ಕಗ್ಗೋಡದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ

ಬಾಗಲಕೋಟೆ: ಸಮಾಜದ ಸಹಕಾರದಿಂದ ಪ್ರಕೃತಿ ಆಧಾರಿತ ವಿಕಾಸದ ರಚನಾತ್ಮಕ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ತರುವುದು. ಕ್ರಿಯಾಶೀಲವಾಗಿರುವ ಸಜ್ಜನ ಶಕ್ತಿಗಳ ನಡುವೆ ಸಂವಾದ, ಸಹಭಾಗಿತ್ವ ಮತ್ತು ಸಹಕಾರ ಮೂಡಿಸುವ ಉದ್ದೇಶದಿಂದ ಭಾರತ ವಿಕಾಸ ಸಂಗಮದ ವತಿಯಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಭಾರತೀಯ ಸಂಸ್ಕೃತಿ ಉತ್ಸವ ನಡೆಸಲಾಗುತ್ತಿದೆ ಎಂದು ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಸಂರಕ್ಷಕ, ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ತಿಳಿಸಿದ್ದಾರೆ.

ಬಾಗಲಕೋಟೆ ಬಿವಿವಿ ಸಂಘದ ಮಿನಿ ಸಭಾ ಭವನದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದು ಐದನೇ ಉತ್ಸವವಾಗಿದ್ದು, ಈ ಸಲ ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದಲ್ಲಿ ನಡೆಸಲಾಗುತ್ತಿದೆ. ಭಾರತ ವಿಕಾಸ ಸಂಗಮ, ವಿಜಯಪುರದ ಸಿದ್ದೇಶ್ವರ ಸಂಸ್ಥೆ ಹಾಗೂ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಡಿಸೆಂಬರ್ 24 ರಿಂದ 31ರ ವರೆಗೂ ಈ ಉತ್ಸವ ನಡೆಯಲಿದ್ದು, ಅಷ್ಟು ದಿನದ ಕಾರ್ಯಕ್ರಮಗಳಲ್ಲಿ ಒಟ್ಟು 20 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿ ದಿನ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಉತ್ಸವದ ಮುಕ್ತಾಯದ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಉತ್ಸವದ ಎರಡನೇ ದಿನ ನಡೆಯುವ ಮಾತೃ ಸಂಗಮ ಕಾರ್ಯಕ್ರಮ ಗಿನ್ನಿಸ್ ದಾಖಲೆ ಅಂತನೇ ಹೇಳಬಹುದು. ಅಂದು ಎರಡು ಲಕ್ಷ ಮಕ್ಕಳಿಗೆ ಮಾತೆಯರಿಂದ ಕೈತುತ್ತು ಸಿಗಲಿದೆ. ಮಕ್ಕಳಿಂದ ಮಾತೆಯರ ಪಾದಪೂಜೆ, ಮಾತೃ ಶಕ್ತಿಯ ಮಹತ್ವ ಹಾಗೂ ಪಾತ್ರದ ಕುರಿತು ವಿಶೇಷ ಚರ್ಚೆ, ಗೋಷ್ಠಿಗಳು ನಡೆಯಲಿವೆ. ಹೀಗೆ ಪ್ರತಿದಿನ ಅತ್ಯಂತ ವಿಶಿಷ್ಟ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ವಿಜಯಪುರ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಭಾರತೀಯ ಸಂಸ್ಕೃತಿ ಉತ್ಸವ-5ಕ್ಕಾಗಿ ಈಗಾಗಲೇ ಕಗ್ಗೋಡದಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಅಂದಾಜು 120 ಎಕರೆ ಜಾಗದಲ್ಲಿ ಉತ್ಸವ ನಡೆಯಲಿದೆ. ಅಂದಾಜು ಒಂದು ಲಕ್ಷ ಜನರು ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಪೆಂಡಾಲ್ ಹಾಕಲಾಗುವುದು. 50 ಸಾವಿರ ಜನರಿಗೆ ಊಟದ ಮಂಟಪ ತಯಾರಾಗುತ್ತಿದೆ. 8 ದಿನಗಳ ಕಾಲ ಕಾರ್ಯಕ್ರಮ ಭಾಗವಹಿಸುವ 5 ಸಾವಿರ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗುವುದು. 30 ಎಕರೆ ಜಾಗದಲ್ಲಿ ರ್ಪಾಂಗ್ ವ್ಯವಸ್ಥೆಯೂ ಇರುತ್ತದೆ. ರಾಜ್ಯ, ಹೊರರಾಜ್ಯಗಳಿಂದ ಪ್ರತಿ ದಿನ ಎರಡರಿಂದ ಎರಡುವರೆ ಲಕ್ಷ ಜನರು ಬರಲಿದ್ದು, ಒಟ್ಟು 20 ಲಕ್ಷ ಜನರು ಇಡೀ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಊಟ, ಉಪಾಹಾರದ ವ್ಯವಸ್ಥೆ ಇರುತ್ತದೆ. ಈಗಾಗಲೇ ವಿಜಯಪುರ ಜಿಲ್ಲೆಯ ಮನೆ ಮನೆಗಳಿಂದ 5 ಲಕ್ಷ ರೊಟ್ಟಿ, 50 ಸಾವಿರ ಹೋಳಿಗೆ ತಯಾರಾಗಿ ಬರಲಿವೆ. ವಿಜಯಪುರ ಜಿಲ್ಲೆಯಲ್ಲಿ ಈ ಭಾರತೀಯ ಸಂಸ್ಕೃತಿ ಉತ್ಸವ ಸರ್ವಕಾಲಿಕ ದಾಖಲೆಯಾಗಲಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಸೇರಿದಂತೆ ಡಿಸೆಂಬರ್ 31 ರಂದು ನಡೆಯುವ ಧರ್ಮ ಮತ್ತು ಸಂಸ್ಕೃತಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಅಖಂಡ ವಿಜಯಪುರ ಜಿಲ್ಲೆಗಳಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬಿವಿವಿ ಸಂಘದ ಅಧ್ಯಕ್ಷ, ಬಾಗಲಕೋಟೆ ಶಾಸಕ ಡಾ. ವೀರಣ್ಣ ಚರಂತಿಮಠ ಮಾತನಾಡಿ, ಪ್ರಥಮ ದಿನ ಶೋಭಾಯಾತ್ರೆಯಲ್ಲಿ ಜಿಲ್ಲೆಯಿಂದ ಸ್ಥಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಜನರು ಜಾತ್ರೆಗೆ ತೆರಳುವ ರೀತಿಯಲ್ಲಿ ಈ ಉತ್ಸವದಲ್ಲಿ ಪಾಲ್ಗೊಂಡು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಸಜ್ಜನ, ಪ್ರಮೋದ ಕುಲಕರ್ಣಿ ಇದ್ದರು.