ಬಾವಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಜಮಖಂಡಿ: ಆಟವಾಡಲು ತೆರಳಿದ್ದ ಬಾಲಕರಿಬ್ಬರು ಬುಧವಾರ ನಗರದ ಧರ್ಮದ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ನಗರದ ಹೈಸ್ಕೂಲ್ ಗಲ್ಲಿ ನಿವಾಸಿಗಳಾದ ನವನಾಥ ಪಾಟೀಲ ಹಾಗೂ ಅವರ ಸಹೋದರ ಗಜಾನನ ಪಾಟೀಲ ಅವರ ಮಕ್ಕಳಾದ ವೆಂಕಟೇಶ (8), ಹರೀಶ (7) ಮೃತರು. ಇಬ್ಬರು ಗಿರೀಶ ನಗರದ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದರು. ಇಬ್ಬರಿಗೂ ಈಜಲು ಬರುತ್ತಿರಲಿಲ್ಲ. ಮಂಗಳವಾರ ಸಂಜೆ ಆಟವಾಡುತ್ತ ಬಾವಿ ಕಡೆಗೆ ಬಂದು ಕಾಲು ಜಾರಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಮಕ್ಕಳು ಕತ್ತಲಾದರೂ ಮನೆಗೆ ಬಾರದಿದ್ದಾಗ ಪೋಷಕರು ಎಲ್ಲ ಕಡೆ ಹುಡುಕಾಟ ನಡೆಸಿದ್ದು, ಬಾವಿ ಬಳಿ ಆಟವಾಡುತ್ತಿದ್ದರು ಎಂಬುದು ಗೊತ್ತಾಗಿ ಬಾವಿಯೊಳಗೆ ಬಿದ್ದಿರುವ ಬಗ್ಗೆ ಖಚಿತವಾಗಿದೆ. ರಾತ್ರಿಯಿಡಿ ಅಗ್ನಿ ಶಾಮಕ, ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಲಿಲ್ಲ. ಬುಧವಾರ ಬೆಳಗ್ಗೆ ಬಾವಿಯಲ್ಲಿನ ನೀರು ಹೊರಹಾಕಿ ಬಾಲಕರ ಶವ ಹೊರ ತೆಗೆಯಲಾಯಿತು.

ಅಜ್ಜಿ ಕಣ್ತಪ್ಪಿಸಿ ಬಂದಿದ್ದರು:
ಸಂಜೆ ಬಾಲಕರಿಬ್ಬರು ಬಾವಿ ಹತ್ತಿರ ಆಟ ಆಡುತ್ತಿದ್ದರು. ಅದನ್ನು ಕಂಡ ಅಜ್ಜಿ ಮನೆಗೆ ಕರೆದುಕೊಂಡು ಹೋಗಿದ್ದರು. ಅಜ್ಜಿಯ ಕಣ್ತಪ್ಪಿಸಿ ಮತ್ತೆ ಬಾವಿ ಕಡೆಗೆ ಹೋಗಿದ್ದರು ಎಂದು ಹೇಳಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ
ಮನೆಯಲ್ಲಿ ತುಂಟತನ, ಓದಿನಲ್ಲಿ ಮುಂದಿದ್ದ ಬಾಲಕರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸಿಪಿಐ ಮಹಾಂತೇಶ ಹೊಸಪೇಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದರು. ಎಎಸ್‌ಐ ಸಂಗಾಪುರ ದೂರು ದಾಖಲಿಸಿಕೊಂಡರು.

ಮುಗಿಬಿದ್ದ ಸಾರ್ವಜನಿಕರು
ಬಾಲಕರು ಕಾಣೆಯಾಗಿದ್ದಾರೆ ಎಂದು ಮಂಗಳವಾರ ರಾತ್ರಿ ನಗರದ ಸಾಮಾಜಿಕ ಜಾಲತಾಣಗಳಲ್ಲಿ ಮೃತ ಬಾಲಕರ ಭಾವಚಿತ್ರ ಹರಿದಾಡಿತು. ಬುಧವಾರ ಬೆಳಗ್ಗೆ ಬಾವಿಯಲ್ಲಿ ಕಾರ್ಯಾಚರಣೆ ನಡೆಸುತಿದ್ದ ವೇಳೆ ಬಾವಿ ಸುತ್ತ ಸಾರ್ವಜನಿಕರು, ಗಲ್ಲಿ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾಮಯಿಸಿದ್ದರು.