ನಗರಸಭೆಯಿಂದ ಕಳಪೆ ಕಾಮಗಾರಿ ?

ಬಾಗಲಕೋಟೆ: ಹಳೇ ಬಾಗಲಕೋಟೆ ಅಭಿವೃದ್ಧಿಗೆ ಲಕ್ಷಾಂತರ ರೂ. ಅನುದಾನ ಬಿಡುಗಡೆಯಾಗಿದ್ದು, ನಗರಸಭೆಯಿಂದ ಕೈಗೊಂಡಿರುವ ಸಿಸಿ ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಕಿರಾಣಿ ಮಾರ್ಕೆಟ್ ವರ್ತಕರು, ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹಳೇ ಮಾರ್ಕೆಟ್‌ನಲ್ಲಿನ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಬಳಕೆ ಮಾಡಿರುವ ಸಿಮೆಂಟ್, ಕಬ್ಬಿಣ ಹಾಗೂ ಮರಳು ಕಳಪೆಯಾಗಿವೆ. ದೂರು ನೀಡಿದರೂ ನಗರಸಭೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇದೆಲ್ಲ ಸುಳ್ಳು ಎಂದು ಸಬೂಬು ಹೇಳುತ್ತಿದ್ದಾರೆ. ಜೇಬಿಗೆ ಕಾಸು ಇಳಿಸಿಕೊಳ್ಳಲು ತರಾತುರಿಯಲ್ಲಿ ಕೆಲಸ ಮುಗಿಸಿದ್ದಾರೆ. ಗುತ್ತಿಗೆದಾರರ ಜತೆಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ‘ವಿಜಯವಾಣಿ’ ಮುಂದೆ ವರ್ತಕರು ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

29.62ಲಕ್ಷ ರೂ. ಕಾಮಗಾರಿ
ವಾರ್ಡ್ ನಂ.7ರ ವ್ಯಾಪ್ತಿಗೆ ಬರುವ ಹಳೇ ನಗರದ ಕಿರಾಣಿ ಮಾರ್ಕೆಟ್‌ನಲ್ಲಿರುವ ಹಂದ್ರಾಳ ಸಂದಿಯಲ್ಲಿ ಮತ್ತು ಟಾಂಗಾ ಸ್ಟಾೃಂಡ್‌ನಿಂದ ಹಳೇ ಅಂಚೆ ಕಚೇರಿ ಹತ್ತಿರದ ದೊಡ್ಡನಾಲಾದವರೆಗೆ ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗಾಗಿ ನಗರಸಭೆಯಿಂದ 2018ನೇ ಸಾಲಿನಲ್ಲಿ ಎಸ್‌ಎಫ್‌ಸಿ (ಮುಕ್ತ ನಿಧಿ)ಯಿಂದ 29.62 ಲಕ್ಷ ರೂ. ಮಂಜೂರಾಗಿತ್ತು. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಕೆಲಸ ನಡೆಯುವ ಸಂದರ್ಭದಲ್ಲಿಯೇ ಥರ್ಡ್ ಪಾರ್ಟಿ ಮೂಲಕ ಗುಣಮಟ್ಟ ಪರಿಶೀಲಿಸುವಂತೆ ನಗರಸಭೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇದುವರೆಗೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ವರ್ತಕರು ಬೇಸರ ವ್ಯಕ್ತಪಡಿಸಿದರು.

ನಗರ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ನಗರಸಭೆ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ನಿರ್ಲಕ್ಷೃ ಧೋರಣೆಯಿಂದಾಗಿ ಕಳಪೆ ಕಾಮಗಾರಿ ನಡೆಯುತ್ತಿದೆ. ಯಾರೊಬ್ಬರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ.

ಹಳೇ ನಗರದ ಕೆಲವು ಪ್ರದೇಶದಲ್ಲಿ ನಗರಸಭೆಯಿಂದ ಅಭಿವೃದ್ಧಿ ಕೈಗೊಳ್ಳಲಾಗಿದೆ. ತರಾತುರಿಯಲ್ಲಿ ಕೆಲಸ ಪೂರ್ಣಗೊಳಿಸಲಾಗಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಗುತ್ತಿಗೆದಾರರ ಜತೆ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ನಗರಸಭೆ ಸದಸ್ಯರು, ವರ್ತಕರು ದೂರು ನೀಡಿದರೂ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
– ಹೀರಾಲಾಲ್ ಗೋಡ್ ಗರಸಭೆ ಸದಸ್ಯ

ಹಳೇ ಮಾರ್ಕೆಟ್ ಚರಂಡಿ ಕಾಮಗಾರಿ ಬಗ್ಗೆ ದೂರು ಬಂದಿದೆ. ಕಳಪೆ ಕಾಮಗಾರಿ ಮಾಡಲು ಅವಕಾಶ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಥರ್ಡ್ ಪಾರ್ಟಿಯಿಂದ ಗುಣಮಟ್ಟ ಪರೀಕ್ಷೆ ಮಾಡಿಸಲಾಗುವುದು.
– ಎಂ.ಎಂ.ಸಾರವಾಡ ಸಹಾಯಕ ಇಂಜಿನಿಯರ್ ನಗರಸಭೆ

Leave a Reply

Your email address will not be published. Required fields are marked *