ಮೈಗೂರ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ

ಜಮಖಂಡಿ: ತಾಲೂಕಿನ ಮೈಗೂರ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಜಾಗವನ್ನು ಗ್ರಾಮಸ್ಥರು ಶನಿವಾರ ಬೆಳಗ್ಗೆ ನೀರಿನಿಂದ ಸ್ವಚ್ಛಗೊಳಿಸಿದರು.

ಬಯಲು ಶೌಚಮುಕ್ತ ಗ್ರಾಮವನ್ನಾಗಿಸಿ ಸ್ವಚ್ಛತೆ ಕಾಪಾಡಲು ಕಳೆದ 5 ದಿನಗಳಿಂದ ಗ್ರಾಮಸ್ಥರು ಒಟ್ಟಾಗಿ 12 ಶತಮಾನದ ಸಮಾಜ ಸುಧಾರಕರ ಹೆಸರಿನಲ್ಲಿ 9 ತಂಡ ರಚಿಸಿ ಗಸ್ತು ತಿರುಗುತ್ತ ಸ್ವಚ್ಛತೆ ಮಾಡುತ್ತಿದ್ದಾರೆ. ಗ್ರಾಮದ ಹೊರವಲಯದ ನದಿ ರಸ್ತೆ ಹಾಗೂ ಮುತ್ತೂರ ರಸ್ತೆ ಬದಿಯಲ್ಲಿ ಸ್ವಚ್ಛಗೊಳಿಸಿದರು. ಗ್ರಾಮದಲ್ಲಿ 30 ಕುಟುಂಬ ಗಳಿಗೆ ಶೌಚಗೃಹ ನಿರ್ಮಿಸಲು ಗ್ರಾಮದ ಮುಖಂಡರು ಖಾಲಿ ಯಿರುವ ಜಾಗ ಉಚಿತವಾಗಿ ನೀಡಿ ಸ್ವಚ್ಛತಾ ಆಂದೋಲನಕ್ಕೆ ಸಹಕರಿಸಿದ್ದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.

ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಶಿವಾನಂದ ಕಾನ್ವೆಂಟ್, ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕರು ಶನಿವಾರ ಬೆಳಗ್ಗೆ ಗ್ರಾಮಸ್ಥರ ಕಾರ್ಯಕ್ಕೆ ಬೆಂಬಲ ನೀಡಿ ಹಲಗೆ ಬಾರಿಸಿ ಬಯಲು ಶೌಚಕ್ಕೆ ಯಾರೂ ಬರಬೇಡಿ, ಆರೋಗ್ಯಕ್ಕಾಗಿ ಶೌಚಗೃಹಗಳನ್ನೇ ಬಳಸಿ ಎಂದು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.