ಬಣ್ಣದಲ್ಲಿ ಮಿಂದೆದ್ದ ಕೋಟೆನಗರಿ

ಬಾಗಲಕೋಟೆ: ವಿಜೃಂಬಣೆಯಿಂದ ಆರಂಭವಾಗಿದ್ದ ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬ ಎರಡನೇ ದಿನವಾದ ಶುಕ್ರವಾರ ಮತ್ತಷ್ಟು ರಂಗೇರಿತ್ತು. ಬಣ್ಣದೋಕುಳಿಯಲ್ಲೂ ಮತದಾನ ಜಾಗೃತಿ ಗಮನ ಸೆಳೆಯಿತು.

ಹಳೇ ನಗರ, ನವನಗರ, ವಿದ್ಯಾಗಿರಿಯ ಗಲ್ಲಿಗಲ್ಲಿಗಳಲ್ಲಿ ಬೆಳಗ್ಗೆಯಿಂದಲೆ ಬಣ್ಣದಾಟ ಅಬ್ಬರದಿಂದ ಆರಂಭಗೊಂಡಿತು. ಮಕ್ಕಳು, ಮಹಿಳೆಯರು, ವೃದ್ಧರು ಬಣ್ಣದಾಟವಾಡಿ ಸಂಭ್ರಮಿಸಿದರು. ಎರಡನೇ ದಿನ ವೆಂಕಟಪೇಟೆ, ಹಳಪೇಟೆ, ಜೈನ್‌ಪೇಟೆ ಮೂರು ಕಡೆಗಳಲ್ಲಿ ಬಣ್ಣದೋಕುಳಿ ನಡೆಯಿತು.

ಚಿಣ್ಣರು, ಯುವಕರು ಹಲಗೆ ಭಾರಿಸುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಕ್ಷಣ ಕ್ಷಣಕ್ಕೂ ಹೊರ ಹೊಮ್ಮುತ್ತಿದ್ದ ಹಲಗೆ ನೀನಾದಕ್ಕೆ ಕುಣಿದು ಕುಪ್ಪಳಿಸಿದರು. ನಗರದ ಬಸವೇಶ್ವರ ವೃತ್ತ, ವಲ್ಲಭಭಾಯಿ ಚೌಕ್, ಕೊತ್ತಲೇಶ ದೇವಸ್ಥಾನ, ಎಂ.ಜಿ. ರಸ್ತೆ, ಕಾಲೇಜು ರಸ್ತೆ ಸೇರಿ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಜನಸಾಗರವೇ ಸೇರಿ ಪರಸ್ಪರ ಗುಲಾಲ ಎರಚಿ ಸಂಭ್ರಮಿಸಿದರು. ಬಣ್ಣದೋಕುಳಿಯಲ್ಲಿ ಕೋಟೆನಗರಿ ಮಿಂದೆದ್ದಿತು.

ಬಗೆಬಗೆಯ ಬಣ್ಣ ಹಚ್ಚುತ್ತ ಬಣ್ಣದೋಕುಳಿ ರಂಗೇರುವಂತೆ ಮಾಡಿದರು. ಮಾಧ್ಯಾಹ್ನ ನಂತರ ನಗರದ ತುಂಬೆಲ್ಲ ಬಣ್ಣದ ಓಕುಳಿ ತೀವ್ರಗೊಂಡಿತು. ಮೂರು ಪೇಟೆಗಳ ಜನರು ಬಣ್ಣದ ಬಂಡಿಗಳ ಜತೆಗೆ ಕೋಟೆನಗರಿಯ ಪ್ರಮುಖ ರಸ್ತೆಗಳಲ್ಲಿ ಬಣ್ಣದ ನೀರು ಎರೆಚುತ್ತ ಸಾಗಿದರು. ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದವರೆಗೆ ಪರಸ್ಪರ ಎದುರಾದ ವೆಂಕಟಪೇಟೆ, ಹಳಪೇಟೆ, ಜೈನ್‌ಪೇಟೆಯ ಬಣ್ಣದ ಬಂಡಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬದಂತೆ ಗೋಚರಿಸಿತು.

ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೆಲ್ ಇರಿಸಿ ಎದುರು ಬದುರು ನಿಂತು ಪರಸ್ಪರ ಎರಚುತ್ತ ಬಣ್ಣದ ಹಬ್ಬದ ಮೆರಗು ಹೆಚ್ಚಿಸಿದರು. ಮೂರು ಪೇಟೆಗಳ ಜನರು ಒಂದು ಕಡೆಗೆ ಬಣ್ಣದಲ್ಲಿ ಸಮಾಗಮವಾಗುವ ದೃಶ್ಯ ನೋಡಲು ಸಹಸ್ರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರು. ಹಿಂದಿನ ವರ್ಷಗಳನ್ನು ಗಮನಿಸಿದರೆ ಎರಡನೇ ದಿನ ಬಣ್ಣದ ಬಂಡಿಗಳ ಕಡಿಮೆಯಾಗಿದ್ದು ಕ್ಷೀಣಿಸಿದ್ದು ನೋಡುಗರಿಗೆ ನಿರಾಸೆ ಮೂಡಿಸಿತು.

ಬಸವೇಶ್ವರ ವೃತ್ತದ ಗಣಪತಿ ದೇವಸ್ಥಾನ ಬಳಿದ ಹಮ್ಮಿಕೊಂಡಿದ್ದ ರೇನ್‌ಡಾನ್ಸ್ (ಕೃತಕ ಮಳೆ) ಕೋಟೆ ನಗರಿ ರಂಗಿನಾಟಕ್ಕೆ ಕಳೆ ತಂತು. ಮತದಾನ ಜಾಗೃತಿ ಜತೆ ಎಲ್ಲಡೆ ಮೋದಿ ಮೋದಿ ಘೋಷಣೆಗಳು ಮೊಳಗಿದವು.
ತುಂತುರು ಹನಿಗಳ ನಡುವೆ ಯುವಕರು ಕುಣಿದು ಕುಪ್ಪಳಿಸಿದರು. ಇದರೊಂದಿಗೆ ಡಿಜೆ ಸಾಂಗ್ ಸಾಥ್ ನೀಡಿದ್ದು ಆಕರ್ಷಿಸಿತು. ಚಪ್ಪಾಳೆ, ಶಿಳ್ಳೆಗಳು ಮೊಳಗಿದವು. ತುರಾಯಿ ಹಲಗೆಯ ನಿನಾದ ಹೋಳಿ ಹಬ್ಬದ ಮೆರಗು ಹೆಚ್ಚಿಸಿತು. ಡಿಜೆ ಸೌಂಡ್ ಮತ್ತು ಹಲಗೆ ನಿನಾದಕ್ಕೆ ಕೋಟೆ ನಗರಿ ಜನ ಮನಸೋತರು.