ಕೂಡಲಸಂಗಮ: ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಶಂಕರ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಶನಿವಾರ ಹುನಗುಂದ ತಾಲೂಕಿನ ನೀರಾವರಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತ ವಾದ ತಾಲೂಕಿನ ಖಜಗಲ್ಲ ಪುನರ್ವಸತಿ ಕೇಂದ್ರ ಹಾಗೂ ಮರೋಳ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆ ಈ ಅಧಿಕಾರಿಗಳ ಪ್ರವಾಸ ಪಟ್ಟಿಯಲ್ಲಿತ್ತು. ಆದರೆ ಅಧಿಕಾರಿಗಳು ಭೇಟಿ ನೀಡುವ ಕುರಿತು ಸ್ಥಳೀಯ ಅಧಿಕಾರಿಗಳು ಪುನರ್ವಸತಿ ಕೇಂದ್ರದ ಸಂತ್ರಸ್ತರಿಗೆ ಹಾಗೂ ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲದ ಕಾರಣ ಅಧಿಕಾರಿಗಳು ಅರ್ಧ ಗಂಟೆಯಲ್ಲಿ ಎರಡೂ ಕಾಮಗಾರಿಗಳನ್ನು ವೀಕ್ಷಿಸಿ ಮುಂದಕ್ಕೆ ಪ್ರವಾಸ ಬೆಳೆಸಿದರು.
ಸ್ವಾಧೀನ ಪಡಿಸಿಕೊಂಡ ಭೂಮಿ ಅಭಿವೃದ್ಧಿಪಡಿಸಲಾಗಿದ್ದು, ಆದರೆ, ಇದುವರೆಗೂ ಸಮರ್ಪಕ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ಪುನರ್ವಸತಿ ಕೇಂದ್ರಕ್ಕೆ ಕೂಡಲಸಂಗಮ ಪುನರ್ವಸತಿ ಕೇಂದ್ರದ ಮೂಲಕವೇ ಬರಲು ಮಾರ್ಗ ಕಲ್ಪಿಸಲಾಗಿದ್ದು, ಕೂಡಲಸಂಗಮ ಮುಖ್ಯರಸ್ತೆಗೆ ನೇರವಾಗಿಯೇ ಸಂಪರ್ಕ ಕಲ್ಪಿಸಬೇಕು ಎಂದು ಖಜಗಲ್ಲ ಕೆಲವು ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು.
ಪುನರ್ವಸತಿ ಕೇಂದ್ರದಿಂದ ಹರಿದುಬರುವ ನೀರು ರೈತರ ಜಮೀನುಗಳಲ್ಲಿ ನಿಂತು ಪ್ರತಿವರ್ಷ ಬೆಳೆಹಾನಿಯಾಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸಬೇಕು. ಪುನರ್ವಸತಿ ಕೇಂದ್ರದಲ್ಲಿನ ನೀರು ಮಲಪ್ರಭಾ ನದಿಗೆ ಹರಿಯುವಂತೆ ಚರಂಡಿ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಕುರಿತು ಪ್ರಸ್ತಾವನೆ ಕಳುಹಿಸುವಂತೆ ವಿ. ಶಂಕರ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಜಾಕ್ವೆಲ್ಗೆ ಭೇಟಿ: ಹುನಗುಂದ ಸಮೀಪ ಧನ್ನೂರ ರಸ್ತೆಯ ಮರೋಳ ಏತ ನೀರಾವರಿ ಯೋಜನೆಯ 2ನೇ ಹಂತದ ಹನಿ ನೀರಾವರಿ ಜಾಕ್ವೆಲ್ ಸ್ಥಳಕ್ಕೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ವಿ. ಶಂಕರ ಭೇಟಿ ನೀಡಿ ಪರಿಶೀಲಿಸಿದರು.
ತಹಸೀಲ್ದಾರ್ ಸುಭಾಷ ಸಂಪಗಾವಿ, ಕೆಬಿಜೆಎನ್ಎಲ್ ಮುಖ್ಯ ಅಭಿಯಂತ ಟಿ. ವೆಂಕಟೇಶ, ಅಧೀಕ್ಷಕ ಅಭಿಯಂತ ಜೋಶಿ, ಕಾರ್ಯಪಾಲಕ ಅಭಿಯಂತ ಎನ್.ಬಿ. ಸಾಂಬಾ, ಕಾರ್ಯನಿರ್ವಾಹಕ ಅಭಿಯಂತ ಮೋಹನರಾವ್ ಛಬ್ಬಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಎಂ.ವಿ. ನಾಗೂರ ಹಾಗೂ ಎಸ್.ಎಂ. ಪೂಜಾರ ಇತರರು ಇದ್ದರು.
ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾದ ಖಜಗಲ್ಲ ಗ್ರಾಮಸ್ಥರಿಗೆ ನಿವೇಶನಗಳ ಹಕ್ಕುಪತ್ರ ನೀಡಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಳುಗಡೆ ಆದ ಗ್ರಾಮದ 30 ಎಕರೆ ಕೃಷಿ ಭೂಮಿಯನ್ನು ಈಗಾಗಲೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ 8 ಎಕರೆ ಭೂಮಿ ಸ್ವಾಧೀನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ವಿ. ಶಂಕರ ಕೆಬಿಜಿಎನ್ಎಲ್ ವ್ಯವಸ್ಥಾಪಕ ನಿರ್ದೇಶಕಮರೋಳ ಏತ ನೀರಾವರಿ ಯೋಜನೆಯ 2ನೇ ಹಂತದ ಕಾಮಗಾರಿಗೆ ಸಾವಿರಾರು ಕೋಟಿ ರೂ. ಖರ್ಚಾಗಿದ್ದು, ಇದುವರೆಗೂ ಯಾವುದೇ ರೈತರ ಜಮೀನುಗಳಿಗೆ ಸರಿಯಾಗಿ ನೀರು ತಲುಪಿಲ್ಲ. ಅಧಿಕಾರಿಗಳು ಗುತ್ತಿಗೆ ಸಂಸ್ಥೆಗಳು ನೀಡುವ ಕಾಗದದಲ್ಲಿನ ಅಂಕಿ-ಅಂಶ ಮಾತ್ರ ಪರಿಶೀಲಿಸುತ್ತಾರೆ. ಆದರೆ ವಾಸ್ತವ ಸಂಗತಿ ಪರಿಶೀಲಿಸಿಲ್ಲ. ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ಅದೇ ಕಾರ್ಯ ಮಾಡಿದ್ದಾರೆ.
– ಮಲ್ಲನಗೌಡ ತುಂಬದ ರೈತ ಸಂಘದ ತಾಲೂಕು ಅಧ್ಯಕ್ಷ