ಶ್ರೀಹುಚ್ಚೇಶ್ವರ ಮಠದ ನೂತನ ರಥಕ್ಕೆ ಅದ್ದೂರಿ ಸ್ವಾಗತ

ಬಾಗಲಕೋಟೆ: ಜಿಲ್ಲೆಯ ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಭಕ್ತರ ಸದಾಶಯದಂತೆ ನಿರ್ಮಾಣವಾದ 38 ಅಡಿ ಎತ್ತರದ ವಿಶೇಷ ವಿನ್ಯಾಸದ ನೂತನ ರಥ ಸೋಮವಾರ ಪಟ್ಟಣಕ್ಕೆ ಆಗಮಿಸಿತು. ಹರ್ಷೋದ್ಗಾರ ಮೂಲಕ ಸ್ವಾಗತಿಸಲಾಯಿತು.

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರದಲ್ಲಿ ನಿರ್ಮಾಣವಾಗಿರುವ ನೂತನ ರಥಕ್ಕೆ ಕಮತಗಿ-ಕೋಟೆಕಲ್ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷವಾದ ಪೂಜೆ ಸಲ್ಲಿಸಿದರು. ಲಾರಿಯಲ್ಲಿ ರಥವನ್ನು ವಿಶೇಷವಾದ ವಾದ್ಯ-ಮಜಲುಗಳ ಮೆರವಣಿಗೆ ಮೂಲಕ ಅದ್ದೂರಿಯಾಗಿ ಭರಮಾಡಿಕೊಳ್ಳಲಾಯಿತು.

ಶಾಖಾ ಮಠವನ್ನು ಹೊಂದಿರುವ ಕುಟಗನಕೇರಿ ಗ್ರಾಮದಲ್ಲಿ ರಥ ಪ್ರವೇಶ ಮಾಡುತ್ತಿದ್ದಂತೆ ಗ್ರಾಮಸ್ಥರು ಪುಷ್ಪ ಸಮರ್ಪಿಸಿ, ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಕೋಟೆಕಲ್, ಗುಳೇದಗುಡ್ಡ, ಹರದೊಳ್ಳಿ, ಇಂಜನವಾರಿ, ರಾಮಥಾಳ ಗ್ರಾಮಸ್ಥರು ದಾರಿಯುದ್ದಕ್ಕೂ ರಥದ ಮುಂದೆ ನೀರೆರೆದು ಭಕ್ತಿ ಭಾವ ಮೆರೆದರು.

ಹುಚ್ಚೇಶ್ವರ ಸ್ವಾಮೀಜಿ, ಹೊಸಳ್ಳಿ ಬೂದೀಶ್ವರ ಸ್ವಾಮೀಜಿ, ಮಾತೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ, ಸಿದ್ದಲಿಂಗಯ್ಯ ಕಲ್ಮಠ, ಗಣೇಶ ಹಿರೇಮಠ, ಯಲ್ಲಪ್ಪ ಮಜ್ಜಗಿ, ಶಶಿಧರ ಅರಿಶಿನಗೋಡಿ, ವಿದ್ಯಾಧರ ಮಳ್ಳಿ, ಚಂದ್ರು ಮಳ್ಳಿ, ಮುರಗೇಶ ಕಡ್ಲಿಮಟ್ಟಿ, ರಮೇಶ ಜಮಖಂಡಿ, ಯಲ್ಲಪ್ಪ ವಡ್ಡರ, ಸಿದ್ದು ಕುಂಬಾರ, ಚೇತನ ಕಡ್ಲಿಮಟ್ಟಿ, ಶಂಕರ ಬಡದಾನಿ ಅನೇಕರು ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಥದ ವಿಶೇಷ: ಹೊಳೆ ಆಲೂರಿನ ರಥಶಿಲ್ಪಿ ಪಾಂಡಪ್ಪ ಬಡಿಗೇರ ಅವರ ಕೈಚಳಕದಲ್ಲಿ ವಿಶೇಷವಾದ ವಿನ್ಯಾಸದೊಂದಿಗೆ ಸಾಗವಾನಿ ಕಟ್ಟಿಗೆಯಲ್ಲಿ ರಥ ಸುಂದರವಾಗಿ ಅರಳಿ ನಿಂತಿದೆ. ಅಂದಾಜು 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ರಥದಲ್ಲಿ ನಾಡಿಗೆ ಕೊಡುಗೆ ನೀಡಿದ ಸಂತರ, ಶರಣರ, ಶಿವಯೋಗಿಗಳ ಭಾವಚಿತ್ರಗಳಿವೆ.

ವಿಶ್ವಗುರು ಬಸವಣ್ಣ, ಹುಚ್ಚೇಶ್ವರ ಸಂಸ್ಥಾನಮಠದ ಮೂಲಪೀಠಾಧಿಪತಿ ಮಹಾಪ್ರಸಾದಿ ಮರುಳಶಂಕರ ದೇವರು, ಹುಚ್ಚೇಶ್ವರ ಮಠದ ವಿವಿಧ ಪೀಠಾಧಿಪತಿಗಳು, ಲಿಂ.ಹಾನಗಲ್ಲ ಕುಮಾರೇಶ್ವರ ಸ್ವಾಮೀಜಿ, ಲಿಂ.ಅಥಣಿ ಮುರುಘೇಂದ್ರ ಸ್ವಾಮೀಜಿ, ಲಿಂ.ಧಾರವಾಡದ ಮೃತ್ಯುಂಜಯ ಸ್ವಾಮೀಜಿ, ಇಳಕಲ್ಲ-ಚಿತ್ತರಗಿ ಲಿಂ. ವಿಜಯಮಹಾಂತ ಸ್ವಾಮೀಜಿ, ಅಧಿಕ ವರ್ಷ ಬದುಕಿ ಬಾಳಿ ನಾಡಿಗೆ ಧಾರ್ಮಿಕ ಬೋಧನೆ ಮಾಡಿದ ಹೊಸಳ್ಳಿ, ಲಿಂ.ಬೂದೀಶ್ವರ ಸ್ವಾಮೀಜಿ ಭಾವಚಿತ್ರಗಳು ಆಕರ್ಷಕವಾಗಿ ಮೂಡಿ ಬಂದಿವೆ.