ಬಿಎಸ್​ವೈ ಮತ್ತೆ ಸಿಎಂ ಆಗಲಿ

<< ಜಿ. ಕರುಣಾಕರ ರೆಡ್ಡಿ ಹೇಳಿಕೆ > ಶ್ರೀಕಾಂತ ಕುಲಕರ್ಣಿ ಪರ ಪ್ರಚಾರ >>

ಜಮಖಂಡಿ: ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಉತ್ತಮ ಆಡಳಿತಕ್ಕೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಇದಕ್ಕೆ ರಾಜ್ಯದ ಜನತೆ ಉತ್ಸುಕರಾಗಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ಮಾಜಿ ಸಚಿವ ಕರುಣಾಕರರೆಡ್ಡಿ ಪ್ರಚಾರ ನಡೆಸಿ ಮಾತನಾಡಿದರು. ಲೋಕಸಭೆ ಚುನಾವಣೆ ಆಗುವುದರೊಳಗೆ ರಾಜ್ಯದಲ್ಲಿ ಸರ್ಕಾರ ಬದಲಾಗಬಹುದು ಎಂದು ಭವಿಷ್ಯ ನುಡಿದರು.

ಸಿಎಂ ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದು 24 ಗಂಟೆಯಲ್ಲೇ ರೈತರ ಸಾಲ ಮನ್ನಾ ಮಾಡುವುದಾಗಿ ತಿಳಿಸಿ ಐದು ತಿಂಗಳು ಕಳೆದರೂ ಸಾಲ ಮನ್ನಾ ಮಾಡದೇ ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್​ನವರು ಒಲ್ಲದ ಮನಸ್ಸಿನಿಂದ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿ ಮರೆತು ಒಳಜಗಳದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಶ್ರೀಕಾಂತ ಕುಲಕರ್ಣಿ ಅವರು ಹಿರಿಯ ಅನುಭವಿ ರಾಜಕಾರಣಿಯಾಗಿದ್ದಾರೆ. ಅವರಿಂದ ಅಭಿವೃದ್ಧಿ ಯೋಜನೆಗಳು ಆಗುತ್ತವೆ ಎಂದು ಭರವಸೆ ನೀಡಿದರು.

ಮುಖಂಡ ಬಿ.ಎಸ್. ಸಿಂಧೂರ, ಪ್ರಕಾಶ ರಾಮಗೊಂಡ, ಶಿವಪ್ಪ ಹುನ್ನೂರ, ಭೀಮಶಿ ಹಾದಿಮನಿ, ಆರ್.ಟಿ. ಪಾಟೀಲ, ಜಗದೀಶ್ ಪರುತಬಾದಿ, ಸೋನ್ನಪ್ಪಿ ಕುಲಕರ್ಣಿ, ಡಾ. ವಿಜಯಲಕ್ಷ್ಮೀ ತುಂಗಳ, ಕಾಳಪ್ಪ ಗುಂಡಿ, ಮಲ್ಲಪ್ಪ ಅಥನಿ, ಅಡಿವೆಪ್ಪ ಬಾರಿಕಾಯಿ, ಪ್ರದೀಪ ನಂದೆಪ್ಪನವರ, ಮಲಕಯ್ಯ ಹಿರೇಮಠ ಮತ್ತಿತರರಿದ್ದರು.

ಶ್ರೀರಾಮುಲುಗೆ 420 ಎಂದು ಕರೆದಿಲ್ಲ: ಶ್ರೀರಾಮುಲುಗೆ ಸಿದ್ದರಾಮಯ್ಯನವರು 420 ಎಂದು ಕರೆದಿಲ್ಲ, 420 ಸೆಕ್ಷನ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಯಾವುದೇ ವಿಚಾರ ಇರಲಿ, ಯಾವ ಪಕ್ಷದ ನಾಯಕರಾಗಲಿ ವೈಯಕ್ತಿಕ ಟೀಕೆ, ಅಸಂಬದ್ಧ ಶಬ್ಧ ಬಳಕೆ ಸಲ್ಲ ಎಂದು ತಾಲೂಕಿನ ಮರೆಗುದ್ದಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಪರೇಷನ್ ಕಮಲ ಪ್ರಶ್ನೆಯೇ ಬರುವುದಿಲ್ಲ, ಎರಡೂ ಪಕ್ಷಗಳ ನಡುವೆ ಆಂತರಿಕ ಜಗಳ ನಡೆಯುತ್ತಿದೆ. ಅದು ಸ್ಪೋಟಗೊಂಡು ಸರ್ಕಾರ ಬಿದ್ದಾಗ ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದರು.

ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ, ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಬಳ್ಳಾರಿಯಲ್ಲಿ ನಾನು ಸಂಸದನಾಗಿದ್ದ ಸಂದರ್ಭದಲ್ಲಿ ಪ್ರತಿ ಗ್ರಾಮಕ್ಕೂ ಎಂಪಿ ಫಂಡ್ ನೀಡಿದ್ದೇನೆ. ದಾವಣಗೆರೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ರಾಜಕಾರಣದಿಂದ ದೂರ ಇಲ್ಲ, ಟಿವಿಯಲ್ಲಿ ಬಂದರೆ ಮಾತ್ರ ಸಕ್ರಿಯವಾಗಿ ಕಾರ್ಯ ಮಾಡುತ್ತಿದ್ದಾರಂತಲ್ಲ ಎಂದು ಹೇಳಿದರು.