ಕೆಲಸಕ್ಕೆ ಕೂಲಿ ನೀಡಿ ಆನಂದನನ್ನು ಗೆಲ್ಲಿಸಿ

<< ಮಾಜಿ ಸಿಎಂ ಸಿದ್ದರಾಮಯ್ಯ ಮನವಿ > ಕಾಂಗ್ರೆಸ್ ಪ್ರಚಾರ ಸಭೆ >>

ಸಾವಳಗಿ: ಈ ಭಾಗದ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಕಲ್ಪಿಸಿದ ದಿ. ಸಿದ್ದು ನ್ಯಾಮಗೌಡರ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಆನಂದ ನ್ಯಾಮಗೌಡ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸಾವಳಗಿ ಸಮೀಪದ ಹಿರೇಪಡಸಲಗಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಜಮಖಂಡಿ ಮಾಜಿ ಶಾಸಕ ದಿ. ಸಿದ್ದು ನ್ಯಾಮಗೌಡರು ಚಿಕ್ಕಪಡಸಲಗಿ ಶ್ರಮ ಬಿಂದು ಸಾಗರದ ಬ್ಯಾರೇಜ್ ಎತ್ತರಿಸಲು ಅಂದಾಜು 10 ಕೋಟಿ ಅನುದಾನ ನನ್ನ ಅಧಿಕಾರಾವಧಿಯಲ್ಲಿ ಬಿಡುಗಡೆಗೊಳಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಉಚಿತ 7 ಕೆ.ಜಿ ಅಕ್ಕಿ ವಿತರಿಸಿ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದೇನೆ. ಬಿಜೆಪಿ ಆಡಳಿತವಿರುವ ಯಾವ ರಾಜ್ಯದಲ್ಲಿಯೂ ಇಂಥ ಕೆಲಸ ಮಾಡಿಲ್ಲ. ರಾಜ್ಯದ ಮಕ್ಕಳಿಗೆ ಹಾಲು ವಿತರಣೆ, ಶೂ ಭಾಗ್ಯ, ಮೈತ್ರಿ, ಮನಸ್ವಿನಿ, ಮಾತೃಪೂರ್ಣ ಯೋಜನೆಯಂಥ ಬಡವರ ಪರ ಕಾರ್ಯಕ್ರಮ ಜಾರಿ ಮಾಡಿದ್ದೇನೆ. ಅದಕ್ಕೆ ಪ್ರತಿಯಾಗಿ ಕೂಲಿ ನೀಡಿ ಪಕ್ಷದ ಅಭ್ಯರ್ಥಿ ಆನಂದ ನ್ಯಾಮಗೌಡರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಬಿಜೆಪಿ ದೇವರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದು, ರಾಮನ ಹೆಸರಲ್ಲಿ ಮತ ಕೇಳಬೇಕಾದರೆ ರಾಮನಷ್ಟೇ ಪವಿತ್ರವಾಗಿರಬೇಕು. ಬಿಜೆಪಿ ಸರ್ಕಾರ ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಮರಳಿ ತಂದಿಲ್ಲ. 2 ಕೋಟಿ ಉದ್ಯೋಗ ನೀಡುವ ಭರವಸೆ ಈಡೇರಿಲ್ಲ ಎಂದು ಗುಡುಗಿದರು.

ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಸ್.ಆರ್. ಪಾಟೀಲ, ಅಂಜಲಿ ನಿಂಬಾಳ್ಕರ್, ಆರ್.ಬಿ. ತಿಮ್ಮಾಪುರ, ಜೆ.ಟಿ. ಪಾಟೀಲ, ವಿನಯ ಕುಲಕರ್ಣಿ, ಎಸ್.ಕೆ. ಬೆಳ್ಳುಬ್ಬಿ, ಶ್ರೀಶೈಲ ದಳವಾಯಿ ಇನ್ನಿತರರು ಇದ್ದರು.

ನೀರಾವರಿ ಕೆಲಸ ಪೂರ್ಣ: ಕರ್ನಾಟಕದಲ್ಲಿ ಜೆಡಿಎಸ್ ಜತೆಗೂಡಿ ಸರ್ಕಾರ ಮಾಡಿದ್ದು, ಕಾಂಗ್ರೆಸ್‌ನವರೇ ನೀರಾವರಿ ಮಂತ್ರಿ ಇದ್ದಾರೆ. ಈ ಭಾಗದಲ್ಲಿ ಅರ್ಧಕ್ಕೆ ನಿಂತಿರುವ ನೀರಾವರಿ ಕೆಲಸ ಪೂರ್ಣ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸಾವಳಗಿ ಸಮೀಪದ ಚಿಕ್ಕಲಕಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದು, ಸದ್ಯದ ಮೈತ್ರಿ ಸರ್ಕಾರದಲ್ಲೂ ರೈತರ ಸಾಲ ಮನ್ನಾ ಮಾಡಲಾಗಿದೆ. ರೈತರ ಸಾಲ ಮನ್ನಾ ಮಾಡಿರೋದು ಕಾಂಗ್ರೆಸ್, ಬಿಜೆಪಿ ಅಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕ್ತೀರಾ.. ಬಿಜೆಪಿಗೆ ಹಾಕ್ತೀರಾ.. ಎಂದು ಸಿದ್ದರಾಮಯ್ಯ ಕೇಳಿದ್ದಕ್ಕೆ ಜನತೆ ಕಾಂಗ್ರೆಸ್‌ಗೆ ಹಾಕ್ತೀವಿ ಎಂದರು.

ಶಾಸಕಿ ಅಂಜಲಿ ಮರಾಠಿ ಭಾಷಣ: ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಮರಾಠಿಯಲ್ಲಿ ಮಾತನಾಡಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಮುಜುಗರ ತರಿಸಿತು.