ಜಮಖಂಡಿ ಸಂಸ್ಥಾನದಲ್ಲಿ ಉಪ ಕದನ ಕಾವು

ಅಶೋಕ ಶೆಟ್ಟರ

ಬಾಗಲಕೋಟೆ: ವಿಧಾನಸಭೆ ಚುನಾವಣೆ ಗುಂಗು ಇನ್ನೂ ಹಸಿಯಾಗಿರು ವಾಗಲೆ ಜಮಖಂಡಿ ಕ್ಷೇತ್ರದಲ್ಲಿ ಅದಾಗಲೇ ಉಪ ಚುನಾವಣೆ ರಂಗು ಪಡೆದುಕೊಂಡಿದೆ. ಮಿನಿ ಸಂಗ್ರಾಮಕ್ಕೆ ಮುಹೂರ್ತ ಫಿಕ್ಸ್ ಆಗಿದ್ದರಿಂದ ಕದನ ಕುತೂಹಲ ಮತ್ತಷ್ಟು ಇಮ್ಮಡಿಗೊಂಡಿದೆ.

ದಿ. ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳುವುದು ಕೈ ಪಕ್ಷಕ್ಕೆ ಪ್ರತಿಷ್ಠೆ ಆಗಿದ್ದರೆ, ಬಂಡಾಯದ ಬಿಸಿಗೆ ಸೋಲು ಅನುಭವಿಸಿದ್ದ ಬಿಜೆಪಿಗೆ ಕ್ಷೇತ್ರದಲ್ಲಿ ಕಮಲ ಅರಳಿಸುವುದು ಸವಾಲಿನ ಕೆಲಸವಾಗಿದೆ.

ಕಾಂಗ್ರೆಸ್ ಪಕ್ಷ ಅದಾಗಲೆ ಮಾನಸಿಕವಾಗಿ ಸಿದ್ಧವಾಗಿದ್ದು, ಅಭ್ಯರ್ಥಿಯನ್ನೂ ಘೋಷಿಸಿದೆ. ಅನುಕಂಪದ ಅಲೆ ಮತವನ್ನಾಗಿ ಪರಿವರ್ತಿಸಿ ಕೊಳ್ಳಲೆಂದು ದಿ. ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡರನ್ನು ಕಣಕ್ಕಿಳಿಸಿದೆ.

ಸಮಸ್ಯೆ ಇರುವುದು ಬಿಜೆಪಿಯಲ್ಲಿ. ಟಿಕೆಟ್ ಅಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಾರಿಗೆ ಟಿಕೆಟ್ ಎನ್ನುವುದು ಈವರೆಗೂ ಸುಳಿವು ನೀಡಿಲ್ಲ. ಪಟ್ಟಿಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೆಸರು ಮುಂಚೂಣಿಯಲ್ಲಿದೆಯಾದರೂ ಇತರೆ ಮುಖಂಡರೂ ಖುಷಿಯಿಂದ ಒಪ್ಪುವಂಥ ವಾತಾವರಣ ಕಮಲ ಪಡೆಯಲ್ಲಿ ಕಾಣಿಸುತ್ತಿಲ್ಲ. ಮತ್ತೆ ಬಂಡಾಯ ಇಲ್ಲವೆ, ಒಳಪೆಟ್ಟು ನೀಡುವ ಮುನ್ಸೂಚನೆ ಕಂಡು ಬರುತ್ತಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಹೆಚ್ಚಿನ ಕ್ಷೇತ್ರಗಳಲ್ಲಿ ವಿಜಯಮಾಲೆ ಧರಿಸಿದ್ದ ಬಿಜೆಪಿಗೆ ಜಮಖಂಡಿ ಕ್ಷೇತ್ರದಲ್ಲಿ ಗೆಲುವು ಸುಲಭವಾಗಿತ್ತು. ಆದರೆ ಪಕ್ಷದೊಳಗಿನ ಆಂತರಿಕ ಕಲಹದ ಪರಿಣಾಮ ಕ್ಷೇತ್ರ ತನ್ನ ಕೈಯಾರೆ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿತ್ತು.

ಬಿಜೆಪಿಯಲ್ಲಿ ಬಗೆ ಹರಿಯದ ಬಿಕ್ಕಟ್ಟು: ಈಗಲೂ ಸಹ ಕ್ಷೇತ್ರದಲ್ಲಿ ಅದೇ ಅಸಮಾಧಾನ ಇನ್ನೂ ಹೊಗೆಯಾಡುತ್ತಲೇ ಇದೆ. ಉಪ ಚುನಾವಣೆ ಹಿನ್ನೆಲೆ ಅದನ್ನು ಸರಿಪಡಿಸುವ ಕೆಲಸ ಈಗಾಗಲೆ ಆಗಬೇಕಿತ್ತು. ಆ ನಿಟ್ಟಿನಲ್ಲಿ ಪ್ರಯತ್ನ ಗಳೇ ನಡೆಯಲಿಲ್ಲ. ಉಪ ಸಮರಕ್ಕೆ ದಿನಾಂಕ ಪ್ರಕಟಗೊಂಡಿದ್ದು, ತಡಮಾಡಿದಷ್ಟು ಬಿಜೆಪಿಗೆ ಹೊರೆಯಾಗಲಿದೆ. ಬಿಜೆಪಿಯಲ್ಲಿ ಟಿಕೆಟ್ ಮೇಲೆ ಕಣ್ಣಿಟ್ಟವರ ಪಟ್ಟಿ ಮೂರು ಮತ್ತೊಂದು ಎನ್ನುವಂತಿದೆ. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೆಸರು ಮುಂಚೂಣಿಯಲ್ಲಿದ್ದರೂ ಅವರ ಬೆನ್ನಿಗೆ ಪೈಪೋಟಿಗೆ ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ, ಉದ್ಯಮಿ ಉಮೇಶ ಮಹಾಬಳಶೆಟ್ಟಿ, ರೈತ ಮುಖಂಡ ಬಿ.ಎಸ್. ಸಿಂಧೂರ ನಡೆಸುತ್ತಿದ್ದಾರೆ.

ಸಕ್ರಿಯವಾಗದ ಕಮಲ ನಾಯಕರು: ಈ ನಾಲ್ವರ ಪೈಕಿ ಪಕ್ಷ ಹಾಗೂ ಸಂಘ ಪರಿವಾರದ ಬೆಂಬಲ ಇರುವ ಶ್ರೀಕಾಂತ ಕುಲಕರ್ಣಿ ಪರವಾಗಿ ಹೆಚ್ಚಿನವರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ, ಅವರಿಗೆ ಟಿಕೆಟ್ ಕೊಟ್ಟರೂ ಆಕಾಂಕ್ಷಿಗಳನ್ನು ಸಮಾಧಾನಪಡಿಸಿ, ಪಕ್ಷದ ಪರವಾಗಿ ಕೆಲಸ ಮಾಡುವಂತೆ ಮನವೊಲಿಸುವ ಕೆಲಸವನ್ನಾದರೂ ಮಾಡಬೇಕಿದ್ದ ವರಿಷ್ಠರು ಈವರೆಗೂ ಅಂಥ ಪ್ರಯತ್ನಕ್ಕೆ ಮುಂದಾಗದಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ವೇಳೆ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್ ಪಕ್ಕಾ ಆದಲ್ಲಿ ಕೆಲ ಮುಖಂಡರು ಬೆಂಬಲಿಗರೊಂದಿಗೆ ಪಕ್ಷ ತೊರೆಯಲು ಸನ್ನದ್ಧರಾಗಿದ್ದಾರೆ. ಇಂತಹ ಪರಿಸ್ಥಿತಿ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೈ ಪಕ್ಷದ ಮುಖಂಡರು ಬಿಜೆಪಿ ಅತೃಪ್ತರ ಜತೆಗೆ ಮಾತುಕತೆ ಚುರುಕುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬೇರೆಯವರಿಗೆ ಮಣೆ ?: ಉಪ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಸೋಲಿಸಲು ಬಿಜೆಪಿ ವಲಯದಲ್ಲಿ ಮತ್ತೊಂದು ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಮುಖಂಡರಲ್ಲಿರುವ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ಯಾರಿಗೆ ಟಿಕೆಟ್ ಕೊಟ್ಟರೂ ಟಿಕೆಟ್ ವಂಚಿತರು ಕೈಕೊಡುವ ಸಾಧ್ಯತೆ ಹೆಚ್ಚಿವೆ. ಹೀಗಾಗಿ ಪಕ್ಕದ ಜಿಲ್ಲೆಯ ಹಾಗೂ ಜಮಖಂಡಿ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕ್ಷೇತ್ರದ ಮುಖಂಡರೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆದಿದೆ. ಜಮಖಂಡಿ ಕ್ಷೇತ್ರದಲ್ಲಿ ಬಲಾಢ್ಯವಾಗಿರುವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಲು ಅದೇ ಸಮುದಾಯದ ಹಾಗೂ ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರ ಬಗ್ಗೆ ಚರ್ಚೆ ನಡೆದಿದೆ. ಆದರೆ, ಅವರು ಒಪ್ಪುತ್ತಾರಾ ಎನ್ನುವ ಅನುಮಾನಗಳು ಇವೆ. ಯಾವುದಕ್ಕೂ ಮೂರ‌್ನಾಲ್ಕು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.