ಕೇಂದ್ರ ತಂಡಕ್ಕೆ ಕರಾಳತೆ ದರ್ಶನ

ಬಾಗಲಕೋಟೆ: ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಸೋಮವಾರ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿತು.

ಮೊದಲಿಗೆ ಜಮಖಂಡಿ ನಗರದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿತು. ಜನ, ಜಾನುವಾರುಗಳ ಸಂಕಟ, ಕೃಷಿ, ತೋಟಗಾರಿಕೆ ಬೆಳೆಗಳ ಹಾನಿ ಸೇರಿ ಪ್ರವಾಹದಿಂದ ಉಂಟಾದ ಸಮಸ್ಯೆಗಳ ಚಿತ್ರಣವನ್ನು ಈ ಪ್ರದರ್ಶನ ಬಿಡಿಸಿಟ್ಟಿತು. ನಂತರ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ವೀಕ್ಷಣೆ ಮಾಡಿತು.

ಭೇಟಿ ವೇಳೆ ಕೊಚ್ಚಿ ಹೋಗಿದ್ದ ಬೆಳೆಗಳು, ಬಾಡಿದ ಸಂತ್ರಸ್ತರ ಮುಖಗಳು, ನಿರಾಶ್ರಿತರ ಕಣ್ಣಾಲಿಗಳಲ್ಲಿ ತುಂಬಿ ಬರುತ್ತಿದ್ದ ಕಣ್ಣೀರು, ಅನಾಥವಾಗಿ ಬಿದ್ದಿದ್ದ ದನಕರುಗಳ ಕಳೇಬರಗಳು ಅಧ್ಯಯನ ತಂಡವನ್ನು ಕಂಗೆಡಿಸಿತು. ಪ್ರತಿ ಸ್ಥಳದಲ್ಲೂ ನಿರಾಶ್ರಿತರು ನೋವಿನ ಸರಮಾಲೆಯನ್ನೇ ಎಳೆ ಎಳೆಯಾಗಿ ಬಿಚ್ಚಿಟ್ಟರು. ಅಧಿಕಾರಿಗಳ ಆತುರಕ್ಕೆ ಕೆಲವು ಭಾಗದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡದಲ್ಲಿ ಗೋಳು ಹೇಳುತ್ತಿದ್ದ ಸಂತ್ರಸ್ತರ ಒಡಲಾಳದ ನೋವನ್ನು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಕೇಂದ್ರ ತಂಡದ ಎದುರು ಇಂಗ್ಲಿಷ್‌ನಲ್ಲಿ ವಿವರಿಸಿದರು.

ತಂಡದಲ್ಲಿನ ಅಧಿಕಾರಿಗಳಾದ ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆ ನಿರ್ದೇಶಕ ಎಸ್.ಸಿ. ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ನಿರ್ದೇಶಕ ಪುಣ್ಣುಸ್ವಾಮಿ, ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಬೆಂಗಳೂರಿನ ಪ್ರಾದೇಶಿಕ ಕಚೇರಿ ಅಧಿಕಾರಿ ಎಸ್.ಇ. ಜಿತೇಂದ್ರ ಪನವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿ ಅಧಿಕಾರಿ ವಿಜಯಕುಮಾರ್, ಗ್ರಾಮೀಣಾಭಿವೃದ್ಧ್ದಿ ಸಚಿವಾಲಯದ ಅಧಿಕಾರಿ ಮಾಣಿಕ್‌ಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪನಿರ್ದೇಶಕ ಒ.ಪಿ. ಸುಮನ್, ಬಾದಾಮಿ ತಾಲೂಕಿನ ನಂದಿಕೇಶ್ವರದಲ್ಲಿ ಬೆಳೆ, ರಸ್ತೆ ಹಾನಿ ಹಾಗೂ ಪಟ್ಟದಕಲ್ಲಿನಲ್ಲಿ ಮನೆ ಹಾನಿ ವೀಕ್ಷಣೆ ಮಾಡಿ ಮಧ್ಯಾಹ್ನ ಗದಗ ಜಿಲ್ಲೆಗೆ ತೆರಳಿತು.

ಕೇಂದ್ರ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿ ವಿವಿಧ ತಾಲೂಕಿನ ತಹಸೀಲ್ದಾರ್, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.

ಆರತಿ ಮಾಡಿದ್ರು, ಗೋಳು ತೋಡಿಕೊಂಡ್ರು
ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಪರಿಹಾರ ಕೇಂದ್ರಕ್ಕೆ ಆಗಮಿಸಿದ ಕೇಂದ್ರ ತಂಡಕ್ಕೆ ತಾವು ನೋವಿನಲ್ಲಿದ್ದರೂ ಸಂತ್ರಸ್ತ ಮಹಿಳೆಯರು ಆರತಿ ಮಾಡಿ ಸ್ವಾಗತ ಕೋರಿದರು. ಬಳಿಕ ಪ್ರವಾಹ ನಮ್ಗ ಹೊಸದಲ್ರೀ ಸಾಹೇಬ್ರ, ಈ ಬಾರಿ ಬಂದಿದ್ದ ಭಾರಿ ನೀರಿಗೆ ಜೀವನಾನ ಕೊಚ್ಚಿಕೊಂಡ ಹೋಗೈತ್ರೀ… ನೀವ ನಮ್ಮನ್ನ ಕಾಪಾಡಬೇಕ್ರೀ ಎಂದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿ ಅಧಿಕಾರಿಗಳ ಕಾಲಿಗೆ ಬಿದ್ದರು.

ಪ್ರತಿ ಎಕರೆಗೆ ಒಂದು ಲಕ್ಷ ರೂ. ಕೊಡಿ
ಮುಧೋಳ ತಾಲೂಕಿನ ಯಾದವಾಡ ಹಾಗೂ ಚಿಚಖಂಡಿ ಸೇತುವೆ ವೀಕ್ಷಿಸಿದ ಅಧ್ಯಯನ ತಂಡ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಿತು. ಈ ವೇಳೆ ಚಿಚಖಂಡಿ ಗ್ರಾಮದ ರೈತ ಕೃಷ್ಣಾ ಬುದ್ನಿ, ರನ್ನ ಸಕ್ಕರೆ ಕಾರ್ಖಾನೆ ನಿರ್ದೇಶಕ, ರೈತ ಮುಖಂಡ ಸದಾಶಿವ ತೇಲಿ ಮಾತನಾಡಿ, ಪ್ರವಾಹದಿಂದ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ. ಗೋವಿನಜೋಳ, ಈರುಳ್ಳಿ ಪತ್ತೆ ಇಲ್ಲದಂತೆ ಕೊಚ್ಚಿಕೊಂಡು ಹೋಗಿವೆ. ಜಮೀನುಗಳ ಲವಣಾಂಶ ಕಡಿಮೆಯಾಗಿದೆ. ಭೂಮಿ ಉಳುಮೆ ಮಾಡಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ಸದ್ಯ ಜಮೀನಿನಲ್ಲಿ ಆವರಿಸಿಕೊಂಡಿರುವ ಗಲೀಜು ಸ್ವಚ್ಛಗೊಳಿಸಲು ಪ್ರತಿ ಎಕರೆಗೆ 25 ಸಾವಿರ ರೂ. ಹಾಗೂ ಪ್ರತಿ ಎಕರೆಗೆ ಕನಿಷ್ಠ ಒಂದು ಲಕ್ಷ ರೂ. ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರವಾಹದಲ್ಲಿ ಅನೇಕ ದನಕರುಗಳು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿವೆ. ಅವುಗಳ ಕಳೇಬರ ದೊರೆಯದೆ ಪರಿಹಾರ ನೀಡಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಯಾವುದೇ ಮಾನದಂಡ ಇಲ್ಲದೆ ನೀರಿನಲ್ಲಿ ಕೊಚ್ಚಿಹೋದ ಜಾನುವಾರು ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಿಂದ ವಾಸ್ತವ ವಿವರಣೆ
ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಚಿಕ್ಕು, ಪೇರಲ, ಲಿಂಬೆ ತೋಟಕ್ಕೆ ಭೇಟಿ ನೀಡಿದ ತಂಡಕ್ಕೆ ವಿವರಣೆ ನೀಡಿದ ವಿ.ಪ. ಸದಸ್ಯ ಎಸ್.ಆರ್. ಪಾಟೀಲ, ಶತಮಾನದಲ್ಲಿಯೇ ಕಂಡು ಕೇಳರಿಯದ ಪ್ರವಾಹ ಇದಾಗಿದೆ. 1914ರಲ್ಲಿ ಇಂತಹ ಭೀಕರ ಪ್ರವಾಹ ಉಂಟಾಗಿತ್ತು. ಆದರೆ 2019ರ ಪ್ರವಾಹ ರೈತರ ಬದುಕನ್ನೇ ನುಚ್ಚು ನೂರು ಮಾಡಿದೆ. ರೈತರು ತಮ್ಮ ಜಮೀನಿನಲ್ಲಿ ಮರಳಿ ಉತ್ತಿ, ಬಿತ್ತಿ ಬೆಳೆಯಬೇಕಾದರೆ ಕನಿಷ್ಠ ಮೂರು ವರ್ಷ ಬೇಕಾಗುತ್ತದೆ. ಬೆಳೆ ಪರಿಹಾರ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಂಸದ ಪಿ.ಸಿ. ಗದ್ದಿಗೌಡರ ದನಿಗೂಡಿಸಿದರು.

ಪ್ರಾಥಮಿಕ ಭೇಟಿ ಎಂದ ಅಧಿಕಾರಿ
ಕೇಂದ್ರ ಅಧ್ಯಯನ ತಂಡ ಮುಖ್ಯಸ್ಥ, ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವತೆ ತಿಳಿದುಕೊಳ್ಳಲಾಗುತ್ತಿದೆ. ಕೃಷಿ ಬೆಳೆಗಳು, ಸೇತುವೆ, ರಸ್ತೆ, ಮನೆ ಸೇರಿ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುವುದು ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಅಗತ್ಯ ಕ್ರಮ ಕೈಗೊಂಡಿವೆ. ಇದು ಪ್ರಾಥಮಿಕ ಭೇಟಿಯಾಗಿದ್ದು, ಮತ್ತೊಮ್ಮೆ ಭೇಟಿ ನೀಡಿ ಅಧ್ಯಯನ ಕೈಗೊಂಡ ಬಳಿಕ ಪೂರ್ಣ ಪ್ರಮಾಣದ ನಷ್ಟದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಅಧ್ಯಯನ ತಂಡಕ್ಕೆ ಜಿಲ್ಲೆಯ ಪ್ರವಾಹ ಪರಿಸ್ಥಿತಿ, ಹಾನಿ, ಸಂತ್ರಸ್ತರ ನೋವಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂತ್ರಸ್ತರ ಪರವಾಗಿದ್ದು, ಜಿಲ್ಲೆಯ ನಿರಾಶ್ರಿತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರದಿಂದ ಉತ್ತಮ ಸ್ಪಂದನೆ ಸಿಗುತ್ತದೆಂಬ ನಿರೀಕ್ಷೆಯಿದೆ.
– ಆರ್. ರಾಮಚಂದ್ರನ್ ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *