ಸಚಿವರಿಗೆ ಸಂತ್ರಸ್ತರ ಸಮಸ್ಯೆ ಬಿಚ್ಚಿಟ್ಟ ಸ್ವಾಮೀಜಿ

ಬಾಗಲಕೋಟೆ: ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹದಿಂದ ಸರ್ವಸ್ವ ಕಳೆದುಕೊಂಡು ಬೀದಿಗೆ ಬಂದ ಸಂತ್ರಸ್ತರ ದಯನೀಯ ಸ್ಥಿತಿಯನ್ನು ನೂತನ ಸಚಿವ ಈಶ್ವರಪ್ಪ, ಶಾಸಕ ವೀರಣ್ಣ ಚರಂತಿಮಠ ಎದುರು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬಿಚ್ಚಿಟ್ಟರು.

ನಗರ ಭೋವಿ ಪೀಠದಲ್ಲಿ ಗುರುವಾರ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದ ಮಾತನಾಡಿದ ಅವರು, ಅನೇಕ ಗ್ರಾಮಗಳಿಗೆ ಭೇಟಿ ನೀಡಿದಾಗ ಅವರ ಸ್ಥಿತಿ ಕಂಡು ನೋವು ಆಗುತ್ತಿದೆ. ಸರ್ಕಾರ ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಔದಾರ್ಯದಿಂದ ನೆರವು ಒದಗಿಸಬೇಕು ಎಂದು ಸಲಹೆ ನೀಡಿದರು.

ಶ್ರೀಗಳ ಸಲಹೆ ಆಲಿಸಿದ ಮಾತನಾಡಿದ ನೂತನ ಸಚಿವ ಈಶ್ವರಪ್ಪ, ಸಂತ್ರಸ್ತರ ನೆರವಿಗೆ ಸರ್ಕಾರ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದೆ. ಈಗಾಗಲೇ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಶೆಡ್, ಸಂಪೂರ್ಣ ಮನೆ ಬಿದ್ದವರಿಗಾಗಿ ಬಾಡಿಗೆ ರೂಪದಲ್ಲಿ ಪರಿಹಾರ ಧನ, ಮನೆ ಕಟ್ಟಿಕೊಳ್ಳಲು ನಿಗದಿ ಪಡಿಸಿದ ಅನುದಾನದ ಬಗ್ಗೆ ವಿವರಿಸಿದರು.

ಸರ್ಕಾರ ಹೆಚ್ಚಿನ ನೆರವು ಒದಗಿಸಲು ಬದ್ಧವಾಗಿದೆ. ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಸಚಿವರು ನೆರೆಪೀಡಿತ ಪ್ರದೇಶಗಳಿಗೆ ಬಂದಿದ್ದೇವೆ. ಅಲ್ಲಿನ ವಾಸ್ತವ ಪರಿಸ್ಥಿತಿ ಅರಿತು, ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವುದಾಗಿ ಈಶ್ವರಪ್ಪ ಹೇಳಿದರು.

ಭೋವಿ ಗುರುಪೀಠದಿಂದ ಹೊಳೆಆಲೂರ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೂತನ ಸಚಿವ ಈಶ್ವರಪ್ಪ, ಶಾಸಕ ವೀರಣ್ಣ ಚರಂತಿಮಠ ಮತ್ತಿತರರು ವಿತರಿಸಿದರು.

ನಾಗನೂರು ಗುರುಬಸವ ಮಠದ ಬಸವಗೀತಾ ತಾಯಿ, ಶಾಸಕ ವೀರಣ್ಣ ಚರಂತಿಮಠ, ಮಾಜಿ ವಿಪ ಸದಸ್ಯ ನಾರಾಯಣಸಾ ಭಾಂಡಗೆ, ಭೋವಿ ಗುರುಪೀಠದ ಕಾರ್ಯದರ್ಶಿ ಅಶೋಕ ಲಿಂಬಾವಳಿ, ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಮತ್ತಿತರರು ಇದ್ದರು.

ರಾಜ್ಯ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಇರಲಿ. ದಕ್ಷ, ಪ್ರಾಮಾಣಿಕವಾಗಿ ಮತ್ತು ನೇರ ನಡೆನುಡಿಯ ವ್ಯಕ್ತಿಗಳು ಇರಬೇಕು. ಈ ಹಿನ್ನೆಲೆಯಲ್ಲಿ ಖಾಲಿ ಇರುವ ಸಚಿವ ಸ್ಥಾನಗಳಿಗೆ ಅರ್ಹರನ್ನು ಪರಿಗಣಿಸಬೇಕು. ಈ ಎಲ್ಲ ಅರ್ಹತೆ ಇರುವ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಸಚಿವ ಸ್ಥಾನ ಕೊಡಬೇಕು.
– ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೋವಿ ಗುರುಪೀಠ, ಬಾಗಲಕೋಟೆ

Leave a Reply

Your email address will not be published. Required fields are marked *