಿರ್ಲಕ್ಷೃ ಸರಿಯಾದುದಲ್ಲ. ಸಂತ್ರಸ್ತರ ತ್ಯಾಗವನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಆದರೆ, ನಮಗೆ ತೀವ್ರ ನಿರಾಸೆ ಆಗಿದೆ. ದೋಸ್ತಿ ಸರ್ಕಾರದಲ್ಲಿ ಸಂತ್ರಸ್ತರ ಜಿಲ್ಲೆಗೆ ಏನು ಕೊಡಬೇಕಿತ್ತೋ ಅದನ್ನು ಕೊಟ್ಟಿಲ್ಲ. ಜಿಲ್ಲೆಯ ಅಭಿವೃದ್ಧಿಯನ್ನು ಬಲಿಕೊಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರಂತೆ. ಇದಕ್ಕೆ ಬೀಳಗಿ ಮಾಜಿ ಶಾಸಕ ಜೆ.ಟಿ. ಪಾಟೀಲ ಸಹ ಧ್ವನಿಗೂಡಿಸಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರು ಮುಂಬರುವ ದಿನಗಳಲ್ಲಿ ಆಗಿರುವ ಲೋಪ ಸರಿಪಡಿಸಲಾಗುವುದು. ಕೃಷ್ಣಾ ಯೋಜನೆಗೆ ಹೆಚ್ಚಿನ ಅನುದಾನ ಕೊಡೆಸುವುದಾಗಿ ಭರವಸೆ ನೀಡಿದರು ಎಂದು ಹೇಳಲಾಗುತ್ತಿದೆ.