ಗ್ರಾಮ ವಾಸ್ತವ್ಯದಿಂದ ಪರಿಸ್ಥಿತಿ ಬದಲಾಗಲ್ಲ..!

ಬಾಗಲಕೋಟೆ: ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಇದ್ದಾಗ ಮಾಡಿದ್ದ ಗ್ರಾಮ ವಾಸ್ತವ್ಯ ಊರು ಮತ್ತು ಮನೆಗಳನ್ನು ಮತ್ತೆ ತಿರುಗಿಯೂ ನೋಡಿಲ್ಲ. ಅವರು ಇದ್ದಾರೋ? ಸತ್ತಿದ್ದಾರೋ? ಅಂತನೂ ಗಮನಸಿಲ್ಲ. ಇದೀಗ ಮತ್ತೆ ವಾಸ್ತವ್ಯ ಮಾಡಿದರೂ ಏನೂ ಬದಲಾಗಲ್ಲ ಎಂದು ಮಾಜಿ ಸಚಿವ, ಬೀಳಗಿ ಶಾಸಕ ಮುರುಗೇಶ ನಿರಾಣಿ ಗೇಲಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಸೋಮವಾರ ಬೀಳಗಿ ವಿಧಾನಸಭಾ ಕ್ಷೇತ್ರದ ತ್ರೆಮಾಸಿಕ ಕೆಡಿಪಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿ, ಕುಮಾರಸ್ವಾಮಿ ನುಡಿದಂತೆ ಎಲ್ಲಿ ನಡೆದಿದ್ದಾರೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ಮನೆ ಮಾಡುತ್ತೇನೆ. ಉತ್ತರ ಕರ್ನಾಟಕದಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸುತ್ತೇನೆ ಅಂದಿದ್ದರು. ಮನೆ ಮಾಡಿದರಾ? ಅವರು ಉತ್ತರದಲ್ಲಿ ಮನೆನೂ ಮಾಡಲಿಲ್ಲ, ಅವರ ಪಕ್ಷ ಇಲ್ಲಿ ಅಕೌಂಟು ತೆರೆಯಲಿಲ್ಲ ಎಂದು ಲೇವಡಿ ಮಾಡಿದರು.

ಸರ್ಕಾರ ಕೋಮಾದಲ್ಲಿದೆ
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೀಳಿಸುವ ಯಾವ ಪ್ರಯತ್ನವನ್ನು ಬಿಜೆಪಿ ಮಾಡಲ್ಲ. ಆಪರೇಶನ್ ಕಮಲ ಇಲ್ಲವೇ ಇಲ್ಲ. ಕಾಂಗ್ರೆಸ್ಸಿಗರಿಂದಲೇ ಸರ್ಕಾರ ಉರುಳುತ್ತದೆ. ಇಂತಹ ಕೋಮಾದಲ್ಲಿ ಇರುವ ಸರ್ಕಾರವನ್ನು ಬೀಳಿಸಿದ ಶಾಪಕ್ಕೆ ನಾವೇಕೆ ಗುರಿಯಾಗಬೇಕು? ಅತ್ಯಂತ ಕಡಿಮೆ ಅವಯಲ್ಲಿ ದೋಸ್ತಿ ಸರ್ಕಾರ ಪತನವಾಗುತ್ತದೆ. ಆ ಬಳಿಕ ನಮಗೆ ಅಗತ್ಯ ಇರುವ ಶಾಸಕರು ಬಿಜೆಪಿಗೆ ಬರಲಿದ್ದಾರೆ. ಎಷ್ಟು ಜನ ಶಾಸಕರು ಬೇಕೋ ಅಷ್ಟು ಜನರು ನಮ್ಮ ಪಕ್ಷದ ಸಂಪರ್ಕದಲ್ಲಿ ಇದ್ದಾರೆ. ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ. ರಾಜ್ಯದಲ್ಲಿ ಈಗಲೇ ಚುನಾವಣೆ ನಡೆದರೆ 177ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಹೀಗಾಗಿ ಸರ್ಕಾರ ವಿಸರ್ಜನೆ ಮಾಡಿದರೂ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದರು.

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕ ವಚನದಲ್ಲಿ ಮಾತನಾಡಿದವರಿಗೆ ರಾಜ್ಯದ ಜನರು ಸರಿಯಾದ ಸಂದೇಶ ನೀಡಿದ್ದಾರೆ. 28 ಸ್ಥಾನಗಳಲ್ಲಿ ಬಿಜೆಪಿ 25 ಪ್ಲಸ್ ಒಂದರಲ್ಲಿ ಗೆದ್ದಿದೆ. 37 ಶಾಸಕರು ಇದ್ದು, ಸರ್ಕಾರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಆಗಿ ಇರುವ ದಿನಗಳವರೆಗೂ ರಾಜ್ಯದ 30 ಜಿಲ್ಲೆಗಳನ್ನು ಒಂದೇ ರೀತಿ ನೋಡಬೇಕು. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ತರಹ ನೋಡುವುದು ಬೇಡ ಎಂದು ಅವರಿಗೆ ಸಲಹೆ ನೀಡುವುದಾಗಿ ತಿಳಿಸಿದರು.

ಮೆತ್ರಿ ಸರ್ಕಾರ ಬರೀ ಮೈಸೂರು ಭಾಗಕ್ಕೆ ಸೀಮಿತವಾಗಿದೆ. ಉತ್ತರ ಕರ್ನಾಟಕ ಸಾಕಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಂತಹ ಭೀಕರ ಬರಗಾಲದಲ್ಲೂ ಯಾವುದೇ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ಕುಡಿವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಗೋಶಾಲೆ ತೆರೆಯುತ್ತಿಲ್ಲ. ಈಗಲಾದರೂ ಸಮ್ಮಿಶ್ರ ಸರ್ಕಾರದ ಸಚಿವರು ಈ ಕಡೆಗೆ ಗಮನ ಹರಿಸಿ, ಬರ ಪರಿಹಾರ ಕಾರ್ಯಕ್ಕೆ ಮುಂದಾಗಬೇಕು ಎಂದು ಶಾಸಕ ಮುರುಗೇಶ ನಿರಾಣಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *