ಕೋಟೆನಾಡಲ್ಲಿ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹ

ಬಾಗಲಕೋಟೆ: ಕೊಡಗು ಹಾಗೂ ಕೇರಳ ಸಂತ್ರಸ್ತರ ನೆರವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪರಿಹಾರ ನಿಧಿ ಸಂಗ್ರಹಿಸಿದರು.

ನಗರದ ಹೊಳೆ ಆಂಜನೇಯ ದೇವಸ್ಥಾನದಲ್ಲಿ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಭೀಕರ ಮಳೆಯಿಂದಾಗಿ ನಿರಾಶ್ರಿತರಾಗಿರುವ ಎಲ್ಲರಿಗೂ ಸರ್ಕಾರದ ಮಟ್ಟದಲ್ಲಿ ಸಹಾಯ ಮಾಡುವುದು ಸಾಧ್ಯವಿಲ್ಲ. ಸರ್ಕಾರದೊಂದಿಗೆ ಸಾರ್ವಜನಿಕರು ಕೈ ಜೋಡಿಸಿ ನಿರಾಶ್ರಿತರಿಗೆ ಹೆಚ್ಚಿನ ನೆರವು ನೀಡಲು ಮುಂದಾಗಬೇಕು. ಕರವೇಯಿಂದ ಪ್ರತಿ ಜಿಲ್ಲೆಯಿಂದ 1 ಲಕ್ಷ ರೂ. ಪರಿಹಾರ ನಿಧಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ನಗರದ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಆರಂಭಗೊಂಡ ನಿಧಿ ಸಂಗ್ರಹ ಕಾರ್ಯ ಎಂ.ಜಿ.ರಸ್ತೆ, ತರಕಾರಿ ಮಾರುಕಟ್ಟೆ ಬಸ್ ನಿಲ್ದಾಣ ರಸ್ತೆಯಲ್ಲಿ ಸಂಚರಿಸಿತು. ಮಂಗಳವಾರ ನಡೆದ ನಿಧಿ ಸಂಗ್ರಹದ ವೇಳೆ 16,965 ರೂ. ಸಂಗ್ರಹಿಸಲಾಗಿದೆ.

ಕರವೇ ಕಾರ್ಯಕರ್ತರಾದ ಬಸವರಾಜ ಹಳ್ಳಪ್ಪನವರ, ಬಿ.ಡಿ. ನದಾಫ್, ಮಲ್ಲು ಶೆಟ್ಟರ, ಬಸವರಾಜ ಅಂಬಿಗೇರ, ಭಾಗ್ಯ ಬೆಟಗೇರಿ, ಮಹೇಶ ನಿಂಗನೂರ, ಆತ್ಮಾರಾಮ ನೀಲನಾಯಕ, ವೆಂಕಟೇಶ ದಾಸರ, ಶಿವಾನಂದ ನ್ಯಾಮಗೌಡರ, ಜನಕಪ್ಪ ಮಾದರ ಸೇರಿ ಇತರರಿದ್ದರು.