ಕುಮಾರಸ್ವಾಮಿ ಯೋಗ್ಯತೆ ಇಲ್ಲದ ಸಿಎಂ

ಬಾಗಲಕೋಟೆ: ಕುಮಾರಸ್ವಾಮಿ ಅಯೋಗ್ಯ ಸಿಎಂ ಎಂದು ಕರೆದಿದ್ದೆ. ಅದಕ್ಕೆ ಅವರು ಬೇಸರಗೊಂಡಿದ್ದಾರೆ. ಹೀಗಾಗಿ ಆ ಪದ ಹಿಂಪಡೆದು ‘ಯೋಗ್ಯತೆ ಇಲ್ಲದ ಸಿಎಂ’ ಎಂದು ಕರೆಯುತ್ತೇನೆ ಎಂದು ಮಾಜಿ ಡಿಸಿಎಂ, ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿ, ಪುಲ್ವಾಮಾ ದಾಳಿ ಬಗ್ಗೆ ಮೊದಲೇ ತಿಳಿದಿತ್ತು ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೊತ್ತಿದ್ದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕಿತ್ತು. ಎರಡು ವರ್ಷ ಸುಮ್ಮನೆ ಕುಳಿತು ಏನು ಮಾಡುತ್ತಿದ್ದರು. ಸೈನಿಕರು ಸಾಯಲಿ ಅಂತ ಸುಮ್ಮನಿದ್ರಾ? ಎಂದು ಪ್ರಶ್ನಿಸಿದ ಅವರು, ಸೈನಿಕರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಾತು ಕೇಳಿ ನನಗೆ ತುಂಬಾ ನೋವಾಗಿದೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಕಾಂಗ್ರೆಸ್ ಮುಗಿಸಿದ್ದಾಯಿತು. ಜೆಡಿಎಸ್ ಮುಗಿಸೋಕೆ ಹೊರಟಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಎಂಬ ಶಬ್ದ ಅಪವಿತ್ರವಾಗಿದೆ. ಆ ಮೈತ್ರಿ ಶಬ್ದವನ್ನು ಅವರು ಕೈ ಬಿಡಬೇಕು ಎಂದರು. ‘ಆರ್‌ಎಸ್‌ಎಸ್‌ನಿಂದ ಲೋಕಸಭೆ ಟಿಕೆಟ್ ಮಾರಾಟವಾಗಿದೆ’ ಎಂಬ ದಿನೇಶ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ದಿನೇಶ ಗುಂಡೂರಾವ್ ಹುಚ್ಚ. ಅವರ ತೆಲೆ ಕೆಟ್ಟಿದೆ. ಆರ್‌ಎಸ್‌ಎಸ್ ಬೆಳೆಯಲು ಬಿಡಲ್ಲ ಅಂತ ದಿನೇಶ, ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇಂದಿರಾ ಗಾಂಧಿ, ನೆಹರು ಅಂತಹವರಿಂದ ಏನೂ ಮಾಡಲು ಆಗಿಲ್ಲ. ಇವರಿಂದ ಏನು ಮಾಡಲು ಸಾಧ್ಯ. ಸಂಘ ಪರಿವಾರ ಹಿಂದುತ್ವ ಬೆಳೆಸುತ್ತಿದೆ. ದಿನೇಶ ಗುಂಡೂರಾವ್ ಮುಸ್ಲಿಂ ಸಮುದಾಯದ ಹೆಣ್ಣು ಮಗಳನ್ನು ಮದುವೆಯಾಗಿದ್ದಾರೆ. ಅವರು ನನ್ನ ಸಹೋದರಿ ಇದ್ದ ಹಾಗೆ, ಆ ಬಗ್ಗೆ ಮಾತಾಡೋದಿಲ್ಲ. ಆದರೆ ದಿನೇಶಗೆ ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ ಎಂದು ಕುಟುಕಿದರು.

‘ಹೆಲಿಕಾಪ್ಟರ್ ಲಭ್ಯವಾಗದಂತೆ ಬಿಜೆಪಿ ಕುತಂತ್ರ ನಡೆಸಿದೆ’ ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದ. ಚುನಾವಣೆ ಪ್ರಚಾರದ ಬಗ್ಗೆ ತಾವು ಮೊದಲೇ ಎಲ್ಲ ಸಿದ್ಧಪಡಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಹೇಳೋದು ಸರಿಯಲ್ಲ. ‘ನನ್ನ ಮಗನನ್ನು ಸೋಲಿಸುವ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ಮಾಡಲಾಗುತ್ತಿದೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟುಕೊಟ್ಟ ಕೆ.ಎಸ್. ಈಶ್ವರಪ್ಪ. ಅದು ಸಂಚಲ್ಲ ರಾಜಕೀಯ. ನಿಖಿಲ್ ಸೋಲಿಸುವುದಕ್ಕಾಗಿಯೇ ಬಿಜೆಪಿ ಸುಮಲತಾಗೆ ಬೆಂಬಲ ನೀಡಿದೆ. ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಂದಾಣಿಕೆ ಇಲ್ಲ. ಅವರವರೇ ಸೋಲಿಸೋಕೆ ನಿಂತಿದ್ದಾರೆ. ಮಂಡ್ಯ ಬಗ್ಗೆ ಇವರು ಹತಾಶರಾಗಿದ್ದು, ಸೋಲಿನ ಭೀತಿಯಿಂದ ಇಡೀ ಕುಟುಂಬ ಪ್ರಚಾರ ಮಾಡುತ್ತಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರನ್ನು ಪ್ರಚಾರಕ್ಕೆ ಕರೆ ತರುತ್ತಿದ್ದಾರೆ ಎಂದು ಟೀಕಿಸಿದರು.

‘ಸಿಎಂ ಆದಾಗಿನಿಂದಲೂ ನನಗೆ ಮಾಧ್ಯಮಗಳ ಸಹಕಾರವಿಲ್ಲ’ ಎಂಬ ಸಿಎಂ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ನೀವು ಏನು ಕೆಲಸ ಮಾಡಿದ್ದೀರಿ ಎಂದು ಸಹಕಾರ ನೀಡಬೇಕು. ನಿಮ್ಮ ಮೈತ್ರಿ ಪಕ್ಷೃದ ಶಾಸಕರೇ ನಿಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಏನು ಮಾಡದ ನಿಮ್ಮ ಬಗ್ಗೆ ಮಾಧ್ಯಮಗಳು ಸುಳ್ಳು ಪ್ರಚಾರ ಕೊಡಬೇಕಾ ? ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *