ಕೈ ಪಡೆ ಭರ್ಜರಿ ರೋಡ್ ಶೋ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಪಕ್ಷದ ಮುಖಂಡರ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಸೋಮವಾರ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ‘ವೀಣಾ’ ಪರ ೋಷಣೆಗಳು ಪ್ರತಿಧ್ವನಿಸಿದವು.

ನಗರದ ಪ್ರಮುಖ ಕೇಂದ್ರ ಬಸವೇಶ್ವರ ಪುತ್ಥಳಿಗೆ ಮಾರ್ಲಾಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನೆರೆದಿದ್ದ ಸಹಸ್ರಾರು ಕಾರ್ಯಕರ್ತರು, ಅಭಿಮಾನಿಗಳ ಹರ್ಷೋದ್ಗಾರದ ಮಧ್ಯೆ ವೀಣಾ ಕಾಶಪ್ಪನವರ ತೆರೆದ ವಾಹನ ಏರುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆಯಾದವು. ಕಾರ್ಯಕರ್ತರು, ಅಭಿಮಾನಿಗಳತ್ತ ಕೈ ಬೀಸುತ್ತಿದ್ದಂತೆ ಜಯಘೋಷಗಳು ಮೊಳಗಿದವು.

ಮೆರವಣಿಗೆ ಎಂ.ಜಿ.ರಸ್ತೆ, ಪೊಲೀಸ್ ಚೌಕಿ, ಅಡತ ಬಜಾರ್, ಹೊಸ ಕಾಯಿಪಲ್ಲೆ ಮಾರುಕಟ್ಟೆ ಮಾರ್ಗವಾಗಿ ಪಂಖಾ ಮಸೀದಿ, ಹಳೇ ಪೋಸ್ಟ್ ಆಫೀಸ್ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ತಲುಪಿತು. ಅಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ನಗರದ ಸಕ್ರಿ ಹೈಸ್ಕೂಲ್ ಮೈದಾನ ತಲುಪಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.

ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆ ಮಾರ್ಗದೂದ್ದಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಬಾವುಟಗಳು ರಾರಾಜಿಸಿದವು. ಕಿಂಗ್ ಈಜ್ ಕಿಂಗ್ ಕಾಶಪ್ಪನವರ ಕಿಂಗ್.., ಜೈ ಕಾಂಗ್ರೆಸ್, ಅಕ್ಕ ಅಂದರೆ ನಮ್ಮಕ್ಕ ವೀಣಕ್ಕ ಸೇರಿ ನಾನಾ ರೀತಿಯ ಘೋಷಣೆಗಳು ಮೊಳಗಿದವು. ಝಾಂಜ್ ಪಥಕ್, ಡೊಳ್ಳು ವಾದನ ನಾದಕ್ಕೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಕಾಂಗ್ರೆಸ್ ನಾಯಕರ ಜತೆಗೆ ಜೆಡಿಎಸ್ ನಾಯಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಅಭ್ಯರ್ಥಿ ವೀಣಾ ಕಾಶಪ್ಪನವರ ಸೇರಿ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕೈ ಮುಗಿದು ಮತಯಾಚಿಸಿದರು.

ಅಲಂಕೃತಗೊಂಡ ವಿಶೇಷ ತೆರೆದ ವಾಹನದಲ್ಲಿ ಅಭ್ಯರ್ಥಿ ವೀಣಾ ಕಾಶಪ್ಪನವರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ನಾಯಕರಾದ ಎಸ್.ಜಿ. ನಂಜಯ್ಯನಮಠ, ವಿಜಯಾನಂದ ಕಾಶಪ್ಪನವರ, ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ, ಹನುಮಂತ ಮಾವಿನಮರದ ಸೇರಿ ಅನೇಕ ಮುಖಂಡರು ಸಾಥ್ ನೀಡಿದರು.